ಸಿನಿಮಾಗೆ ತಡೆಯೊಡ್ಡುವ ಪುಂಡ ಶಕ್ತಿಗಳನ್ನು ಮಟ್ಟಹಾಕಿ

7

ಸಿನಿಮಾಗೆ ತಡೆಯೊಡ್ಡುವ ಪುಂಡ ಶಕ್ತಿಗಳನ್ನು ಮಟ್ಟಹಾಕಿ

Published:
Updated:
ಸಿನಿಮಾಗೆ ತಡೆಯೊಡ್ಡುವ ಪುಂಡ ಶಕ್ತಿಗಳನ್ನು ಮಟ್ಟಹಾಕಿ

ಒಂದು ವರ್ಷದಿಂದ ಸುದ್ದಿ ಮಾಡುತ್ತಿರುವ ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಸಿನಿಮಾ ‘ಪದ್ಮಾವತ್‌’ ಕೊನೆಗೂ ಬಿಡುಗಡೆ ಕಂಡಿದೆ. ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹಿಂಸಾಚಾರಕ್ಕೆ ಇಳಿದಿರುವ ರಜಪೂತ ಕರ್ಣಿ ಸೇನಾದ ಸದಸ್ಯರಿಂದಾಗಿ ಈ ಸಿನಿಮಾಗೆ ಭರ್ಜರಿ ಪ್ರಚಾರವೂ ಸಿಕ್ಕು, ಜನರೂ ಮುಗಿಬಿದ್ದು ನೋಡುತ್ತಿದ್ದಾರೆ. ಹಿಂಸಾಕೃತ್ಯಗಳ ಮೂಲಕ ಜಾತಿ ಸಂಘಟನೆಯೊಂದು ಒತ್ತಡ ಹೇರಿದ ಹೊರತಾಗಿಯೂ, ಸುಪ್ರೀಂ ಕೋರ್ಟ್‌ ದೃಢ ನಿರ್ಧಾರ ಕೈಗೊಂಡು, ಚಿತ್ರ ನಿಷೇಧ ಕೋರಿದ ಅರ್ಜಿಯನ್ನು ತಿರಸ್ಕರಿಸಿದ್ದು ಸ್ವಾಗತಾರ್ಹ. ದೇಶದಲ್ಲಿ ಇನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯ ಉಸಿರಾಡುತ್ತಿದೆ ಹಾಗೂ ನ್ಯಾಯಾಂಗ ನಿಷ್ಠುರವಾಗಿದೆ ಎನ್ನುವುದಕ್ಕೆ ಸುಪ್ರೀಂ ಕೋರ್ಟಿನ ಈ ತೀರ್ಪು ಸಾಕ್ಷಿಯಾಗಿದೆ ಎನ್ನಲು ಅಡ್ಡಿಯಿಲ್ಲ. ಆದರೆ ಸುಪ್ರೀಂ ಕೋರ್ಟಿನ ಆದೇಶದ ಹೊರತಾಗಿಯೂ ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ಗುಜರಾತ್‌ ರಾಜ್ಯ ಸರ್ಕಾರಗಳು ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಆ ನಾಲ್ಕೂ ರಾಜ್ಯಗಳಲ್ಲಿ ಕಾನೂನಿನ ಆಡಳಿತವನ್ನು ಎತ್ತಿ ಹಿಡಿಯಲು ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎನ್ನುವುದನ್ನು ಇದು ಎತ್ತಿ ತೋರಿಸಿದೆ. ಯಾವುದೋ ಒಂದು ಜಾತಿವಾದಿ ಸಂಘಟನೆಯ ಬೆದರಿಕೆಗೆ ರಾಜ್ಯ ಸರ್ಕಾರಗಳು ಹೆದರುತ್ತವೆ ಎಂದರೆ ಏನರ್ಥ? ಕಾನೂನು– ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯಗಳ ಆದ್ಯ ಕರ್ತವ್ಯ. ಆ ಪ್ರಾಥಮಿಕ ಕೆಲಸವನ್ನು ಮಾಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಅದು ಅಧಿಕಾರದಲ್ಲಿ ಉಳಿಯುವ ಸಾಂವಿಧಾನಿಕ ಹಕ್ಕನ್ನೇ ಕಳೆದುಕೊಂಡಂತೆ.

ಯಾವುದೇ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲು, ಸೂಕ್ತ ಪ್ರಮಾಣಪತ್ರ ಕೊಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಇದೆ. ‘ಪದ್ಮಾವತ್‌’ ಸಿನಿಮಾವನ್ನು ಸಿಬಿಎಫ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ನೋಡಿ ಕೆಲವು ಬದಲಾವಣೆಗಳನ್ನು ಸೂಚಿಸಿ, ಪ್ರದರ್ಶನಕ್ಕೆ ಅರ್ಹ ಎಂಬ ಪ್ರಮಾಣಪತ್ರ ನೀಡಿದ್ದಾರೆ.  ನಿರ್ಮಾಪಕರು ಕಾನೂನುಬದ್ಧವಾಗಿ ಆ ಬದಲಾವಣೆಗಳನ್ನು ಮಾಡಿದ ಬಳಿಕವೇ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾವನ್ನೇ ನೋಡದೆ ‘ಅದನ್ನು ವಿರೋಧಿಸುತ್ತೇವೆ, ಬಿಡುಗಡೆ ಮಾಡಲು ಬಿಡುವುದಿಲ್ಲ’ ಎಂದು ಹಿಂಸಾಚಾರಕ್ಕೆ ಇಳಿಯುವುದು ಫ್ಯಾಸಿಸ್ಟರ ಲಕ್ಷಣ. ಕರ್ಣಿ ಸೇನಾದ ಪದಾಧಿಕಾರಿಯೊಬ್ಬರು ಟಿ.ವಿ. ಚರ್ಚೆಯ ವೇಳೆ ಖಡ್ಗವನ್ನು ಪ್ರದರ್ಶಿಸಿ ನಿರ್ದೇಶಕರು ಮತ್ತು ನಟಿಗೆ ಬಹಿರಂಗ ಪ್ರಾಣಬೆದರಿಕೆ ಒಡ್ಡಿದ ಪ್ರಕರಣವೂ ನಡೆದಿದೆ. ಇಂತಹ ಮತಾಂಧ ಶಕ್ತಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡು ಜೈಲಿಗೆ ತಳ್ಳಬೇಕಾದ ರಾಜ್ಯ ಸರ್ಕಾರಗಳೇ ಅವರಿಗೆ ಹೆದರಿ ಕುಳಿತಿರುವುದು ನಾಚಿಕೆಗೇಡು. ವಿಚ್ಛಿದ್ರಕಾರಿ ಶಕ್ತಿಗಳು ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡುವುದನ್ನು, ಶಾಲಾ ಮಕ್ಕಳ ಬಸ್‌ ಮೇಲೆ ದಾಳಿ ನಡೆಸುವುದನ್ನು ಹೀಗೆ ಮೌನವಾಗಿ ಸಹಿಸಿಕೊಳ್ಳುವುದು ಎಳ್ಳಷ್ಟೂ ಸರಿಯಲ್ಲ. ದೇಶ 69ನೇ ಗಣರಾಜ್ಯೋತ್ಸವವನ್ನು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಸುಪ್ರೀಂ ಕೋರ್ಟ್‌ ಸೂಚನೆಯನ್ನೂ ಪಾಲಿಸಲು ರಾಜ್ಯ ಸರ್ಕಾರಗಳಿಗೆ ಸಾಧ್ಯವಿಲ್ಲ ಎಂದಾದರೆ ಸಂವಿಧಾನದ ಸಾರ್ವಭೌಮತ್ವಕ್ಕೆ ಅರ್ಥವೇನಿದೆ? ಸಂವಿಧಾನದಲ್ಲಿ ಭರವಸೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಏನು ಬೆಲೆಯಿದೆ? ಗಣರಾಜ್ಯೋತ್ಸವದ ಸಂದೇಶದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ‘ಸಿನಿಮಾ ನಿರ್ಮಾಣದ ಸೃಜನಾತ್ಮಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು’ ಬೆಂಬಲಿಸಿ ಮಾತನಾಡಿರುವುದು ಶ್ಲಾಘನೀಯ. ಆದರೆ ಕಾರ್ಯಾಂಗ ನಿರ್ವೀರ್ಯವಾಗುವಂತೆ ಶಾಸಕಾಂಗದ ಮುಖ್ಯಸ್ಥರು ಮೃದು ಧೋರಣೆ ತಳೆಯುವುದು ವಿಚ್ಛಿದ್ರಕಾರಿ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡಿದಂತೆಯೇ ಎನ್ನುವುದನ್ನು ಮರೆಯಬಾರದು. ‘ಪದ್ಮಾವತ್‌’ ಸಿನಿಮಾದಲ್ಲಿ ‘ರಂಜನೆಯೇ ಮುಖ್ಯವಾಗಿದ್ದು, ಸತಿಸಹಗಮನ ಪದ್ಧತಿಯನ್ನು ವೈಭವೀಕರಿಸಲಾಗಿದೆ, ಇದೊಂದು ಆತ್ಮವಿಲ್ಲದ ಚಿತ್ರ’ ಎಂಬ ಟೀಕೆಗಳು ಈಗಾಗಲೇ ಕೇಳಿಬಂದಿವೆ. ಅದು ನಿರ್ದೇಶಕರ ಮಿತಿಯನ್ನು ಸೂಚಿಸುತ್ತದೆ. ಸಿನಿಮಾ ಚೆನ್ನಾಗಿಲ್ಲದಿದ್ದರೆ ಜನರೇ ತಿರಸ್ಕರಿಸುತ್ತಾರೆ. ಸಿನಿಮಾಗೆ ತಡೆಒಡ್ಡುವ ಸಂವಿಧಾನಬಾಹಿರ ಶಕ್ತಿಗಳನ್ನು ಕಠಿಣ ಕ್ರಮ ಕೈಗೊಂಡು ಮಟ್ಟ ಹಾಕದಿದ್ದರೆ ಇಡೀ ದೇಶಕ್ಕೆ ಅಪಾಯ ಕಾದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry