19 ವರ್ಷದೊಳಗಿನವರ ಕ್ರಿಕೆಟ್‌ ವಿಶ್ವಕಪ್‌; ಸೆಮಿಫೈನಲ್ ಪ್ರವೇಶಿಸಿದ ಭಾರತ

7

19 ವರ್ಷದೊಳಗಿನವರ ಕ್ರಿಕೆಟ್‌ ವಿಶ್ವಕಪ್‌; ಸೆಮಿಫೈನಲ್ ಪ್ರವೇಶಿಸಿದ ಭಾರತ

Published:
Updated:
19 ವರ್ಷದೊಳಗಿನವರ ಕ್ರಿಕೆಟ್‌ ವಿಶ್ವಕಪ್‌; ಸೆಮಿಫೈನಲ್ ಪ್ರವೇಶಿಸಿದ ಭಾರತ

ಕ್ವೀನ್ಸ್‌ಟೌನ್‌: ಶುಕ್ರವಾರ ಇಲ್ಲಿ ನಡೆದ ಬಾಂಗ್ಲಾದೇಶ ತಂಡದ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸುಲಭ ಜಯ ಸಾಧಿಸಿರುವ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪೃಥ್ವಿ ಶಾ ಬಳಗ ಬಳಗ 49.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 265ರನ್‌ ಕಲೆ ಹಾಕಿತು. ನಾಯಕ ಶಾ ಜತೆ ಇನಿಂಗ್ಸ್‌ ಆರಂಭಿಸಿದ ಮನ್‌ಜ್ಯೋತ್ ಕಾಲ್ರಾ ಕೇವಲ 9 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ ಕ್ರೀಸ್‌ಗಿಳಿದ ಶುಭಮಾನ್‌ ಗಿಲ್‌ ನಾಯಕನ ಜತೆ ಸೇರಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಈ ಜೋಡಿ ಎರಡನೇ ವಿಕೆಟ್‌ಗೆ 86ರನ್‌ ಗಳಿಸಿ ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು. ಗಿಲ್‌ 94 ಎಸೆತಗಳಲ್ಲಿ 86ರನ್‌ ಗಳಿಸಿ ಶತಕದಂಚಿನಲ್ಲಿ ವಿಕೆಟ್‌ ಒಪ್ಪಿಸಿ ನಿರಾಸೆ ಅನುಭವಿಸಿದರು. ಪೃಥ್ವಿ ಶಾ 40, ಅಭಿಷೇಕ್‌ ಶರ್ಮಾ 50, ಹಾರ್ವಿಕ್‌ ದೇಸಾಯಿ 34 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಬಾಂಗ್ಲಾ ತಂಡದ ಪರ ಖಾಜಿ ಓನಿಕ್‌ 3 ವಿಕೆಟ್‌ ಪಡೆದರೆ ನಾಯಕ ಸೈಫ್‌ ಹಸನ್‌ ಮತ್ತು ನಯೀಂ ಹಸನ್‌ ತಲಾ ಎರಡು ವಿಕೆಟ್‌ ಉರುಳಿಸಿದರು.

ಈ ಮೊತ್ತವನ್ನು ಬೆನ್ನತ್ತಿದ್ದ ಸೈಫ್‌ ಹಸನ್‌ ಪಡೆ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ವಿನಾಕ್‌ ಘೋಷ್‌(43) ಹೊರತುಪಡಿಸಿ ಉಳಿದ ಆಟಗಾರರಿಂದ ಉತ್ತಮ ಆಟ ಮೂಡಿಬರಲಿಲ್ಲ. ಬಾಂಗ್ಲಾ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಭಾರತ ಬೌಲರ್‌ಗಳು ಕೇವಲ 134ರನ್‌ಗಳಿಗೆ ನಿಯಂತ್ರಿಸಿದರು. ಇದರೊಂದಿಗೆ ಭಾರತ ತಂಡ 131ರನ್‌ ಅಂತರದ ಭಾರಿ ಜಯ ಸಾಧಿಸಿತು.

ವೇಗಿ ಕಮಲೇಶ್‌ ನಾಗರಕೋಟಿ ಕೇವಲ 18ರನ್‌ ನೀಡಿ 3 ವಿಕೆಟ್‌ ಪಡೆದು ಮಿಂಚಿದರು. ಉಳಿದಂತೆ ಬ್ಯಾಟಿಂಗ್‌ನಲ್ಲಿ ನೆರವಾಗಿದ್ದ ಅಭಿಷೇಕ್‌ ಶರ್ಮಾ ಹಾಗೂ ಶಿವಂ ಮಾವಿ ತಲಾ 2 ವಿಕೆಟ್‌ ಉರುಳಿಸಿದರು. ಅಂಕುಲ್ ರಾಯ್‌ ಒಂದು ವಿಕೆಟ್‌ ಪಡೆದರು.

ಅಜೇಯವಾಗಿ ಸೆಮಿಫೈನಲ್‌ ತಲುಪಿರುವ ಭಾರತ ತಂಡ ಲೀಗ್ ಹಂತದ ‘ಬಿ’ ಗುಂಪಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಪಪುವಾ ನ್ಯೂ ಗಿನಿ, ಜಿಂಬಾಬ್ವೆ ತಂಡಗಳನ್ನು ಮಣಿಸಿತ್ತು. ಜನವರಿ 30ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಭಾರತ ಮುಖಾಮುಖಿಯಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry