‘ನ್ಯಾಯಯುತ ಅವಕಾಶ ಕಲ್ಪಿಸಿದ ಸಂವಿಧಾನ’

7

‘ನ್ಯಾಯಯುತ ಅವಕಾಶ ಕಲ್ಪಿಸಿದ ಸಂವಿಧಾನ’

Published:
Updated:

ವಿಜಯಪುರ: ‘ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಂಸ್ಕೃತಿಕ ಸಮಾನತೆಗೆ ಸಂವಿಧಾನವು ನ್ಯಾಯಯುತ ಅವಕಾಶ ಕಲ್ಪಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 69ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ‘ಸಂವಿಧಾನದ ಮೌಲ್ಯಯುತ ಪರಂಪರೆಯನ್ನು ರಕ್ಷಿಸಿ, ಮುನ್ನಡೆಸಿಕೊಂಡು ಹೋಗುವ ದೃಢ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಬೇಕಿದೆ’ ಎಂದು ತಿಳಿಸಿದರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರಲ್ಲಿನ ಕಾನೂನು ಪಾಂಡಿತ್ಯ, ಪ್ರತಿ ವಿಷಯಗಳನ್ನು ಆಳವಾಗಿ ವಿಶ್ಲೇಷಿಸುವ ಸೂಕ್ಷ್ಮತೆಗಳಿಂದಾಗಿ ಭಾರತ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿ ರೂಪುಗೊಳ್ಳಲು ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಅಂಬೇಡ್ಕರ್‌ ಅವರನ್ನು ಸಂವಿಧಾನ ಪಿತಾಮಹ ಎಂದು ಬಣ್ಣಿಸಲಾಗುತ್ತಿದೆ. ಸಂವಿಧಾನ ರಚನೆಯಲ್ಲಿ ಕನ್ನಡಿಗರ ಪಾತ್ರವೂ ಪ್ರಮುಖವಾಗಿದೆ, ಬೆನಗಲ್ ನರಸಿಂಹರಾವ್‌ ಸೇರಿದಂತೆ ಅನೇಕರು ಪ್ರಮುಖವಾದ ಪಾತ್ರ ವಹಿಸಿದ್ದರು’ ಎಂದು ಪಾಟೀಲ ಸ್ಮರಿಸಿದರು.

ಫೆಬ್ರುವರಿಯಲ್ಲಿ ಚಾಲನೆ 1.30 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ತುಬಚಿ–-ಬಬಲೇಶ್ವರ ಏತ ನೀರಾವರಿ ಯೋಜನೆಯು ಪ್ರಗತಿಯಲ್ಲಿದ್ದು, ಫೆಬ್ರುವರಿಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲು ಚಾಲನೆ ನೀಡಲಾಗುವುದು ಎಂದು ಎಂ.ಬಿ.ಪಾಟೀಲ ಇದೇ ಸಂದರ್ಭ ಪ್ರಕಟಿಸಿದರು.

ಈ ಯೋಜನೆಯಡಿ 6.30 ಟಿಎಂಸಿ ಅಡಿ ನೀರನ್ನು ಬಳಸಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಗಳ ಜಮೀನನ್ನು ನೀರಾವರಿ ಯೋಜನೆಗೊಳಪಡಿಸಲಾಗುವುದು. ಜಮಖಂಡಿ ತಾಲ್ಲೂಕಿನ ಹಳೆ ಕವಟಗಿ ಗ್ರಾಮದ ಬಳಿ ಇಂಟೇಕ್ ಕಾಲುವೆ, ಪಂಪ್‌ಹೌಸ್, ವಿದ್ಯುತ್ ಸ್ಥಾವರದ ಕಾಮಗಾರಿಗಳು ಅಂತಿಮ ಹಂತಕ್ಕೆ ತಲುಪಿವೆ ಎಂದು ಹೇಳಿದರು.

ಸೈಕ್ಲಿಂಗ್ ಕಾಶಿ ವಿಜಯಪುರದಲ್ಲಿ ಸೈಕ್ಲಿಸ್ಟ್‌ಗಳ ಅನುಕೂಲಕ್ಕಾಗಿ ಭೂತನಾಳ ಸಮೀಪ ₹ 7.34 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸೈಕ್ಲಿಂಗ್ ವೆಲೊಡ್ರೋಮ್ ಕಾಮಗಾರಿ ಶೇ 75ರಷ್ಟು ಪೂರ್ಣಗೊಂಡಿದ್ದು, ಶೀಘ್ರವೇ ಅದನ್ನು ಲೋಕಾರ್ಪಣೆ ಮಾಡಲಾಗುವುದು.

ವಿಜಯಪುರ ನಗರದಲ್ಲಿ ₹ 25 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿ ಸೇರಿದಂತೆ ಪ್ರಮುಖವಾಗಿ ವಿಜಯಪರ, ಬಾಗಲಕೋಟೆ ಜಿಲ್ಲೆಗಳಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ವೃಕ್ಷ ಅಭಿಯಾನ ಯೋಜನೆಯಡಿ 10 ಲಕ್ಷ ಸಸಿಗಳನ್ನು ಬೆಳೆಸಲಾಗುತ್ತಿದೆ. ಈಗಾಗಲೇ 3 ಲಕ್ಷ ಸಸಿಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

ವಿಜಯಪುರ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಲ್ಭಣಗೊಳ್ಳದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಲಮಟ್ಟಿ ಜಲಾಶಯದ ಡೆಡ್ ಸ್ಟೋರೇಜ್‌ನಿಂದ ಕೊಲ್ಹಾರ ಹತ್ತಿರ ಕುಡಿಯುವ ನೀರಿನ ಟ್ರೀಟ್‌ಮೆಂಟ್‌ ಪ್ಲಾಂಟ್‌ಗೆ ನೀರನ್ನು ತುಂಬಿಸುವ ₹ 99.30 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವನೆಗೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಅನುಮೋದನೆ ದೊರೆತಿದೆ.

ಇದರ ಜತೆಗೆ ₹ 31 ಕೋಟಿ ವೆಚ್ಚದಲ್ಲಿ ಬಸವನಬಾಗೇವಾಡಿ ತಾಲ್ಲೂಕಿನ ಕೊರ್ತಿ-ಕೊಲ್ಹಾರ ಬ್ರಿಜ್ ಕಂ-ಬ್ಯಾರೇಜ್ ಎತ್ತರಕ್ಕೆ ಅನುಮತಿ, ₹ 32 ಕೋಟಿ ವೆಚ್ಚದಲ್ಲಿ ಗಲಗಲಿ ಬ್ಯಾರೇಜ್ ಬಲವರ್ಧನೆಗೆ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಹೇಳಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಜಿ.ಪಂ.ಅಧ್ಯಕ್ಷೆ ನೀಲಮ್ಮ ಮೇಟಿ, ವಿಜಯಪುರ ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ, ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ, ಮೇಯರ್ ಸಂಗೀತಾ ಪೋಳ, ಉಪ ಮೇಯರ್ ರಾಜೇಶ ದೇವಗಿರಿ, ವಿಡಿಎ ಅಧ್ಯಕ್ಷ ಆಜಾದ್ ಪಟೇಲ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್‌ ಆರ್‌.ಜೈನ್‌, ಜಿ.ಪಂ. ಸಿಇಓ ಎಂ.ಸುಂದರೇಶಬಾಬು ಉಪಸ್ಥಿತರಿದ್ದರು.

* * 

ಏಕತೆ ತತ್ವದಲ್ಲಿ ಬಾಳ್ವೆ ನಡೆಸುತ್ತಿರುವ ನಾವೆಲ್ಲರೂ ಭವ್ಯ ಪರಂಪರೆ ರಕ್ಷಿಸಬೇಕಿದೆ. ದೇಶಕ್ಕೆ, ಏಕತೆಗೆ ಧಕ್ಕೆ ತರುವಂತಹ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ

ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry