ನೋಡ ಬನ್ನಿ ಹೇಮಗಿರಿ ರಥೋತ್ಸವ

7

ನೋಡ ಬನ್ನಿ ಹೇಮಗಿರಿ ರಥೋತ್ಸವ

Published:
Updated:
ನೋಡ ಬನ್ನಿ ಹೇಮಗಿರಿ ರಥೋತ್ಸವ

ಕೆ.ಆರ್.ಪೇಟೆ: ರಥಸಪ್ತಮಿ ಬ್ರಹ್ಮರಥೋತ್ಸವಕ್ಕೆ ಹೆಸರಾದ ದಿನ. ಈ ದಿನದಂದು ನಾಡಿನ ಹಲವೆಡೆ ರಥೋತ್ಸವಗಳು ಜರುಗುತ್ತವೆ. ಅಂತೆಯೇ ಶತಮಾನಗಳಿಂದ ದನಗಳ ಜಾತ್ರೆಗೆ ಹಳೇ ಮೈಸೂರು ಪ್ರಾಂತ್ಯದಲ್ಲಿಯೇ ಹೆಸರಾಗಿರುವ ತಾಲ್ಲೂಕಿನ ಹೇಮಗಿರಿಯಲ್ಲಿ ಜ. 24ರಂದು ಜಾತ್ರೆ ನಡೆಯಲಿದೆ.

ವಾರದಿಂದಲೂ ಹೇಮಗಿರಿಯ ಆರಾಧ್ಯ ದೈವ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿಯ ಸನ್ನಿಧಿಯಲ್ಲಿ ದನಗಳ ಜಾತ್ರೆ ನಡೆಯುತ್ತಿದೆ. ಜ. 28ರ ರಾತ್ರಿ 8ಕ್ಕೆ ಹೇಮಾವತಿ ನದಿಯಲ್ಲಿ ಸ್ವಾಮಿಯ ಉತ್ಸವಮೂರ್ತಿಯ ವೈಭವದ ತೆಪ್ಪೋತ್ಸವ ನಡೆಯಲಿದೆ.

ಜನ– ಜಾನುವಾರುಗಳ ವೈಶಿಷ್ಟ್ಯ: ರೈತರ ಮೊಗದಲ್ಲಿ ಮಂದಹಾಸ ಚಿಮ್ಮುವಂತೆ ಮಾಡುವ ರಾಸುಗಳ ವ್ಯಪಾರಕ್ಕೆ ತಾಲ್ಲೂಕಿನಿಂದಲ್ಲದೆ, ಪಾಂಡವಪುರ, ನಾಗಮಂಗಲ, ಹಾಸನ ಜಿಲ್ಲೆಯ ಹೊಳೆನರಸೀಪುರ, ಚನ್ನರಾಯಪಟ್ಟಣ, ಮೈಸೂರು ಜಿಲ್ಲೆಯ ಕೆ.ಆರ್.ನಗರ ಮತ್ತಿರ ಕಡೆಗಳಿಂದಲೂ ರೈತರ ರಾಸುಗಳನ್ನು ಇಲ್ಲಿಗೆ ಕರೆತರಲಾಗುತ್ತದೆ. ವಾರ ಕಾಲ ಭಾರೀ ದನಗಳ ಜಾತ್ರೆಯೇ ನಡೆಯುತ್ತದೆ. ಜನ – ಜಾನುವಾರುಗಳಿಂದ ಹೇಮಗಿರಿ ತುಂಬಿ ತುಳುಕುತ್ತದೆ.

ವ್ಯಾಪಾರಕ್ಕಾಗಿ ಹುಬ್ಬಳ್ಳಿ, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಶಿವಮೊಗ್ಗ, ತುಮಕೂರು, ಹಾಸನ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ರೈತರು ಹಾಗೂ ದಳ್ಳಾಳಿಗಳು ಬರುತ್ತಾರೆ. ಈ ಜಾತ್ರೆಗೆ ಶತಮಾನಗಳ ಇತಿಹಾಸವಿದ್ದು ಮೈಸೂರು ಮಹಾರಾಜರು ಜಾತ್ರೆಗೆ ಪ್ರೋತ್ಸಾಹ ನೀಡಿದ್ದರು. ಈ ತಾಣದ ಮಹತ್ವದ ಬಗ್ಗೆ ಪ್ರಸಿದ್ಧ ಜಾನಪದ ವಿದ್ವಾಂಸ ಬಂಡಿಹೊಳೆ ರಂಗಸ್ವಾಮಿಭಟ್ಟರು ಹೇಮಗಿರಿ ಮಹಾತ್ಮೆ ಎಂಬ ಪುಸ್ತಕವನ್ನು ಬರೆದಿದ್ದಾರೆ.

ಜಾತ್ರೆಯ ಮಜ ದನದ ಬಾಲ ಹಿಡಿದಾಗ: ಜಾತ್ರೆಯಲ್ಲಿ ಕಡ್ಲೆಪುರಿ ಮೇಯುತ್ತಾ ದನಗಳ ಬಾಲ ಹಿಡಿಯುತ್ತಾ ಓಡಾಡುವುದೇ ಒಂದು ಖುಷಿ. ಒಂದಲ್ಲು, ಎರಡಲ್ಲು, ದನದ ಸುಳಿ, ಎತ್ತರ, ಸದೃಢ ಮೈಕಟ್ಟಿನ ಆಧಾರದ ಮೇಲೆ ಕನಿಷ್ಠ ₹ 50 ಸಾವಿರದಿಂದ ಆರಂಭವಾಗುವ ರಾಸುಗಳ ಬೆಲೆ

ಗರಿಷ್ಠ ₹ 8.5 ಲಕ್ಷದವರೆಗೂ ವಿಸ್ತರಿಸುತ್ತದೆ.

ಈ ಬಾರಿ ಸಾಕ್ಷಿಬೀಡಿನ ರೈತ ರಾಮಕೃಷ್ಣೇಗೌಡ ಎಂಬುವವರು ತಂದಿದ್ದ ರಾಸು ₹ 8.5 ಲಕ್ಷ ಬೆಲೆ ಬಾಳುತ್ತಿತ್ತು. ರಾಸುಗಳ ಜೊತೆಗೆ ರೈತರು ತಾವು ಪ್ರೀತಿಯಿಂದ ಸಾಕಿರುವ ಕುರಿಗಳು, ಆಡುಗಳು ಹಾಗೂ ನಾಯಿಗಳನ್ನು ಜಾತ್ರೆಗೆ ಪ್ರದರ್ಶನಕ್ಕೆ ತಂದು ಮಾರಾಟಕ್ಕೆ ಇಡುತ್ತಾರೆ.

ಜಾತ್ರೆಗೆ ಬರುವ ಉತ್ತಮ ರಾಸುಗಳಿಗೆ ಕೋರಮಂಡಲ್ ಸಕ್ಕರೆ ಕಾರ್ಖಾನೆ ಚಿನ್ನ ಮತ್ತು ಬೆಳ್ಳಿಯ ಉಡುಗೊರೆಯನ್ನು ನೀಡಿ ರೈತರನ್ನು ಪ್ರೋತ್ಸಾಹಿಸುತ್ತದೆ. ಬ್ರಹ್ಮರಥೋತ್ಸವದ ದಿನದ ಹೊತ್ತಿಗೆ ದನಗಳ ಸಂಖ್ಯೆ ಕಡಿಮೆಯಾಗುತ್ತದಾದರೂ ತೆಪ್ಪೋತ್ಸವ ದವರೆಗೂ ಜಾತ್ರೆಯ ಮೆರಗು ಇದ್ದೇ ಇರುತ್ತದೆ. ಕೆ.ಆರ್.ಪೇಟೆ ಪಟ್ಟಣದಿಂದ 8 ಕಿ.ಮಿ.ದೂರದಲ್ಲಿ ಈ ತಾಣವಿದ್ದು, ಹೋಗಿ ಬರಲು ಬಸ್, ಆಟೊ ಸಂಪರ್ಕವಿದೆ.

‘ಜಾತ್ರೆಗೆ ಬರುವ ರಾಸುಗಳು, ಎತ್ತಿನಗಾಡಿಗಳು ಹಾಗೂ ವಾಹನಗಳಿಗೆ ಸುಂಕವನ್ನು ವಿಧಿಸಲು ಮುಂದಾಗುವ ತಾಲ್ಲೂಕು ಆಡಳಿತ ಜಾತ್ರೆಗೆ

ಬಂದವರ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸುವುದೇ ಇಲ್ಲ’ ಎನ್ನುತ್ತಾರೆ ರೈತರಾದ ಅಕ್ಕಿಹೆಬ್ಬಾಳಿನ ಬೋರೇಗೌಡ, ಗುಳುವಿನ ಅತ್ತಿಗುಪ್ಪೆಯ ಪ್ರಕಾಶ್.

* * 

ಎಲ್ಲ ತಾಣಗಳಂತೆ ಹೇಮಗಿರಿಯಲ್ಲೂ ಮೂಲಸೌಲಭ್ಯಗಳ ಕೊರತೆ ಇದೆ. ಆ ಕೊರತೆಯನ್ನು ನೀಗಿಸಿ ಪ್ರವಾಸಿ ತಾಣವನ್ನಾಗಿಸಲು ಪ್ರಯತ್ನ ಮಾಡಲಾಗುವುದು

ಬಿ.ಎಲ್.ದೇವರಾಜು ಜಿಲ್ಲಾ ಪಂಚಾಯಿತಿ ಸದಸ್ಯ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry