ಮತದಾರರ ನೋಂದಣಿ ತ್ವರಿತಗೊಳಿಸಿ

7

ಮತದಾರರ ನೋಂದಣಿ ತ್ವರಿತಗೊಳಿಸಿ

Published:
Updated:

ಬೀದರ್‌: ‘ಜಿಲ್ಲೆಯಲ್ಲಿ ಮಹಿಳಾ ಮತದಾರರ ನೋಂದಣಿ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಸಬೇಕು’ ಎಂದು ಭಾರತ ಚುನಾವಣಾ ಆಯೋಗದ ಕಾರ್ಯನಿಮಿತ್ತ ಚುನಾವಣಾ ಮತದಾರರ ಪಟ್ಟಿ ವೀಕ್ಷಕ ಮೊಹಮ್ಮದ್ ಮೊಹಸಿನ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ತಾಲ್ಲೂಕುವಾರು ಪರಿಶೀಲನೆ ನಡೆಸಿ ಮಾತನಾಡಿದರು.

‘ನಗರ ಪ್ರದೇಶಗಳಲ್ಲಿ ಕೊಳೆಗೇರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು, ಅಲೆಮಾರಿಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ, ಹೊಸ ಮತದಾರರ ಹೆಸರು ನೋಂದಣಿ, ತಿದ್ದುಪಡಿಯನ್ನು ವ್ಯವಸ್ಥಿತವಾಗಿ ನಡೆಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ ಗಳನ್ನು ವ್ಯವಸ್ಥಿತವಾಗಿ ರೂಪಿಸುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಗೆ ಒತ್ತು ಕೊಡಲಾಗಿದೆ. ಹೊಸ ಮತದಾರರ ನೋಂದಣಿಗೆ ಆದ್ಯತೆ ನೀಡಲಾಗಿದೆ. ಶಾಲಾ-ಕಾಲೇಜು ಮಕ್ಕಳಿಂದ ಬೃಹತ್ ಕಾಲ್ನಡಿಗೆ ಮತ್ತು ಸೈಕಲ್ ಜಾಥಾಗಳನ್ನು ನಡೆಸಿ ಜನಜಾಗೃತಿ ಮೂಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ತಿಳಿಸಿದರು.

‘ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕರಪತ್ರ ಪ್ರಕಟಿಸಿ ವಿತರಿಸುವ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆರ್. ಸೆಲ್ವಮಣಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಡಿ.ಷಣ್ಮುಖ, ಉಪ ವಿಭಾಗಾಧಿಕಾರಿಗಳಾದ ಶಿವಕುಮಾರ ಶೀಲವಂತ, ಶರಣಬಸಪ್ಪ ಕೋಟಪ್ಪಗೋಳ, ತಹಶೀಲ್ದಾರ್‌ರಾದ ಕೀರ್ತಿ ಚಾಲಕ, ಚುನಾವಣಾ ತಹಶೀ ಲ್ದಾರ್‌ ಶಾಂತಲಾ ಚಂದನ್ ಇದ್ದರು.

ಸಭೆ: ಭಾರತ ಚುನಾವಣಾ ಆಯೋಗದ ಕಾರ್ಯನಿಮಿತ್ತ ಚುನಾವಣೆ ಪಟ್ಟಿ ವೀಕ್ಷಕ ಮೊಹಮ್ಮದ್ ಮೊಹಸಿನ್ ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲೆ ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳೊಂದಿಗೆ ಮತ್ತು ಸಾರ್ವಜನಿ ಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.

ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ ಸೇರಿದಂತೆ ಮತದಾರರ ಪಟ್ಟಿ ಪರಿಷ್ಕರಣೆಗೆ ಇನ್ನಷ್ಟು ಕಾಲಾವಕಾಶ ನೀಡಬೇಕು. ಮತದಾರರ ಭಾವಚಿತ್ರದೊಂದಿಗೆ ಇರುವ ಮತದಾರರ ಪಟ್ಟಿಯನ್ನು ನೀಡಬೇಕು ಎಂದು ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಕೋರಿದರು.

ಆಧಾರ್ ಕಾರ್ಡ್‌ ಅನ್ನು ಲಿಂಕ್ ಮಾಡಿ ಎರಡು ಕಡೆಗಳಲ್ಲಿ ಹೆಸರು ಇರುವುದಕ್ಕೆ ಕಡಿವಾಣ ಹಾಕಬೇಕು. ಮತದಾರರ ವಯಸ್ಸು ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎನ್ನುವ ಸಲಹೆ, ಸೂಚನೆಗಳು ಸಾರ್ವಜನಿಕರಿಂದ ಕೇಳಿ ಬಂದವು. ಈ ವಿಷಯವನ್ನು ಆಯೋಗದ ಗಮನಕ್ಕೆ ತರಲಾಗುವುದು ಎಂದು ಮೊಹಮ್ಮದ್‌ ಮೊಹಸಿನ್‌ ತಿಳಿಸಿದರು.

ಎಸ್ಸೆಸ್ಸೆಲ್ಸಿ ಹಾಗೂ ಪೂರಕ ದಾಖಲೆ ಗಳನ್ನು ಮತದಾರರಿಂದ ಪಡೆದು ಮತದಾರರ ಹೆಸರು, ವಯಸ್ಸನ್ನು ಸರಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry