₹197 ಕೋಟಿ ಹಗರಣ: 15 ಅಧಿಕಾರಿಗಳ ವಿರುದ್ಧ ದೂರು

7

₹197 ಕೋಟಿ ಹಗರಣ: 15 ಅಧಿಕಾರಿಗಳ ವಿರುದ್ಧ ದೂರು

Published:
Updated:

ಬೆಂಗಳೂರು: ರಾಜರಾಜೇಶ್ವರಿ ನಗರ ವಲಯದಲ್ಲಿ ಇಬ್ಬರು ಜಂಟಿ ಆಯುಕ್ತರು ಸೇರಿ 15 ಅಧಿಕಾರಿಗಳು ಪಾಲಿಕೆಯ ಸುಮಾರು ₹197 ಕೋಟಿಯನ್ನು ‌ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಇದೇ ವಲಯದಲ್ಲಿ ಈ ಹಿಂದೆ ಜಂಟಿ ಆಯುಕ್ತರಾಗಿದ್ದ ವೀರಭದ್ರಪ್ಪ ಮತ್ತು ಈಗಿನ ಜಂಟಿ ಆಯುಕ್ತ ತಿಪ್ಪೇಸ್ವಾಮಿ, ಮುಖ್ಯ ಎಂಜಿನಿಯರ್‌ಗಳಾದ ನಾಗರಾಜ್, ಗೋವಿಂದರಾಜ್, ಎಂಜಿನಿಯರ್‌ಗಳಾದ ಇದಯ ವೆಂಡನ್, ರುದ್ರವಾಡಿ, ಶ್ರೀನಿವಾಸ್, ಡಿ.ಸಿ.ಉಮೇಶ್, ಲೋಕೇಶ್, ಬಸವರಾಜ್, ಭಾಸ್ಕರ್, ನಂಜಪ್ಪ ವೀರಪ್ಪ, ವೆಂಕಟೇಶ್, ವಿಜಯ್ ಕುಮಾರ್ ಮತ್ತು ಶಶಿಕುಮಾರ್ ವಿರುದ್ಧ ಎಸಿಬಿ, ಬಿಎಂಟಿಎಫ್‌, ಲೋಕಾಯುಕ್ತ ಹಾಗೂ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಡಿ.ಸಿ ಬಿಲ್‌ (ತುರ್ತು ಕಾಮಗಾರಿಗಳಿಗೆ ಅಂದಾಜು ಪಟ್ಟಿಯ ಹಣವನ್ನು ಕಾಮಗಾರಿ ಪೂರ್ಣಗೊಂಡ ನಂತರ ಬಿಡುಗಡೆ ಮಾಡುವ ಪ್ರಕ್ರಿಯೆ) ಹೆಸರಿನಲ್ಲಿ 2014ರಿಂದ ಇದುವರೆಗೆ ₹196,71,58,052 ಬಿಡುಗಡೆ ಮಾಡಿ, ದುರ್ಬಳಕೆ ಮಾಡಿಕೊಂಡಿದ್ದಾರೆ. ನಿಯಮ ಪ್ರಕಾರ ಡಿ.ಸಿ ಬಿಲ್ಲಿನ ಮೊತ್ತ ₹1 ಲಕ್ಷ ಮೀರುವಂತಿಲ್ಲ. ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಕರ್ನಾಟಕ ಪಾರದರ್ಶಕ ಸಂಗ್ರಹಣೆಗಳ ಕಾಯ್ದೆ (ಕೆಟಿಪಿಪಿ) ಅನ್ವಯ ಟೆಂಡರ್ ಆಹ್ವಾನಿಸಿ, ಕಾರ್ಯಾದೇಶ ನೀಡಬೇಕು. ಆದರೆ, ಈ ಅಧಿಕಾರಿಗಳು ಎಲ್ಲ ನಿಯಮ ಉಲ್ಲಂಘಿಸಿ ಹಣ ಲೂಟಿ ಮಾಡಿದ್ದಾರೆ. ಈ ಹಗರಣವನ್ನು ರಾಜ್ಯ ಸರ್ಕಾರ ಸಿಐಡಿ ಅಥವಾ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry