ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟರಿ ವಾಹನ ಖರೀದಿಗೆ ಭಾರಿ ಉತ್ತೇಜನ

ಕೇಂದ್ರ ಬಜೆಟ್‌ ಮೇಲೆ ನಿರೀಕ್ಷೆ: ಆದಾಯ ತೆರಿಗೆ ವಿನಾಯಿತಿ, ಜಿಎಸ್‌ಟಿ ಇಳಿಕೆ
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ : ಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ಕ್ರಮಗಳು ಕೇಂದ್ರದ ಈ ಬಾರಿಯ ಬಜೆಟ್‌ನಲ್ಲಿ ಇರಬಹುದು ಎಂದು ಮೂಲಗಳು ಹೇಳಿವೆ. ಇಂತಹ ವಾಹನಗಳಿಗೆ ಜಿಎಸ್‌ಟಿ ದರ ಕಡಿತ ಮತ್ತು ತೆರಿಗೆ ವಿನಾಯಿತಿಗಳು ಇದರಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ.

2030ರ ಹೊತ್ತಿಗೆ ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳು ಮತ್ತು ಖಾಸಗಿ ಬಳಕೆಯ ಶೇ 40ರಷ್ಟು ವಾಹನಗಳು ಬ್ಯಾಟರಿ ಚಾಲಿತವೇ ಆಗಿರಬೇಕು ಎಂಬ ಗುರಿಯನ್ನು ಸರ್ಕಾರ ಹೊಂದಿದೆ. ಈ ಗುರಿಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಉತ್ತೇಜಕ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

‘ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಈ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಬ್ಯಾಟರಿ ಚಾಲಿತ ವಾಹನಗಳ ಮೇಲೆ ಈಗ ಜಿಎಸ್‌ಟಿ ದರ ಶೇ 12ರಷ್ಟಿದೆ. ಅದನ್ನು ಶೇ 5ಕ್ಕೆ ಇಳಿಸುವ ಸಾಧ್ಯತೆ ಇದೆ. ಇಂತಹ ವಾಹನ ಖರೀದಿ ಮಾಡುವವರಿಗೆ ಆದಾಯ ತೆರಿಗೆ ವಿನಾಯಿತಿಯಂತಹ ಆಕರ್ಷಕ ಕೊಡುಗೆಗಳನ್ನು ನೀಡುವ ಬಗ್ಗೆಯೂ ಚಿಂತನೆ ಇದೆ’ ಎಂದು ಬ್ಯಾಟರಿ ಚಾಲಿತ ವಾಹನ ಉದ್ಯಮದ ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ವಿನಾಯಿತಿಯನ್ನು ಬಜೆಟ್‌ನಲ್ಲಿ ಘೋಷಿಸಬಹುದು. ಜಿಎಸ್‌ಟಿ ದರ ಇಳಿಸುವ ನಿರ್ಧಾರವನ್ನು ಜಿಎಸ್‌ಟಿ ಮಂಡಳಿಯೇ ತೆಗೆದುಕೊಳ್ಳಬೇಕು.

ಭಾರತದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಮಾರಾಟ ಪ್ರಮಾಣ ಒಟ್ಟು ವಾಹನ ಮಾರಾಟದ ಶೇ ಒಂದರಷ್ಟೂ ಇಲ್ಲ. ಹಾಗಾಗಿ ಇಂತಹ  ನಿರ್ಧಾರ ಸರ್ಕಾರದ ಆದಾಯವನ್ನು ಕಡಿಮೆ ಮಾಡುವುದಿಲ್ಲ.

ವಿದ್ಯುತ್‌ ಚಾಲಿತ ವಾಹನಗಳ ಖರೀದಿಗೆ ಉತ್ತೇಜಕ ಕ್ರಮಗಳನ್ನು ಪ್ರಕಟಿಸಬೇಕು ಎಂದು ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಆರ್‌.ಕೆ. ಸಿಂಗ್ ಒತ್ತಾಯಿಸುತ್ತಿದ್ದಾರೆ. ಸರ್ಕಾರದ ಇಲಾಖೆಗಳು ಮತ್ತು ಸಚಿವಾಲಯಗಳ ಬಳಕೆಗೆ ವಿದ್ಯುತ್‌ ಚಾಲಿತ ಕಾರುಗಳ ಖರೀದಿ ಮಾಡುವ ಪ್ರಸ್ತಾವ ಇದೆ ಎಂದೂ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಬಳಕೆಗಾಗಿ ಕೇಂದ್ರ ಸರ್ಕಾರದ ಎನರ್ಜಿ ಎಫೀಷಿಯೆನ್ಸಿ ಸರ್ವಿಸಸ್‌ ಲಿ. (ಇಇಎಸ್‌ಎಲ್‌) ಸಂಸ್ಥೆಯು 10 ಸಾವಿರ ವಿದ್ಯುತ್‌ ಚಾಲಿತ ಕಾರುಗಳನ್ನು ಖರೀದಿಸುವ ಯೋಜನೆ ಹೊಂದಿದೆ.
**
ವೈದ್ಯಕೀಯ ಸಲಕರಣೆ ಆಮದು ಸುಂಕ ಹೆಚ್ಚಳ?:

ಕೆಲವು ವೈದ್ಯಕೀಯ ಸಲಕರಣೆಗಳ ಆಮದು ಸುಂಕವನ್ನು ಹೆಚ್ಚಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಸಲಕರಣೆಗಳನ್ನು ದೇಶೀಯವಾಗಿ ತಯಾರಿಸುವುದಕ್ಕೆ ಉತ್ತೇಜನ ನೀಡುವುದು ಇದರ ಉದ್ದೇಶ ಎಂದು ಮೂಲಗಳು ಹೇಳಿವೆ. ಕೇಂದ್ರದ ಮಹತ್ವಾಕಾಂಕ್ಷಿ ‘ಭಾರತದಲ್ಲಿ ತಯಾರಿಸಿ’ ಯೋಜನೆಗೆ ಪ್ರೋತ್ಸಾಹ ನೀಡುವುದು ಇದರ ಇನ್ನೊಂದು ಗುರಿ.

ಭಾರತೀಯ ವೈದ್ಯಕೀಯ ಸಲಕರಣೆ ಉದ್ಯಮ ಸಂಘವು ಈ ಬಗ್ಗೆ ಸರ್ಕಾರಕ್ಕೆ ಮನವಿ ನೀಡಿದೆ. ವೈದ್ಯಕೀಯ ಉಪಕರಣಗಳ ಆಮದಿನ ಮೇಲೆ ಈಗ ಶೇ 0ಯಿಂದ 7.5ರಷ್ಟು ಸುಂಕ ವಿಧಿಸಲಾಗುತ್ತಿದೆ. ಅದನ್ನು ಶೇ 5ರಿಂದ 15ಕ್ಕೆ ಏರಿಸಬೇಕು ಎಂದು ಈ ಮನವಿಯಲ್ಲಿ ಒತ್ತಾಯಿಸಲಾಗಿದೆ.

‘ಭಾರತದಲ್ಲಿ ತಯಾರಿಸಿ’ ಅಭಿಯಾನ ಆರಂಭವಾಗಿ ಮೂರು ವರ್ಷ ಕಳೆದರೂ ವೈದ್ಯಕೀಯ ಸಲಕರಣೆ ತಯಾರಿಕಾ ಉದ್ಯಮದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಾಗಾಗಿ ವೈದ್ಯಕೀಯ ಸಲಕರಣೆಗಳ ಆಮದು ಮೇಲಿನ ಸುಂಕ ಹೆಚ್ಚಿಸಬೇಕು ಎಂಬುದು ಸಂಘದ ಆಗ್ರಹವಾಗಿದೆ.

ಭಾರತದ ಔಷಧ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ ವೈದ್ಯಕೀಯ ಉಪಕರಣ ತಯಾರಿಕಾ ಕ್ಷೇತ್ರ ಹಿಂದುಳಿದಿದೆ. ಹಾಗಾಗಿ, ವೈದ್ಯಕೀಯ ಉಪಕರಣ ಕ್ಷೇತ್ರಕ್ಕೆ ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೂ ಅವಕಾಶ ಕಲ್ಪಿಸಲಾಗಿದೆ.
**
ಡಿಜಿಟಲ್‌ ವಹಿವಾಟಿಗೆ ಅಧಿಕ ತೆರಿಗೆ ಬೇಡ: ನಾಸ್ಕಾಂ

ವಿದೇಶಿ ಹೂಡಿಕೆ ಮೇಲಿನ ಲಾಭದ ತೆರಿಗೆ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸಬೇಕು ಎಂದು ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ಸಂಸ್ಥೆಗಳ ಒಕ್ಕೂಟವು (ನಾಸ್ಕಾಂ) ಸರ್ಕಾರವನ್ನು ಒತ್ತಾಯಿಸಿದೆ. ಪರ್ಯಾಯ ತೆರಿಗೆ ವಿನಾಯಿತಿಗೆ ಕನಿಷ್ಠ ಮಿತಿ ನಿಗದಿ ಮತ್ತು ನವೋದ್ಯಮ ಹೂಡಿಕೆಯಲ್ಲಿ ವಿದೇಶಿ ಸಂಸ್ಥೆಗಳು ಮತ್ತು ದೇಶೀಯ ಸಂಸ್ಥೆಗಳಿಗೆ ಇರುವ ಭಿನ್ನ ತೆರಿಗೆ ದರವನ್ನು ರದ್ದುಪಡಿಸಬೇಕು ಎಂಬುದು ಬಜೆಟ್‌ಗೆ ಸಂಬಂಧಿಸಿ ನಾಸ್ಕಾಂನ ಇತರ ಬೇಡಿಕೆಗಳಾಗಿವೆ.

ದೇಶೀಯ ಹೂಡಿಕೆದಾರರಿಗೆ ವಿದೇಶಿ ಹೂಡಿಕೆದಾರರಿಗಿಂತ ಹೆಚ್ಚಿನ ತೆರಿಗೆ ಹಾಕಬಾರದು ಎಂಬುದು ಈ ಒತ್ತಾಯದ ಹಿಂದಿನ ಉದ್ದೇಶ. ಹಾಗೆಯೇ ಡಿಜಿಟಲ್‌ ವಹಿವಾಟಿಗೆ ಇದೇ ರೀತಿಯ ಇತರ ವಹಿವಾಟಿಗಿಂತ ಹೆಚ್ಚಿನ ತೆರಿಗೆ ವಿಧಿಸಬಾರದು ಎಂದು ನಾಸ್ಕಾಂ ಅಧ್ಯಕ್ಷ ಆರ್‌. ಚಂದ್ರಶೇಖರ್‌ ಹೇಳಿದ್ದಾರೆ.

‘ಸರ್ಕಾರವು ಡಿಜಿಟಲ್‌ ಅರ್ಥವ್ಯವಸ್ಥೆಗೆ ಉತ್ತೇಜನ ನೀಡುವ ನೀತಿ ಹೊಂದಿರುವಾಗ ಅದಕ್ಕೆ ವ್ಯತಿರಿಕ್ತವಾದ ತೆರಿಗೆ ವ್ಯವಸ್ಥೆ ಇರಬಾರದು’ ಎಂದು ಚಂದ್ರಶೇಖರ್‌ ಪ್ರತಿಪಾದಿಸಿದ್ದಾರೆ. ತಮ್ಮ ವಾದದ ಸಮರ್ಥನೆಗೆ ಅವರು ಪ್ಲಂಬಿಂಗ್‌ ಕೆಲಸದ ಉದಾಹರಣೆ ನೀಡಿದ್ದಾರೆ. ಇ–ಕಾಮರ್ಸ್‌ ವೇದಿಕೆ ಮೂಲಕ ಪ್ಲಂಬಿಂಗ್‌ ಕೆಲಸ ಮಾಡಿಸಿದರೆ ಅದಕ್ಕೆ ತೆರಿಗೆ ಇದೆ. ಆದರೆ ನೇರವಾಗಿ ಪ್ಲಂಬಿಂಗ್‌ ಕೆಲಸದವರನ್ನು ಸಂಪರ್ಕಿಸಿ ಈ ಕೆಲಸ ಮಾಡಿಸಿಕೊಂಡರೆ ಅದಕ್ಕೆ ತೆರಿಗೆ ಇಲ್ಲ ಎಂದು ಅವರು ಹೇಳಿದ್ದಾರೆ. ಇಂತಹ ತಾರತಮ್ಯವನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT