4

ನೀರು ಕುಡಿಯಲು ನಿತ್ಯ ಪರದಾಟ..

Published:
Updated:
ನೀರು ಕುಡಿಯಲು ನಿತ್ಯ ಪರದಾಟ..

ಕೆಂಭಾವಿ: ಅದೊಂದು ಸುಂದರ ಪರಿಸರ ಹೊಂದಿದ ಸರ್ಕಾರಿ ಶಾಲೆ, ಉತ್ತಮ ಶಿಕ್ಷಣ ನೀಡುವ ಶಿಕ್ಷಕ ವೃಂದ, ಶಿಕ್ಷಣಕ್ಕೆ ಏನೂ ಕೊರತೆ ಇಲ್ಲದಂತೆ ಇರುವ ಆ ಶಾಲೆಗೆ ಕಳೆದ ಮೂರು ವರ್ಷಗಳಿಂದ ಕಾಡುತ್ತಿರುವುದು ಕುಡಿಯುವ ನೀರಿನ ಕೊರತೆ.

ಪಟ್ಟಣದ ಹೃದಯ ಭಾಗದ ಯುಕೆಪಿ ಕಾಲೊನಿಯಲ್ಲಿರುವ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸಮಸ್ಯೆ ಮೂರು ವರ್ಷಗಳಿಂದ ಎಲ್ಲ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕಾಣುತ್ತಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿರುವುದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪ ವಿಭಾಗದಿಂದ ಕೊರೆಸಲಾದ ಕೊಳವೆ ಬಾವಿ ಮೂರು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದ ಮುಚ್ಚಿದ್ದು, ಇದೇ ಸಮಸ್ಯೆಗೆ ಕಾರಣವಾಗಿದೆ.

700ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿರುವ ಈ ಶಾಲೆಯಲ್ಲಿ ಶಿಕ್ಷಕರ ಕಲಿಕಾ ಕೇಂದ್ರವೂ (ಟಿಎಲ್‌ಸಿ) ಕಾರ್ಯ ನಿರ್ವಹಿಸುತ್ತಿದೆ. ಶಾಲೆಯಲ್ಲಿ ಬಿಸಿಯೂಟ ತಯಾರಿಸಲು, ಮಕ್ಕಳು ಊಟ ಮಾಡಿದ ನಂತರ ನೀರು ಕುಡಿಯಲು ಬಡಾವಣೆಯ ಮನೆಮನೆಗೆ ನಿತ್ಯ ಅಲೆಯುತ್ತಿರುವುದು ಇಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಾಗಿದೆ.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಶಾಲೆಯ ಮುಖ್ಯ ಗುರುಗಳು ಹಲವಾರು ಬಾರಿ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಪುರಸಭೆ ಕೇಂದ್ರ ಸ್ಥಾನವಾದ ಪಟ್ಟಣದಲ್ಲಿರುವ ಶಾಲೆಗೆ ಈ ಗತಿ ಇದ್ದರೆ ಗ್ರಾಮಾಂತರ ಪ್ರದೇಶದ ಶಾಲೆಗಳ ಗತಿ ಕೇಳುವವರಾರು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

ಇತ್ತೀಚಿಗೆ ಪಟ್ಟಣಕ್ಕೆ ಭೇಟಿ ನೀಡಿದ್ದ ಶಾಸಕ ಗುರು ಪಾಟೀಲ ಶಿರವಾಳ ಅವರು ಸಮಸ್ಯೆ ಕುರಿತು ಶಾಲೆಯ ಶಿಕ್ಷಕರು ತಿಳಿಸಿದಾಗ ಶಾಲೆಗೆ ಖುದ್ದು ಭೇಟಿ ನೀಡಿ ಮಕ್ಕಳಿಂದ ಸಮಸ್ಯೆ ಆಲಿಸಿದರು. ಶಾಲೆಯ ಪಕ್ಕದಲ್ಲಿರುವ ಪುರಸಭೆ ವ್ಯಾಪ್ತಿಯ ಕೊಳವೆ ಬಾವಿಯಿಂದ ತಾತ್ಕಾಲಿಕವಾಗಿ ಪೈಪ್ ಲೈನ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಭರವಸೆ ನೀಡಿದ್ದು ಅದು ಇನ್ನೂ ಭರವಸೆಯಾಗಿಯೇ ಉಳಿದಿದೆ.

ಇದಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ ಸಮಸ್ಯೆ ಬಗ್ಗೆ ಅರಿತು ಅಧಿಕಾರಿಗಳಿಗೆ ಸೂಚಿಸಿದ್ದರು. ಆದಾಗ್ಯೂ ಸಮಸ್ಯೆ ಬಗೆಹರಿದಿಲ್ಲ. ಆದಷ್ಟು ಬೇಗ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.

* * 

ಶಾಲೆಯಲ್ಲಿ ಕುಡಿಯಲು ನೀರಿಲ್ಲ. ನಾವೆಲ್ಲರೂ ಊಟದ ಬಳಿಕ ಶಾಲೆಯ ಅಕ್ಕಪಕ್ಕದ ಮನೆಗಳಿಗೆ ತೆರಳಿ ನೀರು ಕುಡಿಯುತ್ತಿದ್ದೇವೆ. ಆದಷ್ಟು ಬೇಗ ನೀರಿನ ಸಮಸ್ಯೆ ಬಗೆಹರಿಸಬೇಕು.

ವೀಣಾ, 6ನೇ ತರಗತಿ ವಿದ್ಯಾರ್ಥಿನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry