ಜಾತ್ರೆಗೆ ಸಿಸಿಟಿವಿ, ಡ್ರೋನ್ ಕ್ಯಾಮೆರಾ ಕಣ್ಗಾವಲು

7

ಜಾತ್ರೆಗೆ ಸಿಸಿಟಿವಿ, ಡ್ರೋನ್ ಕ್ಯಾಮೆರಾ ಕಣ್ಗಾವಲು

Published:
Updated:

ಉಚ್ಚಂಗಿದುರ್ಗ: ಜನವರಿ 30ರಿಂದ ಫೆ. 1ರವರೆಗೆ ನಡೆಯಲಿರುವ ಭರತ ಹುಣ್ಣಿಮೆ ಜಾತ್ರೆಗೆ ಲಕ್ಷಕ್ಕೂ ಅಧಿಕ ಭಕ್ತರು ಬರಲಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಇಲ್ಲಿನ ಗ್ರಾಮ ಪಂಚಾಯ್ತಿ ಆವರಣದಲ್ಲಿ ಈಚೆಗೆ ನಡೆದ ಈ ಸಭೆಯಲ್ಲಿ ಸಾರಿಗೆ ವ್ಯವಸ್ಥೆ, ವಿದ್ಯುತ್‌, ಕುಡಿಯುವ ನೀರು, ತೋಪಿನ ಮಾರ್ಗ, ವೈದ್ಯಕೀಯ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು.

ಹರಪನಹಳ್ಳಿ ಉಪ ವಿಭಾಗಧಿಕಾರಿ ನಜ್ಮಾ ಮಾತನಾಡಿ, ‘ಕುಡಿಯುವ ನೀರಿಗಾಗಿ ಹೆಚ್ಚುವರಿ ಟ್ಯಾಂಕರ್‌ಗಳನ್ನು ಬಳಸಿಕೊಳ್ಳಬೇಕು. ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ದಾವಣಗೆರೆ, ಹರಪನಹಳ್ಳಿ ಹಾಗೂ ಇತರ ತಾಲ್ಲೂಕುಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು. ತಾತ್ಕಾಲಿಕ ಶೌಚಾಲಯ, ಸ್ನಾನಗೃಹ ನಿರ್ಮಿಸಲಾಗುವುದು. ತುರ್ತು ಚಿಕಿತ್ಸಾ ಕೇಂದ್ರ ತೆರೆಯಲಾಗುವುದು’ ಎಂದು ಹೇಳಿದರು.

‘ಜಾತ್ರೆಯಲ್ಲಿ ಮುತ್ತು ಕಟ್ಟುವ ಪದ್ಧತಿ ನಡೆಯುವುದನ್ನು ತಡೆಯಲು ಸಿಸಿಟಿವಿ ಕ್ಯಾಮೆರಾ ಹಾಗೂ ಡ್ರೋನ್ ಕ್ಯಾಮೆರಾ ಅಳವಡಿಸಲಾಗುವುದು’ ಎಂದರು. ‘ಅಧಿಕಾರಿಗಳ ಹಾಗೂ ಸ್ವಯಂ ಸೇವಕರ ಸಹಾಯದಿಂದ ಎರಡು ವರ್ಷಗಳಿಂದ ಸಾಮಾಜಿಕ ಅನಿಷ್ಟ ಪದ್ಧತಿ ಮರುಕಳಿಸಿಲ್ಲ. ಈ ವರ್ಷವೂ ಅದಕ್ಕೆ ಆಸ್ಪದ ನೀಡಬಾರದು’ ಎಂದು ಸೂಚಿಸಿದರು.

ತಹಶೀಲ್ದಾರ್‌ ಗುರುಬಸವರಾಜ್, ಪಿಎಸ್ಐ ಪ್ರಸಾದ್, ಉಪ ತಹಶೀಲ್ದಾರ್ ಫಾತೀಮಾ, ಪುರಾತತ್ವ ಇಲಾಖೆ ಅಧಿಕಾರಿ ಗಿರೀಶ್, ತಾಲ್ಲೂಕು ಕುಡಿಯುವ ನೀರು ಸರಬರಾಜು ಅಧಿಕಾರಿ ಜಯಣ್ಣ, ಪಿಡಿಒ ಅಂಜಿನಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕುರುಡಿ ಗಂಗಮ್ಮ, ದೇವಸ್ಥಾನ ಸಮಿತಿ ಅಧ್ಯಕ್ಷ ಕೆಂಚಪ್ಪ, ಸದಸ್ಯ ಶಿವಕುಮಾರ್ ಸ್ವಾಮಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಶಾಂತಿ ಕಾಪಾಡಲು ಸೂಚನೆ

ಉಚ್ಚಂಗಿದುರ್ಗ: ಭರತ ಹುಣ್ಣಿಮೆ ಅಂಗವಾಗಿ ಗ್ರಾಮದಲ್ಲಿ ನಡೆಯುವ ಜಾತ್ರೆ ವೇಳೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಅರಸೀಕೆರೆ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಪಿ. ಪ್ರಸಾದ್ ಸೂಚಿಸಿದರು.

ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ‘ಬೆಟ್ಟದ ರಸ್ತೆ ಕಿರಿದಾಗಿದೆ. ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಅಂಗಡಿಗಳನ್ನು ನಿರ್ಮಿಸಿಕೊಳ್ಳಬೇಕು. ಸಂಚಾರ ಸಮಸ್ಯೆ ನಿವಾರಣೆಗೆ ಎರಡು ಕಡೆ ಬಸ್‌ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ದೇವದಾಸಿ ಹಾಗೂ ಮುತ್ತು ಪಟ್ಟುವ ಪದ್ಧತಿ ಆಚರಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊಂಡಗಳಲ್ಲಿ ಬುತ್ತಿ, ಕಾಳಿನಂತಹ ಪದಾರ್ಥಗಳನ್ನು ಎಸೆಯುವುದು, ದ್ವಾರಬಾಗಿಲ ಕಂಬಗಳಿಗೆ ಹಾಗೂ ದೇವಸ್ಥಾನದ ಗೋಡೆಗೆ ಬಾಳೆ ಹಣ್ಣುಗಳನ್ನು ತಿಕ್ಕುವುದು ಕಂಡು ಬಂದರೆ ದಂಡ ವಿಧಿಸಲಾಗುವುದು’ ಎಂದು ತಿಳಿಸಿದರು.

ಗ್ರಾಮದ ಮುಖಂಡರಾದ ಕುರುಡಿ ಮಂಜಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ಶಿವಕುಮಾರ್, ಉಮೇಶ್, ರಮೇಶ್, ದೇವಸ್ಥಾನ ಸಮಿತಿ ಅಧ್ಯಕ್ಷ ಕೆಂಚಪ್ಪ, ಸದಸ್ಯಾರಾದ ಶಿವಕುಮಾರ್ ಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry