ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪಿಂಚಣಿ ಮಸೂದೆಗಾಗಿ ಹೋರಾಟ

Last Updated 29 ಜನವರಿ 2018, 8:42 IST
ಅಕ್ಷರ ಗಾತ್ರ

ಕಲಬುರ್ಗಿ: ‘ರೈತರಿಗೆ ತಿಂಗಳಿಗೆ ₹5ಸಾವಿರ ಪಿಂಚಣಿ ನೀಡುವ ಮಸೂದೆಯ ಕರಡು ಪ್ರತಿ ದೂಳು ತಿನ್ನುತ್ತಿದೆ. ಕೇಂದ್ರ ಸರ್ಕಾರ ಈ ಮಸೂದೆಗೆ ಅಂಗೀಕಾರ ದೊರಕಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಆಗ್ರಹಿಸಿದರು.

ಇಲ್ಲಿನ ಶರಣಬಸವೇಶ್ವರ ಕೆರೆ ಮೈದಾನದಲ್ಲಿ ಹೈದರಾಬಾದ್‌ ಕರ್ನಾಟಕ ರೈತ ಸಂಘ ಭಾನುವಾರ ಹಮ್ಮಿಕೊಂಡಿದ್ದ ರೈತರ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದದರು.

‘ಉತ್ಪಾದನಾ ವೆಚ್ಚ ಆಧರಿಸಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು, ಕೃಷಿ ಕ್ಷೇತ್ರದ ಸುಧಾರಣೆಗಾಗಿ ಡಾ.ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ರೈತರು ಖರೀದಿಸುವ ಕೃಷಿ ಪರಿಕರಗಳಿಗೆ ತೆರಿಗೆ ವಿನಾಯಿತಿ ನೀಡಬೇಕು’ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

‘ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾರ್ಚ್‌ 23ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ದೇಶದ ಮೂಲೆ ಮೂಲೆಗಳಿಂದ ರೈತರು ಇದರಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶದ ಜಾಗೃತಿಗಾಗಿ ದೇಶದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

‘ಬೆಲೆ ನಿಗದಿಯಲ್ಲಿ ಕೇಂದ್ರ ಸರ್ಕಾರ ರೈತರ ಶೋಷಣೆ ಮಾಡುತ್ತಿದೆ. ರಾಜ್ಯ ಬೆಲೆ ನಿಗದಿ ಆಯೋಗ ಸಲ್ಲಿಸುವ ಶಿಫಾರಸುಗಳನ್ನು ಹವಾ ನಿಯಂತ್ರಕ (ಎ.ಸಿ) ಕೊಠಡಿಯಲ್ಲಿ ಕುಳಿತ ಅಧಿಕಾರಿಗಳು ಮನಬಂದಂತೆ ಪರಿಷ್ಕರಣೆ ಮಾಡುತ್ತಿದ್ದಾರೆ’ ಎಂದು ದೂರಿದರು.

ಅಣ್ಣಾ ಹೇಳಿದ ರಾಳೇಗಣಸಿದ್ಧಿ ಯಶೋಗಾಥೆ

ಅಣ್ಣಾ ಹಜಾರೆ ತಮ್ಮ ಹೂಟ್ಟೂರು ಮಹಾರಾಷ್ಟ್ರದ ರಾಳೇಗಣಸಿದ್ಧಿಯಲ್ಲಿ ಕೈಗೊಂಡಿರುವ ನೆಲ–ಜಲ ಸಂರಕ್ಷಣೆಯನ್ನು ಸಮಾವೇಶದಲ್ಲಿ ಬಿಚ್ಚಿಟ್ಟರು. ನನ್ನ ಗ್ರಾಮದ ಒಟ್ಟು ಜನಸಂಖ್ಯೆಯಲ್ಲಿ ಶೇ80ರಷ್ಟು ಮಂದಿ ಉಪವಾಸ ಮಲಗುತ್ತಿದ್ದರು. ಕೃಷಿ ಭೂಮಿಯಲ್ಲಿ ಏನೂ ಬೆಳೆಯುತ್ತಿರಲಿಲ್ಲ. ಅಂತರ್ಜಲ ಬತ್ತಿ ಹೋಗಿತ್ತು. ಕುಡಿಯಲು ನೀರು ಸಿಗುವುದೇ ಅಪರೂಪವಾಗಿತ್ತು. ಇಂಥ ಊರಿನಲ್ಲಿ ಮದ್ಯ, ಗುಟಕಾ, ಬೀಡಿ ವ್ಯಸನಿಗಳು ಹೆಚ್ಚಾಗಿದ್ದರು. ಜೂಜು ಅಡ್ಡೆಗಳಿಗೆ ಯಾವುದೇ ಕೊರತೆ ಇರಲಿಲ್ಲ’ ಎಂದರು.

‘ಗ್ರಾಮದ ಗುಡ್ಡಗಳಲ್ಲಿ ಮಳೆ ನೀರು ಸಂಗ್ರಹ ಕೈಗೊಳ್ಳಲಾಯಿತು. ಹನಿ ನೀರೂ ಪೋಲಾಗದಂತೆ ಭೂಮಿಯಲ್ಲಿ ಇಂಗಿಸಿದೆವು. ಈಗ ಅಲ್ಲಿಂದ ಪ್ರತಿದಿನ 200 ಲಾರಿ ಈರುಳ್ಳಿ ಮುಂಬೈಗೆ ಸಾಗಣೆ ಆಗುತ್ತಿದೆ. 6,500 ಲೀಟರ್‌ ಹಾಲು ಉತ್ಪಾದನೆ ಆಗುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಾಗಿದೆ. ಯುವಕರಿಗೂ ಕೈತುಂಬಾ ಕೆಲಸ ಸಿಕ್ಕಿದೆ. ಮದ್ಯದ ಅಂಗಡಿಗಳನ್ನು ಗ್ರಾಮದಿಂದ ಹೊರ ಹಾಕಲಾಗಿದೆ’ ಎಂದು ರಾಳೇಗಣಸಿದ್ಧಿಯ ಕಥನವನ್ನು ಜನರ ಮುಂದಿಟ್ಟರು.

* * 

ಕೇಂದ್ರ ಸರ್ಕಾರ ಯಾವ ಯಾವ ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂಬ ದಾಖಲೆ ನನ್ನ ಬಳಿ ಇವೆ. ಅವುಗಳನ್ನು ಮಾರ್ಚ್‌ 23ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಹಿರಂಗ ಪಡಿಸುವೆ
ಅಣ್ಣಾ ಹಜಾರೆ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT