ಮಕ್ಕಳ ಮತಾಂತರಕ್ಕೆ ಪೋಷಕರಿಬ್ಬರ ಸಮ್ಮತಿ ಅಗತ್ಯ

7
ಮಹತ್ವದ ತೀರ್ಪು ನೀಡಿದ ಮಲೇಷ್ಯಾದ ಸುಪ್ರೀಂ ಕೋರ್ಟ್‌

ಮಕ್ಕಳ ಮತಾಂತರಕ್ಕೆ ಪೋಷಕರಿಬ್ಬರ ಸಮ್ಮತಿ ಅಗತ್ಯ

Published:
Updated:

ಕ್ವಾಲಾಲಂಪುರ : ತಾಯಿಯ ಒಪ್ಪಿಗೆ ಇಲ್ಲದೇ, ಮೂವರು ಮಕ್ಕಳನ್ನು ಆಕೆಯ ಮಾಜಿ ಪತಿಯು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದನ್ನು ರದ್ದುಗೊಳಿಸಿ ಮಲೇಷ್ಯಾದ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಹಾಗೆಯೇ, ಮಕ್ಕಳ ಮತಾಂತರಕ್ಕೆ ತಂದೆ–ತಾಯಿ ಇಬ್ಬರ ಸಮ್ಮತಿ ಇರಲೇಬೇಕು ಎಂದು ಸ್ಪಷ್ಟಪಡಿಸಿದೆ.

ಹಿಂದೂ ಧರ್ಮೀಯರಾದ ಎಂ. ಇಂದಿರಾ ಗಾಂಧಿ ಎಂಬುವವರ ಮಾಜಿ ಪತಿಯು 2009ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ಆಕೆಯ ಒಪ್ಪಿಗೆ ಇಲ್ಲದೇ ತಮ್ಮ ಮೂವರು ಮಕ್ಕಳನ್ನು ಮತಾಂತರಗೊಳಿಸಿದ್ದ. ಅಲ್ಲದೆ, ಆಗ 11 ತಿಂಗಳಾಗಿದ್ದ ಒಬ್ಬ ಮಗಳನ್ನು ಪತ್ನಿಯಿಂದ ಬಲವಂತವಾಗಿ ಕಿತ್ತುಕೊಂಡು ಹೋಗಿದ್ದ.

ಬಳಿಕ ಕೋರ್ಟ್‌ ಮೆಟ್ಟಿಲೇರಿ, ಮಕ್ಕಳನ್ನು ತಮ್ಮ ಸುಪರ್ದಿಗೆ ವಹಿಸಬೇಕೆಂಬ ಆದೇಶವನ್ನು ಇಂದಿರಾ ಪಡೆದುಕೊಂಡಿದ್ದರು. ಅವರ ಮತಾಂತರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಮತಾಂತರವನ್ನು ಅಕ್ರಮ ಎಂದು ಘೋಷಿಸಿದ್ದ ಸಿವಿಲ್‌ ಕೋರ್ಟ್‌ನ ಆದೇಶವನ್ನು ಮೇಲ್ಮನವಿ ಪ್ರಾಧಿಕಾರ ತಳ್ಳಿಹಾಕಿತ್ತು. ಇಂತಹ ವಿಷಯಗಳು ಸಿವಿಲ್‌ ಕೋರ್ಟ್‌ನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಇದೀಗ ಈ ತೀರ್ಪು, ದೇಶದಲ್ಲಿ ಸಿವಿಲ್‌ ಕೋರ್ಟ್‌ಗಳ ವ್ಯಾಪ್ತಿಯ ಬಗ್ಗೆ ಇದ್ದ ಅನುಮಾನಗಳಿಗೂ ಉತ್ತರ ನೀಡಿದೆ.

ತೀರ್ಪಿನ ಕುರಿತು ಇಂದಿರಾ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ 9 ವರ್ಷಗಳಿಂದ ತಮ್ಮ ಮಾಜಿ ಪತಿಯೊಂದಿಗೆ ಇರುವ ಚಿಕ್ಕ ಮಗಳನ್ನು ಹಿಂದಿರುಗಿ ಕೊಡಿಸುವಲ್ಲಿ ಪೊಲೀಸರು ಇನ್ಯಾವುದೇ ನೆಪ ಹೇಳುವಂತಿಲ್ಲ ಎಂದಿದ್ದಾರೆ. ಮಗುವನ್ನು ವಾಪಸ್‌ ಕೊಡಿಸಬೇಕೆಂಬ ಸಿವಿಲ್‌ ಕೋರ್ಟ್‌ ಆದೇಶವನ್ನು ಪಾಲಿಸಲು ನಿರಾಕರಿಸಿದ್ದ ಪೊಲೀಸರು, ನಾಪತ್ತೆಯಾಗಿರುವ ಇಂದಿರಾ ಅವರ ಪತಿಯನ್ನು ಹುಡುಕಲು ಯಾವುದೇ ಪ್ರಯತ್ನ ಮಾಡಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry