ಸಾಲ ಸುಲಭ: ಕೇಂದ್ರ ಅಭಯ

7
ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ಕುಮಾರ್‌

ಸಾಲ ಸುಲಭ: ಕೇಂದ್ರ ಅಭಯ

Published:
Updated:
ಸಾಲ ಸುಲಭ: ಕೇಂದ್ರ ಅಭಯ

ನವದೆಹಲಿ: ‘ಇತ್ತೀಚೆಗೆ ಪ್ರಕಟಿಸಲಾಗಿರುವ ಬ್ಯಾಂಕಿಂಗ್‌ ಸುಧಾರಣಾ ಕ್ರಮಗಳಿಂದಾಗಿ ಪ್ರಾಮಾಣಿಕ ಸಾಲಗಾರರು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಪಡೆಯಬಹುದು’ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜ್‌ಕುಮಾರ್‌ ಹೇಳಿದ್ದಾರೆ.

‘ಪ್ರಾಮಾಣಿಕ ಸಾಲಗಾರರಿಗೆ ಯಾವುದೇ ಅಡಚಣೆಗಳನ್ನು ಒಡ್ಡದೆ ಸುಲಭವಾಗಿ ಸಾಲ ವಿತರಿಸುವುದು ಈ ಸುಧಾರಣಾ ಕ್ರಮಗಳ ಮುಖ್ಯ ಉದ್ದೇಶವಾಗಿದೆ. ಸಾಲ ವಿತರಣೆಯನ್ನು ಇನ್ನಷ್ಟು ಸುಲಭಗೊಳಿಸಲಾಗುವುದು. ಜಿಎಸ್‌ಟಿ ರಿಟರ್ನ್‌ ಸಲ್ಲಿಸುವವರಿಂದ ಬ್ಯಾಂಕ್‌ಗಳಿಗೆ ಹಣದ ಹರಿವಿನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ. ಇದನ್ನು ಆಧರಿಸಿ ಬ್ಯಾಂಕ್‌ಗಳು ಸಾಲ ಮಂಜೂರು ಮಾಡಲಿವೆ.

‘ಸಾಲ ನೀಡಿಕೆಯಲ್ಲಿ ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಹಣಕಾಸು ಸೇರ್ಪಡೆ ಮತ್ತು ಉದ್ಯೋಗ ಸೃಷ್ಟಿಗೂ ಗಮನ ಕೇಂದ್ರೀಕರಿಸಲಾಗುವುದು. ‘ಎಂಎಸ್‌ಎಂಇ’ಗಳು ಸಾಲಕ್ಕೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಲು, ಅರ್ಜಿಗಳನ್ನು ಶೇ 100ರಷ್ಟು ಸ್ವಯಂಚಾಲಿತವಾಗಿ ನಿರ್ವಹಿಸಲು ಮತ್ತು ಸಾಲ ಮಂಜೂರಾತಿ ನಿರ್ಧಾರದ ಬಗ್ಗೆ ಪ್ರತಿಯೊಂದು ಹಂತದಲ್ಲಿಯೂ ನಿಗಾ ವಹಿಸಲು ನಿರ್ಧರಿಸಲಾಗಿದೆ.

‘ಉದ್ಯಮಿಮಿತ್ರಡಾಟ್‌ಕಾಮ್‌ (Udyamimitra.com) ಅಂತರ್ಜಾಲ ತಾಣದಲ್ಲಿ ಸಲ್ಲಿಕೆಯಾಗುವ ಸಾಲದ ಅರ್ಜಿಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸಲು ಕಾಲ ಮಿತಿ ನಿಗದಿಪಡಿಸಲಾಗಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚಿಗೆ ಪ್ರಕಟಿಸಿರುವ ಬ್ಯಾಂಕಿಂಗ್ ಸುಧಾರಣಾ ಕ್ರಮಗಳ ಜತೆಗೆ, 20 ಬ್ಯಾಂಕ್‌ಗಳಿಗೆ ಪ್ರಸಕ್ತ ಹಣಕಾಸು ವರ್ಷದ ಒಳಗೆ ₹88 ಸಾವಿರ ಕೋಟಿಗಳ ಪುನರ್ಧನ ಒದಗಿಸಲಿದೆ. ಇದರಿಂದ ಬ್ಯಾಂಕ್‌ಗಳ ಸಾಲ ನೀಡುವ ಸಾಮರ್ಥ್ಯ ಹೆಚ್ಚಲಿದೆ, ಜತೆಗೆ ಆರ್ಥಿಕತೆಯೂ

ಚೇತರಿಸಿಕೊಳ್ಳಲಿದೆ.

‘ಮುದ್ರಾ’ ಸಾಧನೆ

2015ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ‘ಮುದ್ರಾ’ ಯೋಜನೆಗೆ ಬ್ಯಾಂಕ್‌ಗಳು ಹೆಚ್ಚು ಗಮನ ನೀಡಬೇಕೆಂದು ಸೂಚಿಸಲಾಗಿದೆ. ಇದುವರೆಗೆ 8.90 ಲಕ್ಷ ಫಲಾನುಭವಿಗಳು ₹ 3.80 ಲಕ್ಷ ಕೋಟಿಯ ನೆರವು ಪಡೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry