‘ಬಂದ್’ಗೆ ಪರ್ಯಾಯ ಹುಡುಕೋಣವೇ?

7

‘ಬಂದ್’ಗೆ ಪರ್ಯಾಯ ಹುಡುಕೋಣವೇ?

Published:
Updated:
‘ಬಂದ್’ಗೆ ಪರ್ಯಾಯ ಹುಡುಕೋಣವೇ?

ನಿನ್ನೆಯಷ್ಟೇ ಒಂದು ಬಂದ್‌ ಮುಗಿಯಿತು. ಮತ್ತೊಂದಕ್ಕೆ ಸಿದ್ಧರಾಗಬೇಕಿದೆ. ಬೇಡಿಕೆಗಳ ಬಗ್ಗೆ ಸರ್ಕಾರಗಳ ಗಮನ ಸೆಳೆಯಲು ಬಂದ್ ಬಿಟ್ಟರೆ ಬೇರೆ ದಾರಿ ಇಲ್ಲವೇ? ನಾವು ಅಷ್ಟೊಂದು ಅಸಹಾಯಕರೇ? ನಮ್ಮ ಕೈ ಕಾಲುಗಳನ್ನು ನಾವೇ ಕಟ್ಟಿಹಾಕಿಕೊಳ್ಳುವ ಬಂದ್ ಬೇಕೇ?

ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು. ಅವರಿಗೆ ಪ್ರತಿಭಟಿಸುವ ಹಕ್ಕು ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜನಜೀವನ ಸ್ಥಗಿತಗೊಳಿಸುವುದರಿಂದ ಬೇಡಿಕೆಗಳು ಈಡೇರುವವೇ? ಬಂದ್ ಎಲ್ಲ ವರ್ಗದವರನ್ನೂ ಬಾಧಿಸುತ್ತದೆ. ಆಯಾ ದಿನದ ಕೂಳಿಗೆ ಕೂಲಿ ಅವಲಂಬಿಸಿದವರನ್ನು ಇನ್ನೂ ಹೆಚ್ಚು ಬಾಧಿಸುತ್ತದೆ.

ಹಿಂದೆ ಯಾವುದೋ ಚುನಾವಣೆ ಪ್ರಚಾರಕ್ಕೆ ಬಳಸಿದ ಹರಿದ ಬ್ಯಾನರನ್ನೋ ಅಥವಾ ಫ್ಲೆಕ್ಸ್‌ ಅನ್ನೋ ಸೂರಾಗಿಸಿಕೊಂಡ ಫುಟ್‌ಪಾತ್ ವ್ಯಾಪಾರಿಗಳು, ದೂಡು ಗಾಡಿಯಲ್ಲಿ ಸೊಪ್ಪು ಸದೆ, ಈರುಳ್ಳಿ, ಟೊಮೆಟೊ ವಗೈರೆ ಮಾರುವವರು, ಅಲ್ಲಲ್ಲಿ ಅಂಥದ್ದೇ ಗಾಡಿಗಳಲ್ಲಿ ಸೌತೆ, ಪೈನಾಪಲ್, ಪರಂಗಿ, ಕಲ್ಲಂಗಡಿ ಹಣ್ಣುಗಳ ಸೀಳುಗಳಿಗೆ ಮಸಾಲೆ ಹಚ್ಚಿ ನಾಲ್ಕು ಕಾಸಿನ ಗಳಿಕೆಗೆ ಶ್ರಮಿಸುವವರು, ಒಂದಷ್ಟು ಆದಾಯ ಹೆಚ್ಚಿಸಿಕೊಳ್ಳಲು ಆರೇಳು ಮನೆಗಳಲ್ಲಿ ಪಾತ್ರೆ, ಬಟ್ಟೆ ತೊಳೆಯುವವರು... ಇಂಥ ಶ್ರಮಜೀವಿಗಳಿಗೆ ಬಂದ್‌ ಹೊಡೆತ ಜಾಸ್ತಿ. ಯಾವುದೇ ಸಮಯದಲ್ಲಿ ವೈದ್ಯಕೀಯ ಸೇವೆ ಅಗತ್ಯವಾಗಬಹುದಾದ ವೃದ್ಧರಿಗೆ, ಎಳೆಯ ಕಂದಮ್ಮಗಳಿಗೆ, ಗರ್ಭಿಣಿಯರಿಗೆ, ರೋಗಿಗಳಿಗೆ ಬಂದ್‌ನಿಂದ ಆಗುವ ಅನನುಕೂಲ ಹೇಳತೀರದು.

ಈಗಾಗಲೇ ಅಜೀರ್ಣವಾಗುವಷ್ಟು ರಜೆಗಳು. ಕೆಲಸದ ದಿನ ಯಾವುದು ಎಂದು ಕ್ಯಾಲೆಂಡರ್‌ನಲ್ಲಿ ಹುಡುಕುವಂತಾಗಿದೆ. ಕಚೇರಿಗಳು, ಬ್ಯಾಂಕುಗಳು ಬಾಗಿಲು ಮುಚ್ಚಿದರೆ ಅರ್ಜಿದಾರರ, ಅಹವಾಲುದಾರರ, ವ್ಯವಹರಿಸುವವರ ಪಾಡೇನು? ಸಂಚಾರ ನಮ್ಮ ದಿನಮಾನದ ಅವಿಭಾಜ್ಯ ಅಂಗ. ಶ್ರೀಸಾಮಾನ್ಯರ ವಾಹನಗಳಾದ ಬಸ್ಸು, ರೈಲು ಸ್ತಬ್ಧಗೊಂಡರೆ ಎಂಥ ಘೋರ ಪಡಿಪಾಟಲು? ‘ಗ್ರಂಥಾಲಯ ಇರದು. ನೀವು ದಿನಪತ್ರಿಕೆ ಓದಬೇಡಿ, ಗ್ರಂಥಗಳ ಪರಾಮರ್ಶೆ ಬೇಡ, ಅಧ್ಯಯನ ನಿಲ್ಲಿಸಿ’ ಎಂದರೆ ಹೇಗೆ? ನಿಗದಿಯಾದ ಪರೀಕ್ಷೆಗಳು, ಸಂದರ್ಶನಗಳು ಬಂದ್‍ನಿಂದಾಗಿ ಮುಂದಕ್ಕೆ ಹೋಗು

ತ್ತವೆ. ಇದರಿಂದ ವಿದ್ಯಾರ್ಥಿಗಳಲ್ಲಿ ಉಂಟಾಗುವ ಮಾನಸಿಕ, ಶಾರೀರಿಕ ಒತ್ತಡವೇನು ಕಡಿಮೆಯೇ?

ಸಿನಿಮಾ ಎನ್ನುವುದು ಜನರಿಗೆ ಕಡಿಮೆ ಖರ್ಚಿನಲ್ಲಿ ಸಿಗುವ ಮನರಂಜನೆ. ಬಂದ್‍ನಿಂದ ಅದಕ್ಕೂ ಅಡ್ಡಿ. ಕಿಡಿಗೇಡಿಗಳ ಹುಂಬತನಕ್ಕೆ ಬಂದ್ ಆಸ್ಪದ ನೀಡುತ್ತದೆ. ಶಾಂತಿ, ಶಿಸ್ತು, ಕಾನೂನು ಕಾಪಾಡಲು ಪೊಲೀಸರಿಗೆ ವಿಶೇಷ ಸವಾಲನ್ನೇ ಒಡ್ಡುತ್ತದೆ. ಟೈರುಗಳು ಉರಿದು ಹೊಗೆ ಕಾರಿ ಹವೆ ಕೆಡಿಸುತ್ತವೆ. ಅಭದ್ರ ವಾತಾವರಣ. ಯಾರ‍್ಯಾರಿಗೆ ಏನೇನು ಸೇವೆ ಎಷ್ಟೆಷ್ಟು ಅಲಭ್ಯವಾಗಿ ತೊಂದರೆಪಡುವಂತಾಯಿತು ಎನ್ನುವುದೇ ಬಂದ್ ಯಶಸ್ಸಿನ ಮಾನದಂಡ!

ಮೂರು ವರ್ಷಗಳ ಹಿಂದೆ ನಾನು ಇಂಡೊನೇಷ್ಯಾದ ಜಕಾರ್ತ ಪ್ರವಾಸದಲ್ಲಿದ್ದೆ. ಆಗ ಆದ ಅನುಭವವಿದು. ನಮ್ಮ ತಂಡವು ಭಾರತೀಯ ದೂತಾವಾಸದ ಸಭಾಂಗಣದಲ್ಲಿ ಕನ್ನಡ ಸಮ್ಮೇಳನದ ಸಮಾರೋಪದ ಬಳಿಕ ಹೋಟೆಲ್‍ಗೆ ಬಸ್ಸಿನಲ್ಲಿ ವಾಪಸಾಗುತ್ತಿತ್ತು. ನಡುರಾತ್ರಿಯ ವೇಳೆ. ಕಿಟಕಿಯ ಮೂಲಕ ದಿಟ್ಟಿಸಿದಾಗ ಒಂದು ನಿಶ್ಶಬ್ದ ಬೈಕ್ ರ‍್ಯಾಲಿ ಕಣ್ಣಿಗೆ ಬಿತ್ತು. ಒಂದೂ ಬೈಕ್ ಹಾರನ್ ಮಾಡಲಿಲ್ಲ. ಇದೇನಿದು, ಈ ಹೊತ್ತಿನಲ್ಲಿ ಹೆಂಗಸರು, ಮಕ್ಕಳು ಎನ್ನದೆ ಎಲ್ಲರೂ ಬ್ಯಾನರ್ ಹಿಡಿದು ಹೊರಟಿದ್ದಾರಲ್ಲ ಎಲ್ಲಿಗೆ, ಏತಕ್ಕೆ ಎಂಬ ಕುತೂಹಲವಾಯಿತು. ಬಸ್ಸಿನ ಚಾಲಕ, ‘ಅದೇ ಸಾರ್, ಮೊನ್ನೆ ಇಲ್ಲಿ ಚುನಾವಣೆ ನಡೀತಲ್ಲ, ಮತ ಎಣಿಕೆ ನ್ಯಾಯಯುತವಾಗಿ ನಡೆಸಿ ಅಂತ ಸರ್ಕಾರಕ್ಕೆ ಒತ್ತಾಯ ತರಲು ಈ ಮೆರವಣಿಗೆ. ಹಗಲು ವೃಥಾ ವ್ಯಯ ಮಾಡಬಾರದಲ್ವೇ. ಅದಕ್ಕೇ ರಾತ್ರಿ, ಅದೂ ಒಂದು ತಾಸು ಮಾತ್ರ ಮೆರವಣಿಗೆ. ಅಷ್ಟೇ ಸಾರ್’ ಎಂದು ವಿವರಿಸಿದ.

ಜಪಾನ್ ಮತ್ತೂ ಒಂದು ಹೆಜ್ಜೆ ಮುಂದಿಟ್ಟು ಜಗತ್ತಿಗೇ ಮಾದರಿಯಾಗಿದೆ. ಅಲ್ಲಿನ ಮಂದಿ ಒಂದು ತಾಸು ಹೆಚ್ಚುವರಿಯಾಗಿ ಕೆಲಸ ನಿರ್ವಹಿಸಿ ತಮ್ಮ ಬೇಡಿಕೆ

ಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾರೆ. ಹೀಗಾಗಿಯೇ ಅಲ್ಲಿನವರಿಗೆ ಭೀಕರ ಭೂಕಂಪ, ಸುನಾಮಿ, ನೆರೆಗಳಂತಹ ಪ್ರಾಕೃತಿಕ ವಿಕೋಪಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಿದೆ. ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಪ್ರಬಲ ಪರಮಾಣು ಬಾಂಬ್ ದಾಳಿಯಾಗಿ ಲಕ್ಷಾಂತರ ಮಂದಿ ಸಾವು– ನೋವು ಅನುಭವಿಸಿದರು. ಆದರೂ ಜಪಾನ್ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಮೇಲೆದ್ದಿದ್ದು ಈಗ ಇತಿಹಾಸ.

ಮನೆಯಲ್ಲಿ ಎಂಥದ್ದೇ ಸಮಸ್ಯೆಯಿರಲಿ, ವೈಮನಸ್ಸಿರಲಿ ಅಡುಗೆ ಮನೆ, ಸ್ನಾನದ ಕೋಣೆ, ಉಗ್ರಾಣ, ಶೌಚಾಲಯವನ್ನೇನೂ ಮುಚ್ಚುವುದಿಲ್ಲ! ಗುಡಿಸುವುದು, ಸಾರಿಸುವುದು, ಬಟ್ಟೆ ಒಗೆಯುವುದು, ಇಸ್ತ್ರಿ ಮಾಡುವುದು... ಈ ಬಗೆಯ ಕೆಲಸ ಕಾರ್ಯಗಳು ಅಡೆತಡೆರಹಿತವಾಗಿ ಸಾಗಲೇಬೇಕು. ಇದಕ್ಕೆ ವ್ಯತಿರಿಕ್ತ ಬಂದ್‌.

ಬಂದ್ ತಡೆಯುವಲ್ಲಿ ಸರ್ಕಾರಗಳ ಜವಾಬ್ದಾರಿಯೂ ಇದೆ. ‘ಜನ ಇನ್ನೂ ಮುಷ್ಕರ, ಚಳವಳಿಗೆ ಮುಂದಾಗಿಲ್ಲವಲ್ಲ... ಅವರ ಬೇಡಿಕೆಗಳು ಏನಿದ್ದರೂ ಆಮೇಲೆ ಪರಿಶೀಲಿಸಿದರಾಯಿತು’ ಎನ್ನುವ ಧೋರಣೆಯನ್ನು ಸರ್ಕಾರ ತಳೆದರೆ ಅದೆಷ್ಟು ಬಾಲಿಶವಲ್ಲವೇ? ನಾವು ಹೇಗೆ ಭಾವಿಸಿದರೂ ಸಂಪು, ಪ್ರತಿಭಟನೆಗಳು ಸಂಘರ್ಷದ ಫಲ, ಅನುಸಂಧಾನದ ವೈಫಲ್ಯ. ಎಂದಮೇಲೆ ಮನಸ್ಸು ಮಾಡಿದರೆ ಸಮಸ್ಯೆಗಳು ಹಗುರಾಗುವುದು ಅಸಾಧ್ಯವೇನಲ್ಲ. ಎಲ್ಲ ನ್ಯಾಯಬದ್ಧ ಬೇಡಿಕೆಗಳಿಗೂ ಪರಿಹಾರಗಳಿದ್ದೇ ಇವೆ. ಪರಸ್ಪರ ಮನವರಿಕೆ, ಕೊಡು-ಪಡೆವ ಪ್ರವೃತ್ತಿ ಅಗತ್ಯವಷ್ಟೇ.

ಈ ನಿಟ್ಟಿನಲ್ಲಿ ವಿಚಾರವಂತಿಕೆ ಮೆರೆಯಬೇಕು. ಏನೇ ಬೇಡಿಕೆಗಳಿರಲಿ ಬಂದ್‌ ಮಾತ್ರ ಸಾಂಕೇತಿಕವಾಗಿರಲಿ. ಇಡೀ ದಿನದ ಬಂದ್ ಅನಗತ್ಯ. ಮಧ್ಯಾಹ್ನದ ಊಟದ ಬಿಡುವಿನ ಸಮಯವನ್ನು ಸಾಂಕೇತಿಕ ಹಾಗೂ ಶಾಂತಿಯುತ ಪ್ರತಿಭಟನೆಗೆ ಮೀಸಲಿಟ್ಟರಾಯಿತು. ಪ್ರತಿಭಟನೆ ಎಷ್ಟು ಹೊತ್ತು ಎನ್ನುವುದಕ್ಕಿಂತಲೂ ಎಷ್ಟು ಪ್ರಭಾವ ಬೀರಿತು ಎನ್ನುವುದು ಮುಖ್ಯ. ಆಗ ಸರ್ವರ ಸಹಕಾರವೂ ದೊರೆಯುತ್ತದೆ. ನಮ್ಮ ಕೈ, ಕಾಲುಗಳನ್ನು ನಾವೇ ಹಗ್ಗದಿಂದ ಕಟ್ಟಿಹಾಕಿಕೊಳ್ಳದೆ, ನಮ್ಮ ಹಕ್ಕುಗಳಿಗಾಗಿ ಒತ್ತಾಯಿಸೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry