ಶಾಲೆ ಸಮಸ್ಯೆಗಳ ಧ್ವನಿ ಎತ್ತಿದ ಚಿಣ್ಣಾರು

7

ಶಾಲೆ ಸಮಸ್ಯೆಗಳ ಧ್ವನಿ ಎತ್ತಿದ ಚಿಣ್ಣಾರು

Published:
Updated:
ಶಾಲೆ ಸಮಸ್ಯೆಗಳ ಧ್ವನಿ ಎತ್ತಿದ ಚಿಣ್ಣಾರು

ಬೆಂಗಳೂರು: ‘ನಮ್ಮ ಶಾಲೆಯ ಆವರಣದ ಗೋಡೆಗೆ ಟ್ಯಾಕ್ಟರ್ ಗುದ್ದಿ ಗೋಡೆ ಕುಸಿದಿದೆ. ಶಾಲೆಗೆ ಬಣ್ಣ ಹಚ್ಚಿಸಿ ಯಾವ ಕಾಲ ಆಗಿದೆಯೋ? ಒಮ್ಮೆ ನಮ್ಮ ಶಾಲೆ ಕಡೆ ಬನ್ನಿ ಅಧ್ಯಕ್ಷರೇ...

–ಇದು ಗೋಪಾಲಪುರ ಶಾಲೆಯ ವಿದ್ಯಾರ್ಥಿನಿ ಸುಮತಿಯ ಮಾತುಗಳು. ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಸುರಿಯಿತು.

‘ನಮ್ಮ ಶಾಲೆಯಲ್ಲಿ ಕುಡಿಯುವ ನೀರಿಲ್ಲ. ನಮ್ಮೂರಿನ ಚರಂಡಿ, ರಸ್ತೆಗಳು ಹದಗೆಟ್ಟಿವೆ. ಚರಂಡಿಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಯ ಕಾಟ ಹೆಚ್ಚಾಗಿದೆ’ ಎಂದು ಶಾಮಭಟ್ಟರ ಹಳ್ಳಿಯ ವಿದ್ಯಾರ್ಥಿ ಪ್ರಸಾದ್‌ ತಿಳಿಸಿದನು.

‘ಮಕ್ಕಳ ಸಮವಸ್ತ್ರಕ್ಕೆ ಸರ್ಕಾರ ಕೇವಲ ₹200 ಕೊಡುತ್ತದೆ. ಬಟ್ಟೆ ಹಾಗೂ ಹೊಲಿಗೆ ಕೂಲಿ ದುಬಾರಿಯಾಗಿದ್ದು, ಸಮವಸ್ತ್ರ ವಿತರಿಸಲು ಕಷ್ಟವಾಗುತ್ತಿದೆ’ ಎಂದು ಶಿಕ್ಷಕರು ಅಳಲು ತೋಡಿಕೊಂಡರು.

ಎಲ್ಲರ ಮಾತುಗಳನ್ನು ಆಲಿಸಿದ ಗೋಪಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಎಂ ಬಸವೇಗೌಡ, ‘ಸಮವಸ್ತ್ರಕ್ಕೆ ತಗಲುವ ಹೆಚ್ಚುವರಿ ಖರ್ಚನ್ನು ಗ್ರಾಮ ಪಂಚಾಯಿತಿಯಿಂದ ಭರಿಸುತ್ತೇವೆ. ಶಾಲಾ ಮಕ್ಕಳಿಗೆ ಒಳ್ಳೆಯ ಸಮವಸ್ತ್ರವನ್ನೇ ನೀಡೋಣ’ ಎಂದರು ಪ್ರತಿಕ್ರಿಯಿಸಿದರು.

‘ಗೋಪಾಲಪುರ ಶಾಲೆಯ ಕಾಂಪೌಂಡ್‌ ನಿರ್ಮಾಣವನ್ನು ಶೀಘ್ರವೇ ಆರಂಭಿಸುತ್ತೇವೆ. ಶಾಲೆಗಳಲ್ಲಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಭೆಗೆ ಗೈರಾದ ಜನಪ್ರತಿನಿಧಿಗಳು: ಮಕ್ಕಳ ಗ್ರಾಮಸಭೆಗೆ ತಾಲ್ಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ಅನೇಕ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದರು. ಮಕ್ಕಳ ಗ್ರಾಮ ಸಭೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳೂ ಬಂದಿರಲಿಲ್ಲ. ಇದಕ್ಕೆ ಗ್ರಾಮಸ್ಥರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry