ತೂಕ ವಿಳಂಬ: ರೈತರಿಗೆ ತೊಂದರೆ

7

ತೂಕ ವಿಳಂಬ: ರೈತರಿಗೆ ತೊಂದರೆ

Published:
Updated:
ತೂಕ ವಿಳಂಬ: ರೈತರಿಗೆ ತೊಂದರೆ

ಕುಷ್ಟಗಿ: ಇಲ್ಲಿನ ತೊಗರಿ ಖರೀದಿ ಕೇಂದ್ರದಲ್ಲಿ ಮಾರಾಟಕ್ಕೆ ತಂದ ತೊಗರಿ ಚೀಲಗಳು ತೂಕವಾಗದೆ ರೈತರು ತೊಂದರೆ ಅನುಭವಿಸುವಂತಾಗಿದೆ. ಖರೀದಿ ಕೇಂದ್ರದ ಅವ್ಯವಸ್ಥೆಯಿಂದ ಬೇಸತ್ತ ನೂರಾರು ರೈತರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದ್ದರು.

ಇದೇ ಸಂದರ್ಭದಲ್ಲಿ ಹೆಸರು ನೋಂದಣಿಯಾದ ಅನೇಕ ರೈತರು ತೊಗರಿ ಮೂಟೆಗಳನ್ನು ಸೋಮವಾರ ತಂದರೂ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ತೂಕ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಎಲ್ಲ ಮೂಟೆಗಳನ್ನು ಖರೀದಿ ಕೇಂದ್ರದಲ್ಲಿ ದಾಸ್ತಾನು ಮಾಡಿ ರೈತರು ಊರಿಗೆ ಮರಳಿದ್ದರು. ಆದರೆ, ಕೇಂದ್ರದ ಸಿಬ್ಬಂದಿ ಸೂಚನೆಯಂತೆ ಮಂಗಳವಾರ ಬಂದರೂ ಕೇಂದ್ರ ಬಾಗಿಲು ಮುಚ್ಚಿದ್ದು ಸಂಜೆವರೆಗೂ ತೆರೆದಿರಲಿಲ್ಲ.

ಈ ಕುರಿತು ತಹಶೀಲ್ದಾರ್‌ ಎಂ.ಗಂಗಪ್ಪ ಅವರನ್ನು ಭೇಟಿ ಮಾಡಿದ ರೈತರು, ತೊಗರಿ ತೂಕ ಮಾಡಿಸಲು ಸೂಚಿಸುವಂತೆ ಮನವಿ ಮಾಡಿದರು. ತೊಗರಿ ಖರೀದಿ ಮುಂದುವರಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಈ ಪ್ರಕ್ರಿಯೆ ಜವಾಬ್ದಾರಿ ಹೊತ್ತಿರುವ ಪಟ್ಟಣದ ಕೃಷಿ ಸಂಸ್ಕೃರಣೆ ಮತ್ತು ಮಾರಾಟ ಸಹಕಾರ ಸಂಘದ ಪ್ರತಿನಿಧಿಗಳು ಜಿಲ್ಲಾ ಕೇಂದ್ರಕ್ಕೆ ತೆರಳಿದ್ದು, ಬಂದ ನಂತರ ಚರ್ಚಿಸುವುದಾಗಿ ರೈತರಿಗೆ ಹೇಳಿದರು. ಆದರೆ, ಸಂಜೆವರೆಗೆ ಕಾದು ಕುಳಿತರೂ ಕೇಂದ್ರದ ಬಾಗಿಲು ತೆರೆಯದೆ ರೈತರು ನಿರಾಶೆಗೊಳಗಾದರು.

ಹೆಗ್ಗಣಗಳ ಕಾಟ: ಖರೀದಿ ಕೇಂದ್ರದ ಗೋದಾಮಿನಲ್ಲಿ ಹೆಗ್ಗಣಗಳಿದ್ದು ದಾಸ್ತಾನು ಮಾಡಿದ ಚೀಲಗಳು ಹರಿದು ತೊಗರಿ ಚೆಲ್ಲಿ ಹೋಗಿವೆ. ಇನ್ನೂ ಕೆಲವು ದಿನ ಕಳೆದರೆ ಎಲ್ಲ ರೈತರ ತೊಗರಿ ಚೀಲಗಳು ಏನಾಗುತ್ತವೆಯೊ ಗೊತ್ತಿಲ್ಲ ಎಂದು ಎಂದು ಮಾದಾಪುರದ ರೈತರಾದ ಸಂಗಪ್ಪ ಬೋದೂರು, ಶಂಕರಪ್ಪ ಕಂದಗಲ್ಲ. ತೆಗ್ಗಿಹಾಳದ ನಿಂಗಪ್ಪ ಕುರಿ, ಶಂಕರಪ್ಪ ಜಾಲಿಹಾಳ, ಪರಸಪ್ಪ ಚೌಡ್ಕಿ, ಪರಸಪ್ಪ ಹರಿಜನ, ಮಲ್ಲಪ್ಪ ಜ್ಯಾಲಿಹಾಳ, ಹನುಮಂತ ದೇಸಾಯಿ. ಕೂಡ್ಲೂರಿನ ಹನುಮಂತ ನಂದಿಹಾಳ, ರಮೇಶ ಗಂಗನಾಳ ಅಳಲು ತೋಡಿಕೊಂಡರು.

ಮಂಗಳವಾರ ತೊಗರಿ ತೂಕ ಮಾಡಿಸುವುದಾಗಿ ಅಧಿಕಾರಿಗಳು, ರೈತ ಸಂಘಟನೆ ಪ್ರಮುಖರು ಹೇಳಿದ್ದರು. ಆದರೆ, ಇಂದು ಇಲ್ಲಿ ಯಾರೂ ಇಲ್ಲ. ಎಪಿಎಂಸಿಯವರನ್ನು ವಿಚಾರಿಸಿದರೆ ಖರೀದಿ ಕೇಂದ್ರದ ಜವಾಬ್ದಾರಿ ನಮಗೆ ಸಂಬಂಧಿಸಿದ್ದಲ್ಲ ಎನ್ನುತ್ತಿದ್ದಾರೆ. ಎಲ್ಲರೂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ‘ದಲ್ಲಾಳಿ ಅಂಗಡಿಯಲ್ಲಿ ಕೊಟ್ಟಿದ್ದರೆ ಹೋದಷ್ಟು ದರಕ್ಕೆ ತೊಗರಿ ಮಾರಾಟವಾಗುತ್ತಿದ್ದವು. ಯಾಕಾದರೂ ಈ ಸರ್ಕಾರಿ ಖರೀದಿ ಕೇಂದ್ರಕ್ಕೆ ತಂದೆವೊ ಎನ್ನುವಂತಾಗಿದೆ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ರಕ್ಷಣೆ ಕೋರಿ ಡಿಸಿಗೆ ಪತ್ರ

ಈ ಮಧ್ಯೆ ತೊಗರಿ ಖರೀದಿ, ನೋಂದಣಿಗೆ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬರುತ್ತಾರೆ. ಹಾಗಾಗಿ ತಮಗೆ ರಕ್ಷಣೆ ಒದಗಿಸುವಂತೆ ಕೋರಿ ಸಹಕಾರ ಮಾರಾಟ ಮಹಾಮಂಡಳಿ ಸಿಬ್ಬಂದಿ ಮತ್ತು ಖರೀದಿ ಏಜೆನ್ಸಿಯಾಗಿರುವ ಕೃಷಿ ಸಂಸ್ಕರಣ ಸಹಕಾರ ಸಂಘದ ಪ್ರತಿನಿಧಿಗಳು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಅವರು, ಜ.29ರವರೆಗೆ ಕೇಂದ್ರ ತೆರೆಯದಂತೆ ಕೆಲವರು, ಇನ್ನೂ ಕೆಲವರು ತೂಕ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿರುವುದಾಗಿ ಸಂಘದ ಪ್ರತಿನಿಧಿಗಳಾದ ಚಂದ್ರಶೇಖರಯ್ಯ ಹಿರೇಮಠ, ವೀರೇಶ ‘ಪ್ರಜಾವಾಣಿ’ಗೆ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry