ಇಂದು ‘ಶಾಶ್ವತಿ’ ಪ್ರಶಸ್ತಿ ಪ್ರದಾನ; ಶಾಂತಕುಮಾರಿಗೆ ‘ಸದೋದಿತಾ’

7

ಇಂದು ‘ಶಾಶ್ವತಿ’ ಪ್ರಶಸ್ತಿ ಪ್ರದಾನ; ಶಾಂತಕುಮಾರಿಗೆ ‘ಸದೋದಿತಾ’

Published:
Updated:
ಇಂದು ‘ಶಾಶ್ವತಿ’ ಪ್ರಶಸ್ತಿ ಪ್ರದಾನ; ಶಾಂತಕುಮಾರಿಗೆ ‘ಸದೋದಿತಾ’

79ರ ಇಳಿವಯಸ್ಸಿನಲ್ಲಿಯೂ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಬರಹಗಾರ್ತಿ, ವಿಮರ್ಶಕಿ ಪ್ರೊ.ಎಲ್‌.ವಿ ಶಾಂತಕುಮಾರಿ ಅವರು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ ನೀಡುವ ‘ಸದೋದಿತಾ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ. ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಜ.30ರ ಮಂಗಳವಾರ ನಡೆಯುವ ‘ಶಾಶ್ವತಿ ಪ್ರಶಸ್ತಿ’ಗಳ ಪ್ರದಾನ ಕಾರ್ಯಕ್ರಮದಲ್ಲಿ ಶಾಂತಕುಮಾರಿ ಅವರು ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಹಿನ್ನೆಲೆ: ಶಾಂತಕುಮಾರಿ ಅವರು ಮೈಸೂರಿನವರು. 15ನೇ ವಯಸ್ಸಿನಲ್ಲೇ ಮದುವೆಯಾದ ಕಾರಣ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾಯಿತು. ಆದರೆ ಓದುವ ಅದಮ್ಯ ಆಸೆ ನಿಲ್ಲಲಿಲ್ಲ. ಮಕ್ಕಳು ದೊಡ್ಡವರಾದ ಬಳಿಕ ಅಂದರೆ, ತಮ್ಮ 38ನೇ ವಯಸ್ಸಿನಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತುಮಕೂರಿನಲ್ಲಿ ಪ್ರಾಧ್ಯಾಪಕಿಯಾಗಿ ವೃತ್ತಿ ಆರಂಭಿಸಿ, ಸಾಹಿತ್ಯ ರಚನೆಯಲ್ಲೂ ತೊಡಗಿಸಿಕೊಂಡರು. ಕತೆ, ಕವನ, ವಿಮರ್ಶೆ, ಅನುವಾದ, ಜೀವನಚಿತ್ರಣ, ವ್ಯಕ್ತಿ ಚಿತ್ರಣ ಹೀಗೆ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಗುರುತಿಸಿಕೊಂಡಿದ್ದಾರೆ.

ನೆನಪು ಗರಿಬಿಚ್ಚಿದಾಗ, ಚೈತನ್ಯದ ಚಿಲುಮೆ, ಅನುಪಮಾ ನಿರಂಜನ, ವಿ.ಸಾವಿತ್ರಮ್ಮ, ಸಿ.ಎನ್‌. ಜಯಲಕ್ಷ್ಮೀದೇವಿ ಅವರ ಜೀವನ ಚರಿತ್ರೆ, ಪೆಪೆ ಮತ್ತು ಇತರ ಕತೆಗಳು, ಯುಗಸಾಕ್ಷಿ– ಬೈರಪ್ಪರ ಕೃತಿಗಳ ಅವಲೋಕನ, ಅಪ್ರಚಲಿತ ವಚನಕಾರ್ತಿಯರು, ಕತೆ ಕೇಳು ಮಗು, ವಿರಾಟ್‌ ಪ್ರತಿಭೆಯ ಗಾರುಡಿ– ಎಸ್‌.ಎಲ್‌. ಬೈರಪ್ಪ, ಕೌದಿ– ನೀಳ್ಗತಾ ಸಂಕಲನ, ಕಾವ್ಯ ಮನನ, ಕಗ್ಗದ ಕಾಣಿಕೆ ಸೇರಿದಂತೆ ಇಂಗ್ಲಿಷ್‌ ಹಾಗೂ ಕನ್ನಡ ಭಾಷೆಯಲ್ಲಿ ಶಾಂತಕುಮಾರಿ ಅವರು ಬರೆದ ಸುಮಾರು 30ಕ್ಕೂ ಹೆಚ್ಚು ಕೃತಿಗಳು ಮುದ್ರಣವಾಗಿವೆ.

ಪಂಡಿತ್‌ ದೀನದಯಾಳ್‌  ಉಪಾಧ್ಯಾಯರ ಪೊಲಿಟಿಕಲ್‌ ಡೈರಿ (ಸಂಪುಟ –5), ವಿಲ್‌ ಡ್ಯುರಾಂಟರ ದಿ ಸ್ಟೋರಿ ಆಫ್‌ ಸಿವಿಲೈಜೇಷನ್‌ನ ಹಲವು ಭಾಗಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೈರಪ್ಪ ಅವರ ಭಿತ್ತಿ, ಮಂದ್ರ, ಗೃಹಭಂಗ, ಸಾಕ್ಷಿ ಕಾದಂಬರಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಇವಲ್ಲದೇ ಇವರ ಹಲವು ಕತೆಗಳು, ಕವನಗಳು, ಅನುವಾದಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

80ರ ಇಳಿವಯಸ್ಸಿನಲ್ಲಿಯೂ ಶಾಂತಕುಮಾರಿ ಅವರು ಸಾಹಿತ್ಯಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಿವಿಜಿ ಅವರ ಉಮರನ ಒಸಗೆ ಕುರಿತಾದ ವಿಮರ್ಶೆ ಕೃತಿ ಹಾಗೂ ವಾಲ್ಮೀಕಿ ಬರೆದ ರಾಮಾಯಣದಲ್ಲಿ ನಿರೂಪಣಾ ವಿಧಾನ ಎಂಬ ವಿಮರ್ಶೆ ಕೃತಿಗಳು ಇತ್ತೀಚೆಗೆ ಪ್ರಕಟವಾಗಿರುವುದು ಇದಕ್ಕೆ ಸಾಕ್ಷಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry