ಗಣರಾಜ್ಯೋತ್ಸವ: ನಾಲ್ವರಿಗೆ ಪ್ರಶಸ್ತಿ ಪ್ರದಾನ

6

ಗಣರಾಜ್ಯೋತ್ಸವ: ನಾಲ್ವರಿಗೆ ಪ್ರಶಸ್ತಿ ಪ್ರದಾನ

Published:
Updated:
ಗಣರಾಜ್ಯೋತ್ಸವ: ನಾಲ್ವರಿಗೆ ಪ್ರಶಸ್ತಿ ಪ್ರದಾನ

ಚಾಮರಾಜನಗರ: ಹರಿಯುವ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಇಬ್ಬರು ಯುವಕರು ಮತ್ತು ವಿಷನ್‌ 2025 ಕುರಿತು ವಿಭಿನ್ನ ಪರಿಕಲ್ಪನೆಯ ಚಿತ್ರ ಬಿಡಿಸಿದ ಇಬ್ಬರು ವಿದ್ಯಾರ್ಥಿನಿಯರಿಗೆ ಶುಕ್ರವಾರ ನಗರದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿಯ ಹುಯಿಲನತ್ತ ಗ್ರಾಮದ ಬಸವರಾಜು ಮತ್ತು ರುದ್ರ ಜಿಲ್ಲಾ ಮಟ್ಟದ ಶೌರ್ಯ ಪ್ರಶಸ್ತಿ ಮತ್ತು ಪ್ರಶಂಸನಾ ಪತ್ರವನ್ನು ಪಡೆದುಕೊಳ್ಳಲಿದ್ದಾರೆ.

2017ರ ಅಕ್ಟೋಬರ್‌ನಲ್ಲಿ ವ್ಯಾಪಕ ಮಳೆಗೆ ಲೊಕ್ಕನಹಳ್ಳಿಯ ಉಡುತೊರೆ ಹಳ್ಳ ಭರ್ತಿಯಾಗಿ ಹರಿಯುತ್ತಿತ್ತು. ಈ ಸಂದರ್ಭ ದಲ್ಲಿ ಹಳ್ಳ ದಾಟಲು ಮುಂದಾದ ಭದ್ರ ಎಂಬು ವವರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗ ತೊಡಗಿದರು. ಸ್ಥಳದಲ್ಲಿದ್ದ ಬಸವರಾಜು ಹಾಗೂ ರುದ್ರ ಭದ್ರ ಅವರನ್ನು ರಕ್ಷಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ಗಮನ ಸೆಳೆದಿತ್ತು. ಹೀಗಾಗಿ, ಅವರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು.

‘ಅಂದು 8 ಮಂದಿ ಕೂಲಿ ಕೆಲಸಕ್ಕೆ ಹೊರಟಿದ್ದೆವು. ಹಳ್ಳ ತುಂಬಿ ಹರಿಯು ತ್ತಿದ್ದ ಪರಿಣಾಮ ಒಬ್ಬರನ್ನು ಒಬ್ಬರು ಹಿಡಿದುಕೊಂಡು ಹಳ್ಳ ದಾಟಿದ್ದೆವು. ಆದರೆ ನಮ್ಮ ಹಿಂದೆ ಒಬ್ಬರೇ ಬಂದ ರುದ್ರ ನೀರಿನ ರಭಸಕ್ಕೆ ಕೊಚ್ಚಿ ಹೋಗತೊಡಗಿದರು. ಕೂಡಲೇ ಪಂಚೆಯ ಸಹಾಯದಿಂದ ಅವರನ್ನು ಕಾಪಾಡಿದೆವು’ ಎಂದು ಬಸವರಾಜು ಅಂದಿನ ಸನ್ನಿವೇಶದ ಅನುಭವವನ್ನು ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡರು.

ಮಕ್ಕಳ ಪರಿಕಲ್ಪನೆಯ ರಾಜ್ಯ: 2025ರ ವೇಳೆಗೆ ನಮ್ಮ ರಾಜ್ಯ ಹೇಗಿರಬೇಕು ಎಂಬ ಪರಿಕಲ್ಪನೆಯನ್ನು ಚಿತ್ರದಲ್ಲಿ ಮೂಡಿಸಿದ್ದ ಕೊಳ್ಳೇಗಾಲ ತಾಲ್ಲೂಕಿನ ಇಬ್ಬರು ವಿದ್ಯಾರ್ಥಿನಿಯರು ವಿಷನ್‌ 2025ನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಭವಿಷ್ಯದ ಕುರಿತ ವಿದ್ಯಾರ್ಥಿಗಳಲ್ಲಿನ ಆಶಯಗಳನ್ನು ತಿಳಿದುಕೊಳ್ಳಲು ರಾಜ್ಯದ ಎಲ್ಲೆಡೆ ಚಿತ್ರಕಲಾ ಸ್ಪರ್ಧೆಗಳು ನಡೆದಿದ್ದವು. ಅದರಲ್ಲಿ ಜಿಲ್ಲಾ ಮಟ್ಟದಲ್ಲಿ ಗೊಬ್ಬಳಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸಹನಾ ಮತ್ತು ಕಾಮಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಭಾವನಾ ಬಹುಮಾನ ಪಡೆದಿದ್ದಾರೆ.

2025ಕ್ಕೆ ದೇಶ ಸಂಪೂರ್ಣ ಸ್ವಚ್ಛವಾಗ ಬೇಕು. ಬಡತನ, ನಿರುದ್ಯೋಗ ದಂತಹ ಸಮಸ್ಯೆಗಳು ನಾಶವಾಗಬೇಕು. ವಿಶ್ವದಲ್ಲಿಯೇ ಅತ್ಯಂತ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಬೇಕು’ ಎಂಬ ಪರಿಕಲ್ಪನೆಯೊಂದಿಗೆ ಚಿತ್ರ ಬಿಡಿಸಿದ್ದಾಗಿ ಸಹನಾ ತಿಳಿಸಿದರು.

‘ದೇಶದಲ್ಲಿ ಜಾತಿ, ಧರ್ಮ, ಬಡವ, ಶ್ರೀಮಂತ, ಸ್ತ್ರೀ, ಪುರುಷ ಎಂಬ ಯಾವುದೇ ತಾರತಮ್ಯವಿಲ್ಲದೇ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು. ಅತ್ಯಾಚಾರದಂತಹ ಅಮಾನವೀಯ ಘಟನೆಗಳು ನಿಲ್ಲ ಬೇಕು. ಮಹಾತ್ಮ ಗಾಂಧಿ ಅವರ ಕನಸಿನಂತೆ ಮಧ್ಯರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭೀತಿಯಿಂದ ಓಡಾಡುವಂತಾಗಬೇಕು’ ಎಂದು ಭಾವನಾ ಕನಸು ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry