ಅಂಜಲಿಯಿಂದ ಮೈಕ್‌ ಕಸಿದ ವಿಡಿಯೊ ವೈರಲ್‌

7
ಶಾಸಕರಿಂದ ಆರೋಪ, ಪ್ರತ್ಯಾರೋಪ

ಅಂಜಲಿಯಿಂದ ಮೈಕ್‌ ಕಸಿದ ವಿಡಿಯೊ ವೈರಲ್‌

Published:
Updated:

ಖಾನಾಪುರ: ತಾಲ್ಲೂಕಿನ ಮಾನ್‌ ಗ್ರಾಮದಲ್ಲಿ ಜ. 21ರಂದು ನಡೆದ ಗಣೇಶ ಪೂಜಾ ಕಾರ್ಯಕ್ರಮದಲ್ಲಿ ಬಾಲಭವನ ಅಧ್ಯಕ್ಷೆ, ಕೆಪಿಸಿಸಿ ಸದಸ್ಯೆ ಡಾ.ಅಂಜಲಿ ನಿಂಬಾಳ್ಕರ್‌ ಮಾತನಾಡುತ್ತಿದ್ದ ವೇಳೆ ಎಂಇಎಸ್‌ ಬೆಂಬಲಿತ ಶಾಸಕ ಅರವಿಂದ ಪಾಟೀಲ ಮೈಕ್‌ ಕಸಿದುಕೊಂಡ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಗುರುವಾರ ವೈರಲ್‌ ಆಗಿದೆ.

‘ತಮ್ಮ ವಿರುದ್ಧ ಆರೋಪಿಸಿದ್ದಕ್ಕೆ ಅವರು ಸಿಟ್ಟಾದರು. ಶಾಸಕರಾದ ತಮ್ಮನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ, ಭಾಷಣದ ನಡುವೆ ಬಲವಂತವಾಗಿ ಮೈಕ್ ಕಸಿದುಕೊಂಡರು. ತಮ್ಮ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದರು’ ಎಂದು ಸ್ಥಳೀಯರು ಮಾಹಿತಿ ನೀಡಿದರು.

‘ಈ ಭಾಗದ ಶಾಸಕರು ಭಾಷೆಯನ್ನೇ ಬಂಡವಾಳವಾಗಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ತಾಲ್ಲೂಕಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಹಣ ಪಡೆದಿದ್ದಾರೆ. ಈ ಮೂಲಕ ಮರಾಠಿ ಭಾಷಿಕರ ಸ್ವಾಭಿಮಾನ ಹಾಗೂ ಅವರು ಪ್ರತಿನಿಧಿಸುತ್ತಿರುವ ಎಂಇಎಸ್ ಸಂಘಟನೆಯ ತತ್ವ–ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ. ಇಂಥವರ ಬಗ್ಗೆ ಮತದಾರರು ಎಚ್ಚರಿಕೆಯಿಂದಿರಬೇಕು ಎಂದು ಅಂಜಲಿ ಟೀಕಿಸಿದರು’ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ, ‘ಅವರು ಕಾರ್ಯಕ್ರಮದ ಬಗ್ಗೆ ಹೇಳುವುದನ್ನು ಬಿಟ್ಟು ರಾಜಕೀಯ ಮಾತನಾಡಿ ಮುಗ್ಧ ಗ್ರಾಮಸ್ಥರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದರು. ನನ್ನ ಬಗ್ಗೆ ವೈಯುಕ್ತಿಕವಾಗಿ ಆಧಾರರಹಿತ ಆರೋಪಗಳನ್ನು ಮಾಡಲು ಪ್ರಾರಂಭಿಸಿದರು. ಹೀಗಾಗಿ ಮಧ್ಯಪ್ರವೇಶಿಸಿ ತಿಳಿಹೇಳಿದೆ’ ಎಂದು ತಿಳಿಸಿದರು.

‘ಕ್ಷೇತ್ರದ ಶಾಸಕರ ವೈಫಲ್ಯಗಳ ಬಗ್ಗೆ ಕ್ಷೇತ್ರದ ಮತದಾರರಿಗೆ ವಿವರಿಸುವ ಸಂದರ್ಭದಲ್ಲಿ ಅಡ್ಡಿಪಡಿಸಿದರು. ಇದು ಮಹಿಳೆಯರಿಗೆ ಮಾಡಿದ ಅವಮಾನ. ನನ್ನ ಮಾತುಗಳಿಗೆ ಅವರು ನಂತರ ಸ್ಪಷ್ಟನೆ ನೀಡಬಹುದಿತ್ತು. ಬದಲಿಗೆ, ನನ್ನ ದನಿ ಹತ್ತಿಕ್ಕುವ ಪ್ರಯತ್ನ ಮಾಡಿದರು’ ಎಂದು ಡಾ.ಅಂಜಲಿ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry