ಹೋರಾಟಕ್ಕೆ ರಾಜಧಾನಿ ಸ್ತಬ್ಧ

7

ಹೋರಾಟಕ್ಕೆ ರಾಜಧಾನಿ ಸ್ತಬ್ಧ

Published:
Updated:
ಹೋರಾಟಕ್ಕೆ ರಾಜಧಾನಿ ಸ್ತಬ್ಧ

ಬೆಂಗಳೂರು: ಪ್ರಯಾಣಿಕರಿಂದ ಸದಾ ಗಿಜಿಗುಡುತ್ತಿದ್ದ ನಗರದ ಕೆಂಪೇಗೌಡ ಬಸ್‌ ನಿಲ್ದಾಣ ಬುಧವಾರ ಕರ್ನಾಟಕ ಬಂದ್‌ನಿಂದಾಗಿ ಬಿಕೋ ಎನ್ನುತ್ತಿತ್ತು. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ದೂರದ ಊರುಗಳಿಂದ ಬಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು.

ಮೆಜೆಸ್ಟಿಕ್‌ ಹಾಗೂ ನಗರ ರೈಲು ನಿಲ್ದಾಣಗಳು ಖಾಲಿ ಹೊಡೆಯುತ್ತಿದ್ದವು. ಆಟೊರಿಕ್ಷಾ, ಕ್ಯಾಬ್‌ಗಳ ಸಂಚಾರವೂ ಕಡಿಮೆ ಇತ್ತು. ನಗರದ ಬಹುತೇಕ ಕಡೆ ವಾಹನ ಸಂಚಾರ ವಿರಳವಾಗಿತ್ತು.

ಬೆಳಿಗ್ಗೆ 6 ಗಂಟೆ ಹೊತ್ತಿಗೆ ರೈಲಿನಲ್ಲಿ ನಗರಕ್ಕೆ ಬಂದಿಳಿದ ಜನ ತಂಡೋಪತಂಡವಾಗಿ ಬಿಎಂಟಿಸಿ ನಿಲ್ದಾಣದತ್ತ ಸಾಗಿದರು. ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದನ್ನು ನೋಡಿ ತಬ್ಬಿಬ್ಬಾದರು.

ಆಟೊ ಚಾಲಕರು ದುಬಾರಿ ಬಾಡಿಗೆ ಕೇಳುತ್ತಿದ್ದರು. ಅಷ್ಟೊಂದು ಹಣ ತೆರಲು ಸಾಧ್ಯವಾಗದವರು ನಡೆದುಕೊಂಡೇ ಹೋದರು. ಇನ್ನು ಕೆಲವರು ಮೆಟ್ರೊ ಹತ್ತಿದರು. ಇದ್ಯಾವುದೂ ಸಾಧ್ಯವಾಗದವರು ಬಸ್‌ ಸಂಚಾರ ಆರಂಭವಾಗುವವರೆಗೂ ನಿಲ್ದಾಣದಲ್ಲಿಯೇ ಕಾದರು.

ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರಲಿಲ್ಲ. ಆದರೆ, ನಿಲ್ದಾಣದಲ್ಲಿದ್ದ ಪ್ರೀಪೇಯ್ಡ್ ಆಟೊ ಕೇಂದ್ರ ಹಾಗೂ ಪ್ರೀಪೇಯ್ಡ್ ಟ್ಯಾಕ್ಸಿ ಕೇಂದ್ರ ಕಾರ್ಯನಿರ್ವಹಿಸಲಿಲ್ಲ. ದೂರದ ಊರುಗಳಿಂದ ಇಲ್ಲಿಗೆ ಬಂದಿದ್ದವರು ಲಗೇಜುಗಳೊಂದಿಗೆ ನಿಲ್ದಾಣದಲ್ಲಿಯೇ ಉಳಿಯಬೇಕಾಯಿತು. ಕೆಲವು ಕ್ಯಾಬ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮುಂದಾದಾಗ ಪ್ರತಿಭಟನಾಕಾರರು ತಡೆಯೊಡ್ಡಿದರು.

‘ತಿರುಪತಿಯಿಂದ ರೈಲಿನಲ್ಲಿ ಬೆಳಿಗ್ಗೆ ಬಂದಿಳಿದೆ. ಮನೆಗೆ ಹೋಗಲು ವಾಹನ ಸಿಗುತ್ತಿಲ್ಲ’ ಎಂದು ಬಿಎಂಟಿಸಿ ನಿಲ್ದಾಣದಲ್ಲಿದ್ದ ಸುಂಕದಕಟ್ಟೆಯ ಪ್ರಹ್ಲಾದ್‌ ರಾವ್‌ ಹೇಳಿದರು.

‘ಬೀದರ್‌ನಿಂದ ಬಂದಿದ್ದೇನೆ. ಹೊಸಕೋಟೆಗೆ ಹೋಗಲು ಬಸ್‌ಗಳಿಲ್ಲ.‌ ಒಂದು ವರ್ಷದ ಮಗುವಿನ ಜತೆಗೆ ಕಾಯುವುದು ಕಷ್ಟ’ ಎಂದು ಸರೋಜಾ ನೋವು ವ್ಯಕ್ತಪಡಿಸಿದರು.

ಬಿಎಂಟಿಸಿ ಚಾಲಕನ ಪತ್ನಿಗೆ ಸಂಚಾರ ಸ್ಥಗಿತದ ಬಿಸಿ

‘ವಿಜಯಪುರದ ಮುದ್ದೇಬಿಹಾಳದಿಂದ ಗಂಡನನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಅವರು ಬಿಎಂಟಿಸಿ 4ನೇ ಡಿಪೊದ ಬಸ್‌ನಲ್ಲಿ ಚಾಲಕ. ಕರ್ನಾಟಕ ಬಂದ್‌ ಇರುವ ಬಗ್ಗೆ ಮೊದಲೇ ತಿಳಿಸಿದ್ದರು. ಅದಕ್ಕಾಗಿ ಬುಧವಾರ ಬೆಳಿಗ್ಗೆ ಹೊರಟು ರಾತ್ರಿಯೇ ಇಲ್ಲಿಗೆ ಬರುವಂತೆ ಹೇಳಿದ್ದರು. ಆದರೆ, ಮಗುವನ್ನು ಹಿಡಿದುಕೊಂಡು ರಾತ್ರಿ ಬೆಂಗಳೂರಿನಲ್ಲಿ ಅಲೆದಾಡಲು ಕಷ್ಟ ಎಂದು ಬೆಳಿಗ್ಗೆ ಇಲ್ಲಿಗೆ ತಲುಪುವಂತೆ ಹೊರಟೆ. ಇಲ್ಲಿಗೆ ಬಂದರೆ, ಬಸ್‌ ಇಲ್ಲ. ಹಾಗಾಗಿ ನಿಲ್ದಾಣದಲ್ಲಿಯೇ ಇದ್ದೇನೆ. ಸಂಜೆ ಬಸ್‌ ಆರಂಭವಾದಾಗ ಹೋಗುತ್ತೇನೆ’ ಎಂದು ಮಮ್ತಾಜ್‌ ಬೇಗಂ ತಿಳಿಸಿದರು.

‘ರಕ್ತಾ ತಗೊಳ್ಳಿ...’

ಬೆಂಗಳೂರು: ‘ಕುಡ್ಯಾಕ್ ನೀರ್ ಕೊಟ್ಬಿಟ್ರ ಏನ್ ಗಂಟು ಹೋಗ್ತೈತಿ ಅವುಂದು. ಇಷ್ಟ್ ದಿನಾ ಕೊಡ್ತೀನಿ ಅಂದ್, ಈಗ ಕೊಡಲ್ಲ ಅಂತ ಹೇಳಾಕತ್ತಾನಂತ ಗೋವಾ ಮುಖ್ಯಮಂತ್ರಿ. ನಮ್ಗ್ ಕಡ್ಯಾಗ್‌ ನೀರಿಲ್ರೀ. ಬೇಕಾದ್ರ ನಮ್ಮ ರಕ್ತ ಕೇಳಿದ್ರು ಕೊಟ್‌ ಬಿಡ್ತೀವಿ. ಊಟಾ ಇಲ್ಲ ಅಂದ್ರು ಇರ್ತೇವ್ರಿ. ನಮಗ್ ನೀರ್‌ ಬೇಕೇ ಬೇಕ್’ ಎಂದು ಹುಬ್ಬಳ್ಳಿಯಿಂದ ಬಂದಿದ್ದ ಮಹಿಳೆಯೊಬ್ಬರು ಬಸ್‌ ಸಿಗದೆ ನಿಲ್ದಾಣದಲ್ಲಿ ಒದ್ದಾಡುತ್ತಿದ್ದರೂ ಬಂದ್‌ಗೆ ಬೆಂಬಲಿಸಿದರು.

ನೆರವಾದ ‘ಸಭಾಪತಿ’

ಬೆಂಗಳೂರು: ಬಸ್‌ ಇಲ್ಲದೆ ಪರದಾಡುತ್ತಿದ್ದ ರೋಗಿಗಳಿಗೆ, ಹಿರಿಯರಿಗೆ ವಾಹನ ಚಾಲಕ ಸಭಾಪತಿ ಅವರು ಸಂಪರ್ಕ ಸೇತುವಾಗಿ ಕೆಲಸ ಮಾಡಿದರು.

‘ಬಂದ್‌ನಿಂದಾಗಿ ಜನ ಪರದಾಡುತ್ತಿದ್ದಾರೆ ಎಂದು ಟಿ.ವಿಯಲ್ಲಿ ನೋಡುತ್ತಿದ್ದೆ. ಅವರಿಗೆ ನೆರವಾಗಬೇಕು ಎಂಬ ಆಲೋಚನೆ ಬಂದಿತು. 2016ರಲ್ಲಿ ಐದು ಬಾರಿ ಬಂದ್‌ ನಡೆಯಿತು. ಆಗಲೂ ಇದೇ ರೀತಿ ನೆರವಾಗಿದ್ದೆ’ ಎಂದು ಅವರು ತಿಳಿಸಿದರು. ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನೇತ್ರಾವತಿ ಅವರನ್ನು ಸಭಾಪತಿ ತಮ್ಮ ಕಾರಿನಲ್ಲಿ ಕಿದ್ವಾಯಿ ಆಸ್ಪತ್ರೆಗೆ ಕರೆದೊಯ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry