ಫೈನಲ್‌ಗೆ ರೋಜರ್ ಫೆಡರರ್

7

ಫೈನಲ್‌ಗೆ ರೋಜರ್ ಫೆಡರರ್

Published:
Updated:
ಫೈನಲ್‌ಗೆ ರೋಜರ್ ಫೆಡರರ್

ಮೆಲ್ಬರ್ನ್‌: ದೈತ್ಯರನ್ನು ಸದೆಬಡಿದು ಮುನ್ನುಗ್ಗಿದ ದಕ್ಷಿಣ ಕೊರಿಯಾದ ಚುಂಗ್‌ ಹೆಯಾನ್‌ ಸ್ವಿಟ್ಜರ್ಲೆಂಡ್ ಆಟಗಾರ ರೋಜರ್ ಫೆಡರರ್ ಅವರ ಮುಂದೆ ನಿರುತ್ತರರಾದರು. ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಹಣಾಹಣಿಯ ಆರಂಭದಲ್ಲೇ ಮುಗ್ಗರಿಸಿದ ಅವರು ಎರಡನೇ ಸೆಟ್‌ನಲ್ಲಿ ಪಾದದ ನೋವಿನಿಂದಾಗಿ ಹಿಂದೆ ಸರಿದರು.

ಇಲ್ಲಿನ ರಾಡ್‌ ಲೇವರ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ರೋಜರ್ ಫೆಡರರ್‌ 6–1, 5–2ರ ಮುನ್ನಡೆ ಸಾಧಿಸಿದ್ದಾಗ ಚುಂಗ್‌ ತೀವ್ರ ನೋವಿಗೆ ಒಳಗಾಗಿ ಕಣದಿಂದ ನಿವೃತ್ತರಾಗಲು ನಿರ್ಧರಿಸಿದರು. ಇದರಿಂದಾಗಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಏಳನೇ ಬಾರಿ ಫೈನಲ್‌ಗೇರುವ ಫೆಡರರ್ ಹಾದಿ ಸುಗಮಗೊಂಡಿತು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಫೆಡರರ್‌ ಅವರು ಮರಿನ್ ಸಿಲಿಕ್‌ ಎದುರು ಸೆಣಸುವರು.

ಆಸ್ಟ್ರೇಲಿಯಾ ಓಪನ್‌ನ ಸೆಮಿಫೈನಲ್ ತಲುಪಿದ ದಕ್ಷಿಣ ಕೊರಿಯಾದ ಮೊದಲ ಆಟಗಾರ ಎಂಬ ಹೆಸರನ್ನು ತಮ್ಮದಾಗಿಸಿಕೊಂಡಿದ್ದ ಚುಂಗ್‌ ವಿರುದ್ಧ ಎದುರಾಳಿ ಆಟಗಾರ ಆರಂಭದಲ್ಲೇ ಆಧಿಪತ್ಯ ಸ್ಥಾಪಿಸಿದರು. ನಾಲ್ಕು ಸರ್ವ್‌ಗಳನ್ನು ಬ್ರೇಕ್‌ ಮಾಡಿ ಕಂಗೆಡಿಸಿದರು. 14 ಗೇಮ್‌ಗಳಲ್ಲಿ ಒಟ್ಟು 17 ತಪ್ಪುಗಳನ್ನು ಎಸಗಿದ ಚುಂಗ್‌ ಯಾವ ಹಂತದಲ್ಲೂ ಫೆಡರರ್‌ಗೆ ಸಾಟಿಯಾಗಲಿಲ್ಲ.

ಮಹಿಳೆಯರ ಪೈಪೋಟಿ: ಸಿಮೊನಾ ಹಲೆಪ್‌ ಮತ್ತು ಕರೊಲಿನಾ ವೋಜ್ನಿಯಾಕಿ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಶನಿವಾರ

ಎದುರಾಗಲಿದ್ದಾರೆ.

ಈ ಪಂದ್ಯದಲ್ಲಿ ಗೆದ್ದವರು ವೃತ್ತಿ ಬದುಕಿನ ಚೊಚ್ಚಲ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಅವರು ಫೈನಲ್ ತಲುಪುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.

ಎರಡನೇ ಪ್ರಶಸ್ತಿಯತ್ತ ಬೋಪಣ್ಣ

ಭಾರತದ ರೋಹನ್ ಬೋಪಣ್ಣ ಎರಡನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯ ಸನಿಯ ತಲುಪಿದ್ದಾರೆ. ಇಲ್ಲಿ ಶುಕ್ರವಾರ ನಡೆದ ಮಿಶ್ರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಬೋಪಣ್ಣ ಮತ್ತು ಹಂಗೆರಿಯ ಟಿಮಿಯಾ ಬೆಬೋಸ್‌ ಜಯ ಸಾಧಿಸಿದರು.

ಬ್ರೆಜಿಲ್‌ನ ಮಾರ್ಸೆಲೊ ಡೆಮೊಲಿನರ್‌ ಮತ್ತು ಸ್ಪೇನ್‌ನ ಮರಿಯಾ ಜೋಸ್‌ ಮಾರ್ಟಿನೆಜ್ ಅವರನ್ನು ಬೋಪಣ್ಣ–ಟಿಮಿಯಾ ಜೋಡಿ 7–5, 5–7, 10–6ರಿಂದ ಮಣಿಸಿದರು. ಕಳೆದ ವರ್ಷ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕೆನಡಾದ ಗ್ಯಾಬ್ರಿಯೆಲಾ ದಬ್ರೋವ್‌ಸ್ಕಿ ಅವರ ಜೊತೆಗೂಡಿ ಬೋಪಣ್ಣ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ಗೆದ್ದಿದ್ದರು.

ಈ ಬಾರಿ ಫೈನಲ್‌ನಲ್ಲಿ ಅವರ ಎದುರಾಳಿಗಳಲ್ಲಿ ಗ್ಯಾಬ್ರಿಯೆಲಾ ಕೂಡ ಇದ್ದಾರೆ. ಕ್ರೊವೇಷಿಯಾದ ಮೇಟ್ ಪಾವಿಕ್‌ ಜೊತೆಗೂಡಿ ಗ್ಯಾಬ್ರಿಯೆಲಾ ಕಣಕ್ಕೆ ಇಳಿಯುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry