ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಕ’ವೃಷ್ಟಿ ಶುರು!

Last Updated 25 ಜನವರಿ 2018, 19:30 IST
ಅಕ್ಷರ ಗಾತ್ರ

ನಕ’ ಎಂದರೆ ಚಿನ್ನ ಎಂದು ಅರ್ಥ. ಈ ಚಿತ್ರದ ಹೆಸರಿನಲ್ಲಿಯೇ ನಿರ್ದೇಶಕರು ಚಿನ್ನ ಇಟ್ಟಿದ್ದಾರೆ. ಸಿನಿಮಾ ಖಂಡಿತ ನಮಗೆ ಕನಕವೃಷ್ಟಿ ತರುತ್ತದೆ’

ಸಿನಿಮಾ ಡೈಲಾಗ್‌ ರೀತಿಯಲ್ಲಿಯೇ ಹೀಗೆ ಹೇಳಿ ನಕ್ಕರು ವಿತರಕ ಪಿವಿಎಲ್‌ ಶೆಟ್ಟಿ. ‘ಹಾಸ್ಯ, ಸೆಂಟಿಮೆಂಟ್‌, ಹಾಡುಗಳು ಎಲ್ಲವೂ ಚೆನ್ನಾಗಿವೆ. ಜತೆಗೆ
ಡಾ.ರಾಜ್‌ ಅವರನ್ನೂ ಪ್ರತಿ ದೃಶ್ಯದಲ್ಲಿಯೂ ಚೆನ್ನಾಗಿ ಬಿಂಬಿಸಿದ್ದಾರೆ’ ಎಂದು ತಮ್ಮ ನಂಬಿಕೆಗೆ ಕಾರಣವನ್ನೂ ಅವರು ಹೇಳಿದರು.

ನಿರ್ದೇಶಕ ಚಂದ್ರು ಅವರ ನಿರ್ದೇಶನ ಮತ್ತು ನಿರ್ಮಾಣದ ‘ಕನಕ’ ಈ ವಾರ (ಜ. 26) ತೆರೆಕಾಣಲಿದೆ. ಬಿಡುಗಡೆಯ ಪತ್ರಿಕಾಗೋಷ್ಠಿಗೆ ಮಾನ್ವಿತಾ ಹರೀಶ್‌ ಬಿಟ್ಟರೆ ಉಳಿದ ಯಾವ ಕಲಾವಿದರೂ ಹಾಜರಿರಲಿಲ್ಲ. ‘ದುನಿಯಾ ವಿಜಯ್‌’ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಹೋಗಿರುವುದರಿಂದ ಬಂದಿಲ್ಲ’ ಎಂದು ಸ್ಪಷ್ಟೀಕರಣ ನೀಡಿದರು ಚಂದ್ರು.

‘ನನ್ನ ಮೊದಲ ಸಿನಿಮಾ ‘ಕೆಂಡಸಂಪಿಗೆ’ ಶುರುವಾಗುವುದು ಕೆ ಅಕ್ಷರದಿಂದ. ಈಗ ಬಿಡುಗಡೆಯಾಗುತ್ತಿರುವ ‘ಕನಕ’ ಚಿತ್ರವೂ ಕೆ ಅಕ್ಷರದಿಂದಲೇ ಶುರುವಾಗುತ್ತದೆ. ಆದ್ದರಿಂದ ಇದೂ ಕೂಡ ಗೆಲ್ಲುತ್ತದೆ’ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು ನಾಯಕಿ ಮಾನ್ವಿತಾ ಹರೀಶ್‌. ಜತೆಗೆ ‘ಕನಕವೃಷ್ಟಿ ಆದ ಮೇಲೆ ಹೇಳಿ. ನಾನೂ ಎರಡು ಬ್ಯಾಗ್‌ ತೆಗೆದುಕೊಂಡು ನಿಮ್ಮ ಮನೆಗೆ ಬರುತ್ತೇನೆ’ ಎಂದು ನಗುತ್ತಲೇ  ಚಂದ್ರು ಅವರ ಕಾಲೆಳೆದರು.

ಈ ಚಿತ್ರದಲ್ಲಿ ದುನಿಯಾ ವಿಜಯ್‌, ರಾಜ್‌ಕುಮಾರ್‌ ಅವರ ಅಭಿಮಾನಿ. ಆಟೊ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್‌ ಅಭಿಮಾನಿಗಳನ್ನೂ ತಮ್ಮ ಪ್ರೇಕ್ಷಕವಲಯಕ್ಕೆ ಸೇರಿಸಿಕೊಳ್ಳುವ ದೃಷ್ಟಿಯಿಂದ ಚಂದ್ರು ಹೊಸದೊಂದು ಯೋಚನೆಯನ್ನೂ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೂ ಎರಡು ದಿನ ಮುಂಚೆಯೇ ನರ್ತಕಿ ಚಿತ್ರಮಂದಿರದ ಎದುರು ಅತಿ ಎತ್ತರದ ರಾಜ್‌ ಕಟೌಟ್‌ ನಿಲ್ಲಿಸಿರುವುದಲ್ಲದೇ, ಅಣ್ಣಮ್ಮನ ದೇವಾಲಯದಿಂದ ಸಾವಿರಾರು ಆಟೊ ಚಾಲಕರ ರ‍್ಯಾಲಿಯನ್ನೂ ಮಾಡಿಸಿದ್ದಾರೆ.

‘ಚಂದ್ರು ಅವರು ಇದು ತನ್ನದೇ ನಿರ್ಮಾಣದ ಸಿನಿಮಾ ಎನ್ನುವುದನ್ನು ಮರೆತು ಕೆಲಸ ಮಾಡಿದ್ದಾರೆ. ಯಾವ ದೃಶ್ಯದಲ್ಲಿಯೂ ಯಾವುದೇ ಕೊರತೆ ಕಂಡು ಬರುವುದಿಲ್ಲ. ಇಡೀ ಸಿನಿಮಾ ಇಷ್ಟು ಚೆನ್ನಾಗಿ ಬರಲು ಚಂದ್ರು ಅವರ ಸಿನಿಮಾ ಪ್ರಿತಿಯೇ ಕಾರಣ’ ಎಂದು ಪ್ರಶಂಸಿಸಿದರು.

ಕೊನೆಯಲ್ಲಿ ಮಾತಿಗಿಳಿದ ಚಂದ್ರು, ‘ಈ ಚಿತ್ರದ ಮೂಲಕ ಅಣ್ಣಾವ್ರ ಸಿನಿಮಾಗಳ ಆದರ್ಶಗಳನ್ನು ಹೇಳಹೊರಟಿದ್ದೇನೆ. ನಾನು ಮಣ್ಣಿನ ವಾಸನೆಯನ್ನು ಉಂಡು ಬೆಳೆದವನು. ಭಾವನೆಗಳಿಗೆ ಬೆಲೆ ಕೊಡುವವನು. ಕಥೆಯನ್ನು ನಂಬಿ ಸಿನಿಮಾ ಮಾಡುತ್ತೇನೆ. ಖರ್ಚು ನೋಡಬಾರದು. ಕನಸು ಕಾಣಬೇಕು. ಆ ಕನಸನ್ನು ತೆರೆಯ ಮೇಲೆ ಸಾಕಾರಗೊಳಿಸಬೇಕು ಎನ್ನುವುದು ನನ್ನ ತತ್ವ. ಅದರ ಪ್ರಕಾರ ಈ ಸಿನಿಮಾ ಮಾಡಿದ್ದೇನೆ. ಪ್ರೇಕ್ಷಕ ನನ್ನನ್ನು ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT