4
ಸಾಹಿತ್ಯೋತ್ಸವದಲ್ಲಿ ಅಪ್ರತಿಮ ನೃತ್ಯಪಟು ಜೀವನದ ರಸಪ್ರಸಂಗಗಳು

‘ಜೆಎಲ್‌ಎಫ್‌’ ಕಳೆಗಟ್ಟಿಸಿದ ಸೋನಾಲ್‌ ಮಾನ್‌ಸಿಂಗ್‌ ಕಥನ

Published:
Updated:
‘ಜೆಎಲ್‌ಎಫ್‌’ ಕಳೆಗಟ್ಟಿಸಿದ ಸೋನಾಲ್‌ ಮಾನ್‌ಸಿಂಗ್‌ ಕಥನ

ಜೈಪುರ: ‘ನಾನು ಈಗಲೂ ಒಬ್ಬ ಅದ್ಭುತ ಗಂಡಸಿನ ನಿರೀಕ್ಷೆಯಲ್ಲಿದ್ದೇನೆ. ಅಂಥ ಗಂಡು ನನಗೆ ಸಿಗಲೆಂದು ಹಾರೈಸಿ’.

‘ಜೈಪುರ ಸಾಹಿತ್ಯೋತ್ಸವ’ದ ಪ್ರಧಾನ ವೇದಿಕೆಯಲ್ಲಿ ಭಾನುವಾರ ತಮ್ಮ ಬದುಕಿನ ಹಲವು ಸಂಗತಿಗಳನ್ನು ಹಂಚಿಕೊಂಡ, ಎಪ್ಪತ್ತನಾಲ್ಕು ವರ್ಷದ ಸೋನಾಲ್‌ ಮಾನ್‌ಸಿಂಗ್‌ ಮಾತಿದು.

ನೃತ್ಯಪ್ರಕಾರದಲ್ಲಿ ನಿರಂತರವಾಗಿ ಪ್ರಯೋಗಶೀಲವಾಗಿರುವ ದೇಶದ ಸುಪ್ರಸಿದ್ಧ ನೃತ್ಯವಿದ್ವಾಂಸೆಯನ್ನು ’ಈಗ ನೀವು ಹೊಸತೇನನ್ನು ಮಾಡುತ್ತಿದ್ದೀರಿ?’ ಎಂದು ಸಭಿಕರೊಬ್ಬರು ಕೇಳಿದಾಗ ಅವರು ಥಟ್ಟೆಂದು ಹೇಳಿದ್ದು, ಗೆಳೆಯನ ನಿರೀಕ್ಷೆಯನ್ನು! ಸಭೆಯಲ್ಲಿ ತುಳುಕಿದ ನಗು ಸೋನಾಲ್‌ರ ಮುಖದಲ್ಲೂ ಮಿನುಗಿತು.

ನೃತ್ಯಪಟುವಾಗಿ ತಾವು ಬೆಳವಣಿಗೆ ಹೊಂದಿದ ಪ್ರಮುಖ ಕ್ಷಣಗಳನ್ನು ಅವರು ನೆನಪಿಸಿಕೊಂಡರು : ‘ಪ್ರತಿ ಮಗುವೂ ಕುಣಿಯುತ್ತದೆ. ಆದರೆ, ನನಗೆ ಒಲಿದಿರುವ ನೃತ್ಯ ಯಾವುದೋ ಜನ್ಮದ ಕರ್ಮಫಲವೇ ಇರಬೇಕು. ಏಳರ ವಯಸ್ಸಿನಲ್ಲಿ ನೃತ್ಯವನ್ನು ಹಚ್ಚಿಕೊಂಡವಳು ನಾನು.

‘ಹದಿನೆಂಟು ವರ್ಷಕ್ಕೆ ಕಾಲಿಟ್ಟಾಗ ನನ್ನ ಎದುರಿಗೆ ಇದ್ದ ಆಯ್ಕೆಗಳು ಎರಡು. ದೊಡ್ಡ ಹುದ್ದೆಯೊಂದಕ್ಕೆ ಸಿದ್ಧತೆ ನಡೆಸುವುದು, ಇಲ್ಲವೇ ಮದುವೆಯಾಗುವುದು. ನಾನು ಭರತನಾಟ್ಯ ಕಲಿ ಯ ಬೇಕೆನ್ನುವ ಮೂರನೇ ಆಯ್ಕೆಯೊಂದನ್ನು ಹುಡುಕಿಕೊಂಡಿದ್ದೆ.

ನನ್ನ ನಿರ್ಣಯಕ್ಕೆ ಮನೆಯಲ್ಲಿ ವಿರೋಧ ಎದುರಾಯಿತು. ಲಗೇಜು ತೆಗೆದುಕೊಂಡು ಒಬ್ಬಳೇ ರೈಲು ಹತ್ತಿದೆ. ಹೀಗೆ ಹೊರಟವಳು ತಲುಪಿದ್ದು ಬೆಂಗಳೂರನ್ನು (1963ರಲ್ಲಿ). ಅಲ್ಲಿ ಗುರು ಕೃಷ್ಣರಾವ್‌ ಅವರಲ್ಲಿ ಭರತನಾಟ್ಯ ಕಲಿಯಲಾರಂಭಿಸಿದೆ.

ಒಂದು ಮಧ್ಯಾಹ್ನ ನನ್ನನ್ನು ಕರೆದು, ಗುರುಗಳು ಕೇಳಿದರು: ರಸ್ತೆಯಲ್ಲಿ ಏನು ಕಾಣಿಸುತ್ತಿದೆ? ಅಲ್ಲಿ ಮಂಗಗಳ ಕುಣಿತ ನಡೆದಿತ್ತು. ‘ಕೋತಿಗಳು ಕುಣಿಯುತ್ತಿವೆ’ ಎಂದು ಹೇಳಿದೆ. ‘ಆ ಕೋತಿಗಳ ಕುಣಿತಕ್ಕೂ ನಿನ್ನ ನೃತ್ಯಕ್ಕೂ ಇರುವ ವ್ಯತ್ಯಾಸವನ್ನು ತೋರಿಸು’ ಎಂದು ಗುರುಗಳು ಹೇಳಿದರು. ಅದು ನನ್ನ ಕಣ್ಣು ತೆರೆದ ಕ್ಷಣ.

ಮುಂದೆ ಒಡಿಸ್ಸಿ ಕಲಿತೆ. ಭರತನಾಟ್ಯ ಹಾಗೂ ಒಡಿಸ್ಸಿ ನನ್ನ ಎರಡು ಕಣ್ಣುಗಳು. ಇವೆರಡೂ ಸೇರಿಕೊಂಡು ನನ್ನಲ್ಲಿ ಸೌಂದರ್ಯಪ್ರಜ್ಞೆಯನ್ನು ಉದ್ದೀಪಿಸಿವೆ’.

ಹೆಣ್ಣಿನ ತವಕ ತಲ್ಲಣಗಳ ಕುರಿತು ಮಾತನಾಡಿದ ಅವರು, ‘ಯಾವುದು ಧರ್ಮ? ಯಾವುದು ನೀತಿ? ವಸ್ತ್ರಾಪಹರಣ ಪ್ರಸಂಗದಲ್ಲಿ ಮಹಾಭಾರತದ ದ್ರೌಪದಿ ಕೇಳಿದ ಈ ಪ್ರಶ್ನೆಗಳು ಇಂದಿನ ಸಮಾಜದ ಮುಂದೆಯೂ ಉಳಿದಿವೆ’ ಎಂದು ಹೇಳಿದರು.

ನೃತ್ಯವನ್ನು ಪ್ರೀತಿಸಿ ಹತ್ತಿರವಾದ ಪುರುಷರು ನಂತರದ ದಿನಗಳಲ್ಲಿ ನೃತ್ಯ ಮತ್ತು ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಅಡ್ಡಿಯಾದುದನ್ನು‌ ಸೋನಾಲ್‌ ಮಾನ್‌ಸಿಂಗ್‌ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

‘ಎ ಲೈಫ್‌ಲೈಕ್‌ನೋ ಅದರ್‌’ ಹೆಸರಿನಲ್ಲಿ ಸೋನಾಲ್‌ರ ಬದುಕಿನ ಕಥನವನ್ನು ಪುಸ್ತಕರೂಪದಲ್ಲಿ ದಾಖಲಿಸಿರುವ ಲೇಖಕಿ ಸುಜಾತಾ ಪ್ರಸಾದ್‌ ಈ ಕಾರ್ಯಕ್ರಮ ನಡೆಸಿಕೊಟ್ಟರು.

**

ಗೌರಿ ಹೆಸರಲ್ಲಿ ’ಪೆನ್‌’ ಪ್ರಶಸ್ತಿ

ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅಸಾಧಾರಣ ಧೈರ್ಯ ಪ್ರದರ್ಶಿಸುವ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಗೌರವಿಸುವ ಆಶಯದಿಂದ ’ಪೆನ್‌ದಕ್ಷಿಣ ಭಾರತ’ ಹಾಗೂ ’ಪೆನ್‌ದೆಹಲಿ’ ಒಕ್ಕೂಟಗಳು ಗೌರಿ ಲಂಕೇಶ್‌ಹೆಸರಿನಲ್ಲಿ ಪ್ರಶಸ್ತಿ ನೀಡಲು ಮುಂದಾಗಿವೆ.

ಗೌರಿ ಅವರ ಜನ್ಮದಿನದ (ಜ.29) ಮುನ್ನಾದಿನ ’ಜೆಎಲ್‌ಎಫ್‌’ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ವಿವರಗಳನ್ನು ಪ್ರಕಟಿಸಲಾಯಿತು.

ರಾಷ್ಟ್ರೀಯ ಮಟ್ಟದ ಈ ಪ್ರಶಸ್ತಿಯ ಮೊದಲ ಗೌರವ ಕರ್ನಾಟಕದ ವ್ಯಕ್ತಿ/ಸಂಸ್ಥೆಗೆ ಸಲ್ಲಲಿದ್ದು, ಪ್ರಶಸ್ತಿ ವಿಜೇತರ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ಆಯ್ಕೆ ಸಮಿತಿಯಲ್ಲಿ ಚಂದನ್‌ಗೌಡ, ವಿವೇಕ ಶಾನಭಾಗ, ಆರ್ಷಿಯಾ ಸತ್ತಾರ್‌ ಹಾಗೂ ಸಂಗಮೇಶ ಮೆಣಸಿನಕಾಯಿ ಇದ್ದಾರೆ.

**

‘ನಿಮ್ಮ ಪುಸ್ತಕಕ್ಕೆ ಪ್ರಕಾಶಕರು ಸಿಗುತ್ತಿಲ್ಲವೇ? ಯೋಚಿಸಬೇಡಿ, ನಿಮ್ಮ ಡಿಜಿಟಲ್ ಪುಸ್ತಕವನ್ನು ನೀವೇ ಪ್ರಕಟಿಸಿ’. ಇದು ಅಮೆಜಾನ್‌ನ ‘ಕಿಂಡಲ್‌’ ಮಳಿಗೆಯ ಆಹ್ವಾನ.

‘ಇದು ಉಚಿತ ಹಾಗೂ ತ್ವರಿತ. ಕಿಂಡಲ್‌ ಮೂಲಕ ಜಾಗತಿಕ ಓದುಗರಿಗೆ ಪುಸ್ತಕ ಲಭ್ಯ. ಗೌರವಧನ ಕೂಡ ಆಕರ್ಷಕ’. ಇದು ’ಕಿಂಡಲ್‌’ ಆಶ್ವಾಸನೆ. ಕಿಂಡಲ್‌ನಲ್ಲಿ ಪುಸ್ತಕ ರೂಪಿಸುವುದು ಹೇಗೆ ಎನ್ನುವ ಪ್ರಾತ್ಯಕ್ಷಿಕೆಯೂ ಅಲ್ಲುಂಟು. ಸದ್ಯಕ್ಕೆ ಕನ್ನಡ ಲೇಖಕರಿಗೆ ಕಿಂಡಲ್‌ಭಾಗ್ಯವಿಲ್ಲ. ಭಾರತೀಯ ಭಾಷೆಗಳಲ್ಲಿ ತಮಿಳು, ಮಲಯಾಳಂ, ಮರಾಠಿ, ಗುಜರಾತಿ ಹಾಗೂ ಹಿಂದಿಗಷ್ಟೇ ’ಕಿಂಡಲ್‌ಭಾಗ್ಯ’ದ ಬಾಗಿಲು ತೆರೆದಿದೆ.‌

ಹಿಂಬಾಲಿಸುವ ಗ್ರಂಥಾಲಯ: ‘ಬ್ರಿಟಿಷ್‌ಕೌನ್ಸಿಲ್‌’ ತನ್ನ ಗ್ರಂಥಾಲಯಕ್ಕೆ ಹೆಚ್ಚಿನ ಓದುಗರನ್ನು ಸೆಳೆದುಕೊಳ್ಳಲಿಕ್ಕಾಗಿ ರೂಪಿಸಿರುವ ಯೋಜನೆ - ’ನೀವು ಹೋದಲ್ಲೆಲ್ಲ ಡಿಜಿಟಲ್‌ ಲೈಬ್ರರಿಯನ್ನು ಕೊಂಡೊಯ್ಯಿರಿ’. ವಾರ್ಷಿಕ ₹1200 ಶುಲ್ಕ ಪಾವತಿಸಿದರೆ, ಡಿಜಿಟಲ್‌ಪುಸ್ತಕ ಸಂಗ್ರಹದ ಜೊತೆಗೆ ‘ದಿ ಎಕನಾಮಿಸ್ಟ್‌’, ‘ಹಾರ್ಪರ್ಸ್‌ಬಜಾರ್‌’ ನಿಯತಕಾಲಿಕಗಳೂ ಈ ಗ್ರಂಥಾಲಯದಲ್ಲಿ ಲಭ್ಯ.

ಸೌಂದರ್ಯ ಸಮೀಕ್ಷೆ: ಸೌಂದರ್ಯ ಸಮೀಕ್ಷೆಯ ಮೂಲಕ ಯುವತಿಯರನ್ನು ಸೆಳೆಯುವ ಪ್ರಯತ್ನ ‘ಡವ್‌’ ಸಂಸ್ಥೆಯದು. ಅದರ ಮಳಿಗೆಯಲ್ಲಿ ಹೆಣ್ಣುಮಕ್ಕಳಿಗೆ ತಮ್ಮ ದೇಹದ ಕುರಿತ ಹೆಮ್ಮೆ ಹಾಗೂ ಸೌಂದರ್ಯ ಪ್ರಜ್ಞೆಗೆ ಸಂಬಂಧಿಸಿದಂತೆ ಜಾಗತಿಕ ಸಮೀಕ್ಷೆಯ ಮುಖ್ಯಾಂಶಗಳನ್ನು ಪ್ರದರ್ಶಿಸಲಾಗಿದೆ. ಜೊತೆಗೆ ಸೆಲ್ಫಿಯ ಸವಲತ್ತೂ ಇದೆ. ಫೋಟೊ ಕ್ಲಿಕ್ಕಿಸಿದ ಬೆನ್ನಲ್ಲೇ ಅದರ ಮುದ್ರಣವೂ ನಡೆಯುತ್ತದೆ. ಕೆಲವು ಫೋಟೊಗಳು ‘ಡವ್‌’ ಆಲ್ಬಂನಲ್ಲಿ ಕಂಗೊಳಿಸುತ್ತವೆ. ‘ತಾನಿಷ್ಕ್‌’ ಆಭರಣ ತಯಾರಿಕಾ ಸಂಸ್ಥೆ ‘ಚಿನ್ನ’ದಂಥ ಹೆಣ್ಣುಮಕ್ಕಳ ಗೆಲುವಿನ ಕಥೆಗಳನ್ನು ಸಂಭ್ರಮಿಸಲು ಹೊರಟಿದೆ. ’ನಿಮ್ಮ ಜೀವನದ ಯಶಸ್ಸಿನ ಕಥೆಗಳನ್ನು ನಮಗೆ ಬರೆದು ಕಳುಹಿಸಿ. ಆ ಕಥೆಗಳನ್ನು ನಾವು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತೇವೆ’ ಎನ್ನುವ ಆಹ್ವಾನ ಅದರದು.

ಶಬ್ದ ಪ್ರಸಂಗ ಸಾಹಿತ್ಯದ ಜಾತ್ರೆಯಲ್ಲಿ ನೂರೆಂಟು ಪದಾರ್ಥಗಳ ಮಳಿಗೆಗಳ ಸಾಲಿನಲ್ಲಿ ಪುಸ್ತಕದ ಅಂಗಡಿಯೂ ಇರಬೇಕಷ್ಟೆ? ‘ಜೆಎಲ್‌ಎಫ್‌’ನಲ್ಲೂ ಪುಸ್ತಕದ ಮಳಿಗೆಯಿದೆ. ಅಲ್ಲಿ ದೇಶ ವಿದೇಶಗಳ ಕೆಲವು ಲೇಖಕರ ಕೃತಿಗಳಲ್ಲಿನ ಆಯ್ದ ಸಾಲುಗಳ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿದೆ.

ಅಂಥದೊಂದು ಪೋಸ್ಟರ್‌ ನಲ್ಲಿರುವ ಸಾಲು: ‘ಪದಗಳು ತಮ್ಮಷ್ಟಕ್ಕೆ ತಾವು ಏನೂ ಅಲ್ಲ. ಮನಸ್ಸನ್ನು ಪ್ರವೇಶಿಸಿದ ನಂತರ ಅವು ಅರ್ಥವನ್ನು ಸ್ಫೋಟಿಸುತ್ತವೆ’. ಇದು ಕನ್ನಡದ ಲೇಖಕ ವಿವೇಕ ಶಾನಭಾಗರದು. ಮಕ್ಕಳಿಗಾಗಿ ಇಲ್ಲಿ ಏನೂ ಇಲ್ಲವೆ? ಹುಡುಕಾಟ ನಡೆಸಿದಾಗ, ಜಾತ್ರೆಯಲ್ಲಿ ಕಳೆದುಹೋದ ಮಗು ಎದುರಾದಂತೆ ಕಾಣಿಸಿದ್ದು, ಸಿದ್ಧ ಉಡುಪುಗಳು ಹಾಗೂ ಕರಕುಶಲ ವಸ್ತುಗಳ ಅಂಗಡಿಗಳ ನಡುವೆ ಇಣುಕುತ್ತಿದ್ದ ಮಕ್ಕಳ ನೆಚ್ಚಿನ ‘ಪ್ರಥಮ್‌ಬುಕ್ಸ್‌’ನ ಪುಟಾಣಿ ಮಳಿಗೆ.

ಐಡಿಯಾಗಳು ಬೇಕಾಗಿವೆ!: ‘ಪೆನ್ನು ಮತ್ತು ಕಾಗದ ಸೇರಿದಾಗ ಅಸಾಧಾರಣವಾದುದು ಸೃಷ್ಟಿಯಾಗುತ್ತದೆ’. ಇದು ‘ಜೀ’ ಸಂಸ್ಥೆಯ ಮಳಿಗೆಯಲ್ಲಿ ಎದ್ದುಕಾಣಿಸುವ ಪ್ರಕಟಣೆ. ಈ ಹೇಳಿಕೆಯ ಬೆನ್ನಿಗೇ ‘ಜೀ’ ಆಹ್ವಾನ ಕಾಣಿಸುವುದು ಹೀಗೆ: ‘ಸಿನಿಮಾ, ರಂಗಭೂಮಿ, ಕಿರುತೆರೆ, ಸಂಗೀತ, ಡಿಜಿಟಲ್‌ ಮಾಧ್ಯಮ - ನಿಮ್ಮ ಐಡಿಯಾಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ’.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry