ಜನಪರ ಪ್ರಣಾಳಿಕೆ: ರಾಹುಲ್‌ ಸಲಹೆ

7

ಜನಪರ ಪ್ರಣಾಳಿಕೆ: ರಾಹುಲ್‌ ಸಲಹೆ

Published:
Updated:
ಜನಪರ ಪ್ರಣಾಳಿಕೆ: ರಾಹುಲ್‌ ಸಲಹೆ

ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ‘ಜನಪರವಾದ ಪ್ರಣಾಳಿಕೆ’ ಸಿದ್ಧಪಡಿಸುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.

ಗುಜರಾತ್‌ ಕಾಂಗ್ರೆಸ್‌ ಪ್ರಣಾಳಿಕೆ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಜನಸಾಮಾನ್ಯರ ಬೇಕು, ಬೇಡಿಕೆ ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆ ರೂಪಿಸಬೇಕು. ಜನಸಾಮಾನ್ಯರ ಆಶಯಗಳಿಗೆ ಅದು ಪೂರಕವಾಗಿರಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ನೇತೃತ್ವದ ತಂಡ ಈಗಾಗಲೇ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದೆ.

ಕಾಂಗ್ರೆಸ್‌ ಪ್ರಣಾಳಿಕೆ ಕರ್ನಾಟಕದ ಜನರ ನಿರೀಕ್ಷೆಗಳಿಗೆ ಸ್ಪಂದಿಸುವಂತಿರಬೇಕು. ಅದಕ್ಕಾಗಿ ಜನಸಾಮಾನ್ಯರ, ತಜ್ಞರ ಅಭಿಪ್ರಾಯ ಪಡೆಯುವಂತೆ ರಾಹುಲ್‌ ಸೂಚಿಸಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಮಧು ಗೌಡ ಯಕ್ಷಿ ತಿಳಿಸಿದ್ದಾರೆ.

ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗುವುದು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಕೈಗೊಂಡ ಅನೇಕ ಜನಪರ ಯೋಜನೆ ಪಕ್ಷದ ಗೆಲುವಿಗೆ ನೆರವಾಗಲಿವೆ ಎಂದರು.

ಪಕ್ಷದ ನಾಯಕರು ಕಚೇರಿಯಲ್ಲಿ ಕುಳಿತು ಸಿದ್ಧಪಡಿಸುವುದಕ್ಕಿಂತ ಸಮಾಜದ ವಿವಿಧ ಸ್ತರಗಳ ಜನರೊಂದಿಗೆ ಚರ್ಚಿಸಿ ಪ್ರಣಾಳಿಕೆ ಸಿದ್ಧಪಡಿಸುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್‌ ಚುನಾವಣೆಗೂ ಮುನ್ನ ಟೆಲಿಕಾಂ ತಜ್ಞ ಸ್ಯಾಮ್‌ ಪಿತ್ರೋಡಾ ಸಮಾಜದ ವಿವಿಧ ಕ್ಷೇತ್ರಗಳ ತಜ್ಞರು, ಜನರನ್ನು ಸಂಪರ್ಕಿಸಿ ಪ್ರಣಾಳಿಕೆ ಸಿದ್ಧಪಡಿಸಿದ್ದರು. ಶಿಕ್ಷಣ, ಆರೋಗ್ಯ ಸೇವೆ, ಉದ್ಯೋಗಾವಕಾಶ, ಪರಿಸರ ಸೇರಿದಂತೆ ಆದ್ಯತಾ ವಲಯಗಳ ಮೇಲೆ ಗಮನ ಹರಿಸಲಾಗಿತ್ತು.

* ಆಸನ ಮೀಸಲಿಡಲು ಶಿಷ್ಟಾಚಾರ ಪಾಲಿಸಲಾಗಿದೆ. ದೇಶದಲ್ಲಿ ಈಗಲೂ ಕಾಂಗ್ರೆಸ್‌ ಅಧಿಕಾರದಲ್ಲಿದೆ ಎಂದು ರಾಹುಲ್‌ ಗಾಂಧಿ ತಪ್ಪು ತಿಳಿದಂತಿದೆ.

–ಜಿವಿಎಲ್‌ ನರಸಿಂಹ ರಾವ್‌, ಬಿಜೆಪಿ ರಾಷ್ಟ್ರೀಯ ವಕ್ತಾರ

ರಾಹುಲ್‌ಗೆ ಹಿಂದಿನ ಸಾಲಿನ ಕುರ್ಚಿ: ಕಾಂಗ್ರೆಸ್‌ –ಬಿಜೆಪಿ ವಾಕ್ಸಮರ

ಗಣರಾಜ್ಯೋತ್ಸವ ಪಥಸಂಚಲನ ವೀಕ್ಷಣೆಗಾಗಿ ಗಣ್ಯರಿಗಾಗಿ ಮೀಸಲಾಗಿಡಲಾಗಿದ್ದ ಆಸನ ವ್ಯವಸ್ಥೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ  ಅವರನ್ನು ಆರನೇ ಸಾಲಿನಲ್ಲಿ ಕೂರಿಸಿದ್ದು ಕಾಂಗ್ರೆಸ್‌–ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಉದ್ದೇಶಪೂರ್ವಕವಾಗಿ ರಾಹುಲ್‌ ಗಾಂಧಿ ಅವರಿಗೆ ಆರನೇ ಸಾಲಿನಲ್ಲಿ ಆಸನ ನೀಡುವ ಮೂಲಕ ಅವಮಾನ ಮಾಡಲಾಗಿದೆ. ಈ ಹಿಂದಿನಿಂದ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯ ಬಿಟ್ಟು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಕ್ಷುಲ್ಲಕ ರಾಜಕಾರಣ ಪ್ರದರ್ಶಿಸಿದೆ ಎಂದು ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ.

‘ಈ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರಿಗೆ ಗಣ್ಯರ ಸಾಲಿನಲ್ಲಿ ಕುರ್ಚಿಗಳನ್ನೇ ನೀಡಿರಲಿಲ್ಲ. ಆದರೂ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದ ನಾವು ಆ ವಿಷಯವನ್ನು ಎಂದಿಗೂ ವಿವಾದ ಮಾಡಲಿಲ್ಲ’ ಎಂದು ಬಿಜೆಪಿ ತಿರುಗೇಟು ನೀಡಿದೆ.

‘ಶಿಷ್ಟಾಚಾರದಂತೆ ವಿರೋಧ ಪಕ್ಷದ ನಾಯಕರಿಗೆ ಏಳನೇ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

‘ಕಾಂಗ್ರೆಸ್‌ ಮಟ್ಟಕ್ಕೆ ಉಳಿದಿಲ್ಲ’: ‘ಕೇಂದ್ರದಲ್ಲಿ ಈ ಹಿಂದೆ ಯುಪಿಎ ಆಡಳಿತದಲ್ಲಿ ಇದ್ದಾಗ ಗಣರಾಜ್ಯೋತ್ಸವ ಪಥಸಂಚಲನ ವೀಕ್ಷಣೆಗೆ ಬಿಜೆಪಿ ನಾಯಕರಾದ ರಾಜನಾಥ ಸಿಂಗ್‌ ಮತ್ತು ನಿತಿನ್‌ ಗಡ್ಕರಿ ಅವರನ್ನು ಎಲ್ಲಿ ಕುಳಿಸಲಾಗಿತ್ತು’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಅನಿಲ್‌ ಬಾಲುನಿ ಮತ್ತು ಜಿವಿಎಲ್‌ ನರಸಿಂಹ ರಾವ್‌ ಪ್ರಶ್ನಿಸಿದ್ದಾರೆ.

’ ಬಿಜೆಪಿ ನಾಯಕರಿಗೆ ಗಣ್ಯರಿಗೆ ಮೀಸಲಾಗಿದ್ದ ಆಸನ ವ್ಯವಸ್ಥೆಯಲ್ಲಿ ಕುರ್ಚಿ ನೀಡಿರಲಿಲ್ಲ. ಆದರೆ, ನಾವು ಕಾಂಗ್ರೆಸ್‌ ಮಟ್ಟಕ್ಕೆ ಇಳಿದಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರಿಗೆ ಕಳೆದ ವರ್ಷ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜತೆ ಮುಂದಿನ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಜತೆ ರಾಹುಲ್‌ ಆರನೇ ಸಾಲಿನಲ್ಲಿ ಕುಳಿತಿದ್ದರು. ಅಮಿತ್‌ ಶಾ ಮೊದಲ ಸಾಲಿನಲ್ಲಿ ಆಸೀನರಾಗಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry