ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಫೀಜ್‌ ಬಂಧನ ಬೇಡ: ಹೈಕೋರ್ಟ್‌

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಲಾಹೋರ್‌:  ಮುಂಬೈ ದಾಳಿ ರೂವಾರಿ, ಜೆಯುಡಿ ಸಂಘಟನೆಯ ಮುಖ್ಯಸ್ಥ  ಉಗ್ರ ಹಫೀಜ್‌ ಸಯೀದ್‌ನನ್ನು ಮಾರ್ಚ್‌ 17ರವರೆಗೆ ಬಂಧಿಸಬಾರದು ಎಂದು ಸರ್ಕಾರಕ್ಕೆ ಲಾಹೋರ್‌ ಹೈಕೋರ್ಟ್‌ ಆದೇಶಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿಯ ಮೇಲ್ವಿಚಾರಣಾ ತಂಡವು ಗುರುವಾರ (ಜ.25) ಇಸ್ಲಾಮಾಬಾದ್‌ಗೆ ಭೇಟಿ ನೀಡುತ್ತಿದ್ದು, ವಿಶ್ವಸಂಸ್ಥೆಯ ನಿರ್ಬಂಧಗಳನ್ನು ಪಾಕಿಸ್ತಾನ ಅನುಸರಿಸುತ್ತಿದೆಯೇ ಎಂದು ಪರಿಶೀಲನೆ ನಡೆಸಲಿದೆ. ಹಫೀಜ್‌ ಹಾಗೂ ಆತನ ಸಂಘಟನೆಗಳ ಮೇಲೆ ವಿಶ್ವಸಂಸ್ಥೆ ಹೇರಿದ ನಿರ್ಬಂಧಗಳನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದು ಭಾರತ ಹಾಗೂ ಅಮೆರಿಕ ದೇಶಗಳು ಪಾಕಿಸ್ತಾನದ ವಿರುದ್ಧ ದೂರುತ್ತಿರುವ ನಡುವೆಯೇ ಈ ತಂಡ ಇಸ್ಲಾಮಾಬಾದ್‌ಗೆ ಭೇಟಿ ನೀಡುತ್ತಿದೆ.

2008ರ ಡಿಸೆಂಬರ್‌ನಲ್ಲಿ ಹಫೀಜ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ '1267 ನಿರ್ಬಂಧ'ಗಳ ಪಟ್ಟಿಗೆ ಸೇರಿಸಿದೆ. ಪಾಕಿಸ್ತಾನದ ನಿಷೇಧಿತ ಸಂಘಟನೆಗಳ ಕುರಿತ ಪರಿಶೀಲನೆಗೆ ಈ ತಂಡ ಭೇಟಿ ನೀಡುತ್ತಿದೆ. ಈ ಸಂದರ್ಭದಲ್ಲಿ ತನ್ನನ್ನು ಬಂಧಿಸದಂತೆ ಆದೇಶಿಸುವಂತೆ ಕೋರಿ ಹಫೀಜ್‌ ಕೋರ್ಟ್‌ ಮೊರೆ ಹೋಗಿದ್ದ. ‘ಮುಂಬೈ ದಾಳಿಗೆ ತಾನೇ ಕಾರಣ ಎಂದು ಭಾರತ ಮತ್ತು ಅಮೆರಿಕ ಪರಿಗಣಿಸಿದೆ. ತನ್ನನ್ನು ಉಗ್ರನ ಪಟ್ಟಿಗೆ ಸೇರಿಸಿದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ನನ್ನನ್ನು ಬಂಧಿಸುವ ಸಾಧ್ಯತೆ ಇದೆ’ ಎಂದು ಹಫೀಜ್‌ ಕೋರ್ಟ್‌ಗೆ ಹೇಳಿದ್ದ. ಅವನ ಮನವಿಯನ್ನು ನ್ಯಾಯಮೂರ್ತಿ ಅಮೀನ್‌ ಅಮಿನುದ್ದೀನ್‌ ಖಾನ್‌ ಮಾನ್ಯ ಮಾಡಿದ್ದಾರೆ.

ಈ ಮಧ್ಯೆ, ಹಫೀಜ್‌ ಹಾಗೂ ಆತನ ಸಂಘಟನೆಗಳ ನೇರ ಭೇಟಿಗೆ ಅವಕಾಶ ನೀಡದೇ ಇರಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT