ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮಿತ್‌ ಶಾ ಮಾಜಿ ಜೈಲು ಹಕ್ಕಿ’: ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಕೊಟ್ಟ ತಿರುಗೇಟು ಜಗಳಕ್ಕೆ ದಾರಿ ಮಾಡಿಕೊಟ್ಟಿದೆ.

ಸಿದ್ದರಾಮಯ್ಯ ಹಾಗೂ ಕೇಂದ್ರ ಸಾಂಖ್ಯಿಕ ಸಚಿವ ಡಿ.ವಿ. ಸದಾನಂದಗೌಡ ತಮ್ಮ ಟ್ವಿಟರ್‌ ಖಾತೆಯಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದು, ಎರಡೂ ಪಕ್ಷಗಳ ಅಭಿಮಾನಿ ಟ್ವಿಟ್ಟಿಗರು ಟೀಕಾಪ್ರಹಾರ ನಡೆಸಿದ್ದಾರೆ.

ಮೈಸೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡಿದ್ದ ಶಾ, ‘ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರದ ಎಲ್ಲೆ ಮೀರಿದೆ. ಸಿದ್ದರಾಮಯ್ಯ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಸಿದ್ದರಾಮಯ್ಯ. ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ವಾಗ್ದಾಳಿ ನಡೆಸಿದ್ದರು.

‘ಕರ್ನಾಟಕ ಚುನಾವಣೆಯಲ್ಲಿ ಮಾಜಿ ಜೈಲು ಹಕ್ಕಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಮಾಜಿ ಜೈಲು ಹಕ್ಕಿಯೊಬ್ಬರು ಈ  ರೀತಿ ಹೇಳುತ್ತಿದ್ದಾರೆ. ನನ್ನ ಮತ್ತು ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಲೆಕ್ಕವನ್ನು ಕೊಡಲು ಇವರಿಂದ ಸಾಧ್ಯವೆ? ಸುಳ್ಳುಗಳಿಂದ ಪ್ರಯೋಜನವಾಗುವುದಿಲ್ಲ, ಜನರು ಇದನ್ನೆಲ್ಲಾ ನಂಬುವುದಿಲ್ಲ’ ಎಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಶಾ ಹೆಸರು ಹೇಳದೇ ಕುಟುಕಿದ್ದಾರೆ.

ಇದಕ್ಕೆ ರಿಟ್ವೀಟ್‌ ಮಾಡಿರುವ ಡಿ.ವಿ. ಸದಾನಂದಗೌಡ, ‘ನಿಮ್ಮ ಪಕ್ಷದಿಂದ ಪ್ರಧಾನಿಯಾಗಿದ್ದವರು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ತುರ್ತುಪರಿಸ್ಥಿತಿ ಹೇರಿದರು. ನಿಮ್ಮ ಪಕ್ಷದ ಮುಖ್ಯಸ್ಥರು ಭ್ರಷ್ಟಾಚಾರದ ಸರಮಾಲೆಯನ್ನೇ ಹೊತ್ತುಕೊಂಡಿದ್ದಾರೆ. ನಿಮ್ಮ ವಿರುದ್ಧ ದೂರು ದಾಖಲಾದ ಕೂಡಲೇ ರಕ್ಷಣೆಗಾಗಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಿ ಬಚಾವಾಗಿದ್ದೀರಿ. ಬಿಜೆಪಿಯನ್ನು ಟೀಕಿಸಲು ನಿಮಗೆ ನೈತಿಕ ಹಕ್ಕಿಲ್ಲ’ ಎಂದು ಟೀಕಿಸಿದ್ದಾರೆ.

‘ಅಮಿತ್ ಶಾ ಮಗನ ಆಸ್ತಿ ಮೂರು ವರ್ಷಗಳ ಅವಧಿಯಲ್ಲಿ 16,000 ಪಟ್ಟು ಹೆಚ್ಚಾಗಿದ್ದು ಹೇಗೆ ಎನ್ನುವುದನ್ನು ಪಕ್ಷದ ಅಧ್ಯಕ್ಷರ ಸಮರ್ಥನೆಗೆ ಇಳಿದಿರುವ ಕೇಂದ್ರ ಅಂಕಿಅಂಶ (ಸಾಂಖ್ಯಿಕ) ಸಚಿವ ಸದಾನಂದ ಗೌಡರು ಉತ್ತರಿಸುವರಾ’ ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲೇ ಪ್ರಶ್ನಿಸಿದ್ದಾರೆ.

‘ಅನೇಕ ಸಲ ಬಜೆಟ್‌ ಮಂಡಿಸಿರುವ ನಿಮಗೆ ವಾರ್ಷಿಕ ವಹಿವಾಟಿಗೂ, ನಿವ್ವಳ ಲಾಭಕ್ಕೂ ಇರುವ ವ್ಯತ್ಯಾಸ ಗೊತ್ತಿದೆ ಅಂದುಕೊಂಡಿದ್ದೆ. ನಿಮ್ಮ ಚೇಲಾಗಳೇ ನಿಮಗೆ ಇಂಟೆಲಿಜೆನ್ಸ್, ನಿಮಗೆ ಬೇರೆ ಇಲಾಖೆ ಇಲ್ಲ. ಹಾಗಾಗಿ ನಿಮಗಿರುವ ಅಲ್ಪ ಮಾಹಿತಿಯಿಂದ ಈ ಹೇಳಿಕೆ ನೀಡಿದ್ದೀರಾ’ ಎಂದು ಸದಾನಂದಗೌಡ ಟ್ವಿಟರ್‌ನಲ್ಲೇ ತಿವಿದಿದ್ದಾರೆ.

‘ರೈಲ್ವೆ ಖಾತೆಯಿಂದ ಕಾನೂನು ಖಾತೆ, ಕಾನೂನು ಖಾತೆಯಿಂದ ಸಾಂಖ್ಯಿಕ ಖಾತೆ. ಇದು ನಿಮ್ಮ ಸಾಧನೆಗೆ ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷರು ನೀಡಿದ ಗೌರವ! ಅಮಿತ್‌ ಶಾ ಬೆಂಬಲಿಸದಿದ್ದರೆ ನಿಮ್ಮ ಕತೆ ಮುಂದೇನೋ’ ಎಂದು ಸಿದ್ದರಾಮಯ್ಯ ಕಟಕಿಯಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸದಾನಂದಗೌಡ, ‘ಸಿದ್ದರಾಮಯ್ಯರೇ ಹೆತ್ತ ತಾಯಿಗೂ ನನ್ನ ಪಕ್ಷಕ್ಕೂ ಯಾವುದೇ ವ್ಯತ್ಯಾಸವಿಲ್ಲ. ನಿಷ್ಠಾವಂತ ಕಾರ್ಯಕರ್ತನಾಗಿ ಜವಾಬ್ದಾರಿ ನಿಭಾಯಿಸುವುದು ನನ್ನ ಕೆಲಸ. ಅದರ ಮುಂದೆ ಹುದ್ದೆ, ಪದವಿ ನಗಣ್ಯ. ಬೆಳೆಸಿದ ಪಕ್ಷ, ಬೆಳೆಸಿದ ಹಿರಿಯರ ಋಣದ ಅರಿವಿಲ್ಲದ ನಿಮಗೆ ಇದು ಅರ್ಥವಾಗುವುದಿಲ್ಲ ಬಿಡಿ. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಇದು ನಿಮಗೆ ಈಗಾಗಲೇ ಗೊತ್ತಿದೆ’ ಎಂದು ಜಗಳಕ್ಕೆ ತೆರೆ ಎಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT