ಜಾಹೀರಾತಿನ ಮೂಲಕ ಸರ್ಕಾರ ಚುನಾವಣೆ ಪ್ರಚಾರ

7

ಜಾಹೀರಾತಿನ ಮೂಲಕ ಸರ್ಕಾರ ಚುನಾವಣೆ ಪ್ರಚಾರ

Published:
Updated:

ನಿಡಗುಂದಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌, ಸರ್ಕಾರ ರಚಿಸಿದ ಆರಂಭದಲ್ಲಿ ದೂರದೃಷ್ಟಿಯುಳ್ಳ ಯೋಜನೆ ರೂಪಿಸುವಲ್ಲಿ ವಿಫಲವಾಯಿತು, ಸದ್ಯ ಚುನಾವಣೆ ಸಮೀಪಿಸುತ್ತಿದ್ದು, ಜನಪ್ರಿಯ ಯೋಜನೆ ಘೋಷಿಸುವತ್ತ ಸರ್ಕಾರ ಸಾಗುತ್ತಿದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸೋಮವಾರ ಸಮೀಪದ ಯಲಗೂರದಲ್ಲಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ಜನರ ಹೃದಯದಲ್ಲಿಲ್ಲ, ಅದಕ್ಕಾಗಿ ಬೊಕ್ಕಸದ ಕೋಟ್ಯಂತರ ಹಣವನ್ನು ಜಾಹೀರಾತು ರೂಪದಲ್ಲಿ ಖರ್ಚು ಮಾಡಿ, ಚುನಾವಣಾ ಪ್ರಚಾರವನ್ನು ಕಾಂಗ್ರೆಸ್ ಆರಂಭಿಸಿದೆ ಎಂದು ಟೀಕಿಸಿದರು.

ಜೆಡಿಎಸ್‌ ಇಡೀ ರಾಜ್ಯದಾದ್ಯಂತ ಬಲಿಷ್ಠವಾಗಿದ್ದು, ಯಾವುದೇ ಪಕ್ಷದ ಸಹಾಯವಿಲ್ಲದೇ ಸರ್ಕಾರ ರಚಿಸಲಿದ್ದು, ಜಿಲ್ಲೆಯಲ್ಲಿ ಮುದ್ದೇಬಿಹಾಳ, ಸಿಂದಗಿ, ನಾಗಠಾಣ, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಜೆಡಿಎಸ್‌ ಎಲ್ಲ ಪಕ್ಷಕ್ಕಿಂತಲೂ ಮುಂದಿದೆ. ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿಯೂ ಪಕ್ಷ ಮುಂಚೂಣಿ ಬರುವಂತೆ ಸಿದ್ಧತೆ ನಡೆದಿದೆ ಎಂದರು.

ಜೆಡಿಎಸ್ ಹೊರತುಪಡಿಸಿದರೆ, ಬಿಜೆಪಿ, ಕಾಂಗ್ರೆಸ್‌ ಪಕ್ಷದ ಯಾವೊಬ್ಬ ನಾಯಕರು ರೈತ ಪರ ಚಿಂತನೆ ಮಾಡುವುದಿಲ್ಲ, ರೈತರ ಸಮಸ್ಯೆ ನಿವಾರಣೆಯ ಬಗ್ಗೆ ಮಾತನಾಡದೇ, ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡುವುದರಲ್ಲಿ ನಿಸ್ಸಿಮರಾಗಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಪರೋಕ್ಷ ಟೀಕಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ‘ಎ’ ಸ್ಕಿಂನ ಹಲವು ಕಾಮಗಾರಿಗಳನ್ನು ನಾನು ಮುಖ್ಯಮಂತ್ರಿಯಾದ ಮೇಲೆ ಮುಗಿಸಿದೆ, ಸದ್ಯ ನ್ಯಾಯಾಧೀಕರಣದಿಂದ ಲಭ್ಯವಾಗಿರುವ 130 ಟಿಎಂಸಿ ನೀರು ಬಳಕೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ), ಸಿ.ಬಿ. ಅಸ್ಕಿ ಸೇರಿದಂತೆ ಇತರರು ಇದ್ದರು. ದೇವಸ್ಥಾನ ಸಮಿತಿ ವತಿಯಿಂದ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry