ರೈತನ ಕೈ ಹಿಡಿದ ಹೈಬ್ರಿಡ್ ಬಿಳಿಜೋಳ

7

ರೈತನ ಕೈ ಹಿಡಿದ ಹೈಬ್ರಿಡ್ ಬಿಳಿಜೋಳ

Published:
Updated:
ರೈತನ ಕೈ ಹಿಡಿದ ಹೈಬ್ರಿಡ್ ಬಿಳಿಜೋಳ

ಶಹಾಪುರ: ಪ್ರಸಕ್ತ ವರ್ಷ ಆರಂಭದಲ್ಲಿ ಮಳೆಯ ಅಭಾವ ಕಾಣಿಸಿಕೊಂಡಿತು. ಕೆಲ ದಿನದ ಬಳಿಕ ಅಧಿಕ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದರು. ವಾಣಿಜ್ಯ ಬೆಳೆ ಹತ್ತಿ ಬಿತ್ತನೆ ಮಾಡಬೇಕು ಎಂದರೆ ಅವಧಿ ಮುಗಿದು ಹೋಗಿತ್ತು. ಕೊನೆಗೆ ಹೊಳೆದಿದ್ದು ಹೈಬ್ರಿಡ್ ಬಿಳಿ ಜೋಳ, ಬಿತ್ತನೆ ಮಾಡಿದ್ದು ಹುಸಿಯಾಗಿಲ್ಲ.

ಪ್ರತಿಕೂಲ ವಾತಾವರಣದ ನಡುವೆ ಉತ್ತಮ ಬೆಳೆ ಬೆಳೆಯಲು ಸಾಧ್ಯ ಎಂಬುವುದನ್ನು ತಾಲ್ಲೂಕಿನ ಮಂಡಗಳ್ಳಿ ಗ್ರಾಮದ ಪ್ರಗತಿಪರ ರೈತ ಮಹಾದೇವರಡ್ಡಿ ತೋರಿಸಿಕೊಟ್ಟಿದ್ದಾರೆ. ಆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

50ಎಕರೆ ಜಮೀನಿನಲ್ಲಿ ಹೈಬ್ರಿಡ್ ಜೋಳ ಬಿತ್ತನೆ ಮಾಡಿದ್ದು, ಈಗ ಬೆಳೆಯು ಹಾಲುತೆನೆ ಹಂತದಲ್ಲಿದೆ. ನಿರೀಕ್ಷೆಗೂ ಮೀರಿ ಬಂಪರ್ ಬೆಳೆ ಬಂದಿದೆ. ಒಂದು ತಿಂಗಳಲ್ಲಿ ಬೆಳೆ ಕಟಾವಿಗೆ ಬರುತ್ತದೆ. ಉತ್ತಮ ಲಾಭ ದೊರೆಯುವ ಭರವಸೆಯಲ್ಲಿ ರೈತ ಮಹಾದೇವರಡ್ಡಿ ಇದ್ದಾರೆ.

‘ಬೆಳೆಯ ವಿಶೇಷತೆಯೆಂದರೆ ಬಿತ್ತನೆ ಮಾಡಿದ ಮೇಲೆ ಒಮ್ಮೆಯೂ ನೀರು ಹಾಯಿಸಿಲ್ಲ. ಎಕರೆಗೆ ಅರ್ಧ ಚೀಲ ಡಿಎಪಿ ಗೊಬ್ಬರ ಹಾಕಿದ್ದೇನೆ. ಬೆಳೆ ಸುಳಿ ಹಾಕುವಾಗ ಹಾಗೂ ತೆನೆಕಟ್ಟುವಾಗ ಎರಡು ಬಾರಿ ಔಷಧಿ ಸಿಂಪರಣೆ ಮಾಡಿರುವುದನ್ನು ಬಿಟ್ಟರೆ ಹೆಚ್ಚಿನ ಖರ್ಚು ಇಲ್ಲ’ ಎನ್ನುತ್ತಾರೆ ಅವರು.

‘ನಮ್ಮ ತಂದೆಯಿಂದ ಬಂದ 8 ಎಕರೆ ಜಮೀನು ಇದೆ. ಬೇರೆ ಜಮೀನುಗಳನ್ನು ಗುತ್ತಿಗೆ ಪಡೆದುಕೊಂಡು ಹತ್ತಿ, ಭತ್ತ ಬೆಳೆಯನ್ನು ಬಿತ್ತಿದ್ದೇನೆ. ದುಬಾರಿ ವೆಚ್ಚದ ಜತೆಯಲ್ಲಿ ಕಾಲುವೆ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ದೊರಕದೆ ಸದಾ ಆತಂಕದಲ್ಲಿಯೇ ಕಾಲ ಕಳೆಯವಂತೆ ಆಗಿತ್ತು. ಕೊನೆಗೆ ಧೈರ್ಯ ಮಾಡಿ ಹೈಬ್ರಿಡ್ ಬಿಳಿಜೋಳ ಕಡೆ ಮುಖ ಮಾಡಿದೆ. 120 ದಿನದ ಬೆಳೆ ಇದಾಗಿದೆ. ನಿರೀಕ್ಷೆಗೂ ಮೀರಿ ಉತ್ತಮ ಬೆಳೆ ಬಂದಿದೆ’ ಎಂದು ಹೇಳುತ್ತಾರೆ.

ಗುತ್ತಿಗೆ ಹಾಗೂ ಇತರೆ ಖರ್ಚು ಸೇರಿ ಎಕರೆಗೆ ₹15 ಸಾವಿರ ಬರುತ್ತದೆ. ಎಕರೆಗೆ 20 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ. ಧಾರಣಿಯು ಪ್ರತಿ ಕ್ವಿಂಟಲ್‌ಗೆ ₹1,800ರಿಂದ 2,000 ಇದೆ. ನಿವ್ವಳ ಲಾಭ ಪ್ರತಿ ಎಕರೆಗೆ ₹15ಸಾವಿರ ಬರುವ ನಿರೀಕ್ಷೆ ಇಟ್ಟುಕೊಂಡಿರುವೆ’ ಎಂದು ವಿವರಿಸಿದರು.

ಸ್ಥಳೀಯವಾಗಿ ಜೋಳದ ಮಾರುಕಟ್ಟೆ ಇಲ್ಲ ಹಾಗೂ ಬೇಡಿಕೆ ಕಡಿಮೆ ಇದೆ. ಹೆಚ್ಚಾಗಿ ದಾವಣೆಗೆರೆ, ರಾಯಚೂರು, ಸಿಂಧನೂರು, ಮಾನ್ವಿ ಹಾಗೂ ನೆರೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಲ್ಲಿನ ಜನತೆಯು ಹೈಬ್ರಿಡ್ ಜೋಳದ ರೊಟ್ಟಿಯನ್ನು ಇಷ್ಟಪಡುತ್ತಾರೆ. ಅಲ್ಲದೆ ವ್ಯಾಪಾರಸ್ಥರು ಬಿಳಿಜೋಳದಲ್ಲಿ ಇದನ್ನು ಮಿಕ್ಸ್ ಮಾಡಿ ಮಾರಾಟ ಮಾಡುತ್ತಾರೆ’ ಎಂದು ತಿಳಿಸಿದರು.

‘ಇದರ ಹಿಂದೆ ಸಾಕಷ್ಟು ಶ್ರಮವಿದೆ. ತೆನೆಹಾಲು ಕಟ್ಟುವ ಸಮಯ ಇದಾಗಿದೆ. ಒಂದು ತಿಂಗಳ ಕಾಲ ಗುಬ್ಬಿಗಳ(ಅರಗ) ಹಾವಳಿ ಹೆಚ್ಚಾಗಿರುತ್ತದೆ. ಹಿಂಡು ಹಿಂಡಾಗಿ ದಾಳಿ ಮಾಡಿ ತೆನೆಯ ಮೇಲೆ ಕುಳಿತುಕೊಂಡು ಕಾಳು ತಿನ್ನುತ್ತವೆ. ಪ್ರಸಕ್ತ ಬಾರಿ ಬೆಳೆಗೆ ಅನುಕೂಲವಾಗುವ ರೀತಿಯಲ್ಲಿ ಚಳಿಯ ವಾತಾವರಣ ಇರುವುದು ಹೆಚ್ಚು ಖುಷಿ ನೀಡಿದೆ’ ಎಂದು ಹೇಳಿದರು.

* * 

ತಂಪು ವಾತಾವರಣ ಬೆಳೆಗೆ ಹೆಚ್ಚು ಪೂರಕವಾಗಿದೆ. ಶ್ರಮ ವಹಿಸಿ ಬೆಳೆದಿರುವುದು ಹೆಚ್ಚು ಖುಷಿ ನೀಡಿದೆ. ಇನ್ನುಳಿದ ರೈತರಿಗೂ ಇದು ಮಾದರಿಯಾಗಿದೆ.

ಡಾ.ಸುರೇಶ ಪಾಟೀಲ

ಡೀನ್, ಕೃಷಿ ಮಹಾ ವಿದ್ಯಾಲಯ, ಭೀಮರಾಯನಗುಡಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry