ಕಾಳು ಒಕ್ಕಲಿನ ಕಣವಾದ ರಸ್ತೆ

7

ಕಾಳು ಒಕ್ಕಲಿನ ಕಣವಾದ ರಸ್ತೆ

Published:
Updated:
ಕಾಳು ಒಕ್ಕಲಿನ ಕಣವಾದ ರಸ್ತೆ

ಮಾಲೂರು: ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಎಲ್ಲವೂ ಬದಲಾಗುತ್ತಿದೆ. ವಿಭಕ್ತ ಕುಟುಂಬಗಳು ಹೆಚ್ಚಾಗಿ ರೈತರಿಗೆ ಜಮೀನಿನ ಕೊರತೆ ಕಾಡುತ್ತಿದೆ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಎತ್ತುಗಳ ಕೊರತೆಯಾಗಿದೆ. ಕಾಳು ಒಕ್ಕುವ ಕೆಲಸ ಕಣದಿಂದ ರಸ್ತೆಗೆ ಸ್ಥಳಾಂತರಗೊಂಡಿದೆ.

ಸುಗ್ಗಿ ಕಾಲ ಬಂತೆಂದರೆ ಹಳ್ಳಿ ಸಮೀಪದ ರಸ್ತೆಗಳು ರಾಗಿ ತೆನೆ, ಅರಿ, ಹುರುಳಿಕಾಯಿ, ಜೋಳದ ತೆನೆಯಿಂದ ತುಂಬಿಹೋಗುತ್ತವೆ. ರೈತರು ರಸ್ತೆಗಳ ಮೇಲೆ ಹರಿದಾಡುವ ವಾಹನಗಳ ಚಕ್ರಗಳಿಂದ ಉಚಿತವಾಗಿ ಕಾಳು ಒಕ್ಕುವ ಉಪಾಯ ಕಂಡುಕೊಂಡಿದ್ದಾರೆ. ಆದರೆ ಅಂಥ ಸ್ಥಳಗಳಲ್ಲಿ ವಾಹನ ಅಪಘಾತಗಳು ಸಂಭವಿಸಿ ಪ್ರಾಣ ಕಳೆದುಕೊಂಡವರು ಹಾಗೂ ಗಾಯಗೊಳ್ಳುವವರ ಸಂಖ್ಯೆ ಕಡಿಮೆ ಇಲ್ಲ.

ರಸ್ತೆ ಮೇಲೆ ಒಕ್ಕಣೆ ಮಾಡುವಾಗ ಕಾಳಿನಲ್ಲಿ ವಾಹನಗಳ ಟೈರ್‌ಗಳಿಂದ ಕಳೆ ಬೀಜ ಸೇರುತ್ತದೆ. ಡೀಸೆಲ್, ರಾಸಾಯನಿಕ ಪದಾರ್ಥಗಳು ಸೋರುತ್ತವೆ. ಅರಿಯ ಮೇಲೆ ಕಾಲುಬಾಯಿ ಜ್ವರ ಪೀಡಿತ ಜಾನುವಾರು ಓಡಾಡಿದರೆ, ಗೊರಸು ಹಾಗೂ ಜೊಲ್ಲಿನ ಮೂಲಕ ರೋಗಾಣು ಸೇರುತ್ತದೆ. ಆ ಹುಲ್ಲನ್ನು ಆರೋಗ್ಯವಂತ ಜಾನುವಾರು ತಿಂದಲ್ಲಿ ಸುಲಭವಾಗಿ ರೋಗ ಹರಡುತ್ತದೆ ಎಂಬುದು ಪಶು ವೈದ್ಯರ ವಿವರಣೆ.

ಹಿಂದಿನ ದಿನಗಳಲ್ಲಿ ಕಣ ಕೃಷಿ ಸಂಸ್ಕೃತಿಯ ಪ್ರತೀಕವಾಗಿತ್ತು. ತಾಲ್ಲೂಕಿನ ರೈತರು ಕಣದಲ್ಲಿ ಸುಗ್ಗಿ ಸಂಭ್ರಮ ಆಚರಿಸುತ್ತಿದ್ದರು. ಸಾಂಪ್ರದಾಯಿಕ ಹೊಲ ಕೊಯಿಲಿಗೆ ಮುಂಚಿತವಾಗಿಯೇ ಪ್ರತ್ಯೇಕ ಸ್ಥಳದಲ್ಲಿ ಕಣ ಮಾಡುತ್ತಿದ್ದರು. ಕಣ ಎಂದು ಗುರುತಿಸಲಾದ ಜಮೀನಿಗೆ ನೀರು ಹಾಕಿ ನೆನೆಸಿ, ಉಳುಮೆ ಮಾಡುತ್ತಿದ್ದರು. ಅದನ್ನು ದನಗಳಿಂದ ತುಳಿಸಿ ಗಟ್ಟಿ ಮಾಡುತ್ತಿದ್ದರು. ಸಾರಣಿ ಹೊಡೆದು ನಯ ಮಾಡುತ್ತಿದ್ದರು. ಒಣಗಿದ ಮೇಲೆ ಸಗಣಿ ಸಾರಿಸಿ, ಕಣದ ಸುತ್ತಲೂ ರಂಗೋಲಿ ಹಾಕಿ ನಂತರ ರಾಗಿ ಅಥವಾ ಭತ್ತದ ಕಟ್ಟುಗಳನ್ನು ಕಣಕ್ಕೆ ಸಾಗಿಸುತ್ತಿದ್ದರು. ಮೆದೆ ಹಾಕಿದ ನಂತರ ಕಣಕ್ಕೆ ಅರಿ ಹರಡಿ , ಗುಂಡಿಗೆ ಎತ್ತುಗಳನ್ನು ಕಟ್ಟಿ ಒಕ್ಕಣೆ ಮಾಡುತ್ತಿದ್ದರು.

ಕಣವನ್ನು ದೇವಾಲಯದಂತೆ ಕಾಣುತ್ತಿದ್ದರು. ಕಣದಲ್ಲಿ ಚಪ್ಪಲಿ ಕಾಲಿನಲ್ಲಿ ನಡೆಯಬಾರದಾಗಿತ್ತು. ಮನೆ ಮಂದಿಯೆಲ್ಲಾ ಕಣದಲ್ಲಿ ದುಡಿಯುತ್ತಿದ್ದರು. ಬಡವರು ದುಡಿದು ದುಡಿತಕ್ಕೆ ದುಪ್ಪಟ್ಟು ರಾಗಿ, ಭತ್ತ ಪಡೆಯುತ್ತಿದ್ದರು. ಒಕ್ಕಿದ ದವಸ–ಧಾನ್ಯವನ್ನು ರಾಶಿ ಮಾಡಿ ಸಗಣಿ ಪಿಳ್ಳಾರಿ ಇಟ್ಟು ಪೂಜೆ ಮಾಡಿದ ಬಳಿಕವಷ್ಟೇ ಕಣಜ ಸೇರುತ್ತಿತ್ತು. ಬಡವನ ಹೊಟ್ಟೆಯೂ ತುಂಬುತ್ತಿತ್ತು. ಕಣದ ಅಂಚು, ಮೆದೆಯ ಕೆಳಗೆ ಬಿದ್ದು ಮಣ್ಣು ಸೇರಿದ ಕಾಳನ್ನು ಮೊರದ ನೆರವಿನಿಂದ ಕೇರಿ, ಮಾಟಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಜನರೂ ಇದ್ದರು.

ಆದರೆ ಈಗ ಕಾಲ ಬದಲಾಗಿದೆ. ರಸ್ತೆ ಮೇಲೆ ಕಾಳು ಒಕ್ಕುವ ಕಡೆಗಳಲ್ಲಿ ವಾಹನ ಸವಾರರಷ್ಟೇ ಬಿದ್ದಿಲ್ಲ. ರಸ್ತೆಯ ಮೇಲೆ ಕಾಳನ್ನು ತಳ್ಳಕೊಳ್ಳುವ ಸಂದರ್ಭದಲ್ಲಿ ವಯಸ್ಸಾದ ರೈತರು ಹಾಗೂ ಅವರೊಂದಿಗೆ ಆಟವಾಡಲು ಹೋದ ಮಕ್ಕಳು ವಾಹನಗಳಿಗೆ ಬಲಿಯಾದ ನಿದರ್ಶನಗಳೂ ಇವೆ. ಆದರೂ ರಸ್ತೆ ಒಕ್ಕಣೆ ಮಾತ್ರ ನಿಂತಿಲ್ಲ.

ಈಗ ಎತ್ತುಗಳ ನೆರವಿಲ್ಲದೆ ಕಾಳು ಒಕ್ಕುವ ಯಂತ್ರಗಳು ಬಂದಿದ್ದು,ಹೊಲ ಕೊಯಿಲಿನೊಂದಿಗೆ ಕಾಳು ಒಕ್ಕುವ ಯಂತ್ರವೂ ಇದೆ. ಆದರೆ ಈ ಸೌಲಭ್ಯವನ್ನು ಬೆರೆಳೆಣಿಕೆಯಷ್ಟು ರೈತರು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ಯಂತ್ರ ಒಕ್ಕಣೆಗೆ ಹಣ ಕೊಡಬೇಕು. ರಸ್ತೆ ಒಕ್ಕಣೆ ಉಚಿತ ಎಂಬ ಕಾರಣಕ್ಕೆ ಅಪಾಯವನ್ನು ಮೈಮೇಲೆ ಎಳೆದು ಕೊಳ್ಳುತ್ತಿದ್ದಾರೆಂದು ಪ್ರಗತಿ ಪರ ರೈತ ವೆಂಕಟೇಶಪ್ಪ ತಿಳಿಸಿದರು.

ರಾಜಗೋಪಾಲ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry