ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್ ಯಶಸ್ವಿ: ಬಹುತೇಕ ಶಾಂತಿಯುತ

ನವಲಗುಂದ ಪಟ್ಟಣದಲ್ಲಿ ಐಜಿಪಿ, ಎಸ್‌ಪಿ ನೇತೃತ್ವದಲ್ಲಿ ಪೊಲೀಸ್‌ ಭದ್ರತೆ
Last Updated 26 ಜನವರಿ 2018, 9:04 IST
ಅಕ್ಷರ ಗಾತ್ರ

ಧಾರವಾಡ: ಮಹದಾಯಿ ಜಲ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತ ಹೋರಾಟಗಾರರು ಕರೆ ನೀಡಿದ್ದ ಬಂದ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಂದ್‌ ಹಿನ್ನೆಲೆಯಲ್ಲಿ ನವಲಗುಂದದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಟೈರಿಗೆ ಬೆಂಕಿ ಹಚ್ಚಬೇಡಿ ಎಂದು ಐಜಿಪಿ ಅಲೋಕ್ ಕುಮಾರ್ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಈ ಸಂಬಂಧ ಪಕ್ಷಾತೀತ ಹೋರಾಟ ಸಮಿತಿಯ ಲೋಕನಾಥ ಹೆಬಸೂರ ಹಾಗೂ ಐಜಿಪಿ ನಡುವೆ ಮಾತಿನ ಚಕಮಕಿ ನಡೆಯಿತು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹೆಬಸೂರ, ‘ರೈತರ ಮಕ್ಕಳನ್ನು ಏಕೆ ತಡೆಯುತ್ತೀರಿ. ನಮ್ಮ ಹೋರಾಟ ಹತ್ತಿಕ್ಕುವ ಸಲುವಾಗಿಯೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದೀರಿ. ನಮ್ಮ ಹೋರಾಟ ಹತ್ತಿಕ್ಕುವುದೇ ಆದರೆ, ನಾವೂ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಸೇರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ‘ನಾನೂ ರೈತನ ಮಗನೇ’ ಎಂದಷ್ಟೇ ಹೇಳಿ ಅಲೋಕ್ ಕುಮಾರ್‌ ಸ್ಥಳದಿಂದ ಹೊರಟರು.

ಇತ್ತ ಧಾರವಾಡದಲ್ಲಿ ಬೆಳಿಗ್ಗೆ 6ಕ್ಕೆ ಹೋರಾಟಗಾರರು ಬೀದಿಗಿಳಿದು ಘೋಷಣೆ ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ಗೋವಾ ರಸ್ತೆಯಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಆಲೂರು ವೆಂಕಟರಾವ್‌ ವೃತ್ತದಲ್ಲಿ ಸೇರಿದ ಹೋರಾಟಗಾರರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಕನ್ನಡ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಕಾರ್ಯಕರ್ತರು ರೆಹಮಾನ್ ಹೊಳಿ ನೇತೃತ್ವದಲ್ಲಿ ರೈಲು ತಡೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.

ಕರ್ನಾಟಕ ಹಸಿರು ಸೇನೆ ಮತ್ತು ರೈತ ಸಂಘದ ನಾಗಪ್ಪ ಹುಂಡಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸಮತಾ ಸೇನಾ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಾಗೂ ಇನ್ನಿತರ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಹೋರಾಟಗಾರ ಶಂಕರಪ್ಪ ಅಂಬಲಿ, ‘ರೈತರಿಗೆ ನೀರು ಬೇಕು. ಅದಕ್ಕಾಗಿ ಎಷ್ಟು ಹೋರಾಟಗಳನ್ನಾದರೂ ಮಾಡುತ್ತೇವೆ. ನಮ್ಮ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ ನೀಡಲಿ ಅಥವಾ ಬಿಜೆಪಿಯೇ ನೀಡಲಿ ನಾವು ಬಂದ್ ನಡೆಸುತ್ತೇವೆ. ಆದರೆ, ಇವರ ಹೋರಾಟ ಫೆ.22ರವರೆಗೆ ಮಾತ್ರ. ನ್ಯಾಯಮಂಡಳಿ ವಿಚಾರಣೆ ಅಂದು ಕೊನೆಗೊಳ್ಳಲಿದೆ. ನಂತರ ಇವರ ನಾಟಕ ಏನು ಎಂಬುದನ್ನು ಎಲ್ಲರಿಗೂ ತಿಳಿಯಲಿದೆ’ ಎಂದರು.

ಹೋರಾಟದಲ್ಲಿ ಪಾಲ್ಗೊಂಡಿದ್ದ ಮಾಳಮಡ್ಡಿಯ ರಝಿಯಾ ಬೇಗಂ, ಕೊಪ್ಪದಕೇರಿಯ ನಿರ್ಮಲಾ ಹಿರೇಮಠ ಹಾಗೂ ಜಯನಗರದ ಶಾಂತಾ ವನರಾಶಿ ಅವರು ಬಿಸಿಲಿ ಝಳ ತಾಳಲಾಗದೆ ಅಸ್ವಸ್ಥಗೊಂಡರು. ಅವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.

ಬಂದ್ ಹಿನ್ನೆಲೆಯಲ್ಲಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿವಿಧ ನಗರಗಳಿಂದ ರೈಲುಗಳಲ್ಲಿ ನಗರಕ್ಕೆ ಬಂದ ಪ್ರಯಾಣಿಕರು ನಡೆದು ಹೋಗುತ್ತಿದ್ದ ದೃಶ್ಯ ಕಂಡುಬಂದಿತು. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದರು.

ಕಲಘಟಗಿ ಹಾಗೂ ಕುಂದಗೋಳದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಹಾಗೂ ಬಂದ್ ನಡೆಯಿತು. ಬೆಳಿಗ್ಗೆ ಒಂದು ಗಂಟೆ ಕಾಲ ಅಂಗಡಿಗಳು ಬಂದ್‌ ಆಗಿದ್ದವು. ನಂತರ ಎಂದಿನಂತೆ ಬಾಗಿಲು ತೆರೆದು ವ್ಯಾಪಾರ, ವಹಿವಾಟು ನಡೆಸಿದರು.

**

ಪರಿಸರ ಸಂರಕ್ಷಣೆಗೆ ಮುಂದಾದ ಹೋರಾಟಗಾರರು

ಈ ಬಾರಿ ಬಂದ್ ವೇಳೆ ಟೈಯರ್‌ ಸುಡದೆ ಹೋರಾಟಗಾರರು ಪರಿಸರ ಸಂರಕ್ಷಣೆಗೆ ಮುಂದಾದರು. ಟೈಯರ್‌ ಸುಡುವ ಹಾಗೂ ಅದರ ನಂತರದ ಪರಿಣಾಮ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಇದರಿಂದ ಪ್ರೇರೇಪಣೆಗೊಂಡ ಹೋರಾಟಗಾರರು ಟೈಯರ್ ಸುಡುವ ಬದಲು, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರ ಪುಟ್ಟ ಪ್ರತಿಕೃತಿಯನ್ನು ಹುಲ್ಲಿನಲ್ಲಿ  ಮಾಡಿ ಅದಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರರ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಈ ಕುರಿತು ಮಾತನಾಡಿದ ಪಾಪು ಧಾರೆ, ‘ನಮ್ಮ ಹೋರಾಟ ಯಶಸ್ವಿಯಾಗಬೇಕು. ಹಾಗೆಂದ ಮಾತ್ರಕ್ಕೆ ಪ್ರಕೃತಿಯನ್ನು ಹಾಳು ಮಾಡುವುದು ಸರಿಯಲ್ಲ. ಹೀಗಾಗಿ ಈ ಬಾರಿ ನಾವೆಲ್ಲಾ ಹೋರಾಟಗಾರರು ಸೇರಿ ಟೈಯರ್‌ಗೆ ಬೆಂಕಿ ಹಚ್ಚದೆ ಶಾಂತಿಯುತವಾಗಿ ನಮ್ಮ ಬೇಡಿಕೆಗೆ ಹೋರಾಟ ನಡೆಸಲು ತೀರ್ಮಾನಿಸಿದೆವು’ ಎಂದು ಹೇಳಿದರು.

*

ಗ್ರಾಮಸ್ಥರಿಂದಲೂ ರಸ್ತೆ ತಡೆ

ಗೋವಾ ರಸ್ತೆಯಲ್ಲಿರುವ ಮುಗದ ಗ್ರಾಮದ ಬಳಿ ಹಾಗೂ ಹಳಿಯಾಳ ರಸ್ತೆಯ ಸಲಕಿನಕೊಪ್ಪ ಬಳಿ ಮುಖ್ಯ ರಸ್ತೆ ಬಂದ್ ಮಾಡಿ ಗ್ರಾಮಸ್ಥರು ಕೆಲ ಕಾಲ ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಕಾಲ ವಾಹನ ದಟ್ಟಣೆ ಉಂಟಾಯಿತು. ನಂತರ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ತೆರವುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT