ಉದ್ಯೋಗ ಖಾತ್ರಿ; ಎಚ್.ಡಿ.ಕೋಟೆ ಪ್ರಥಮ

7

ಉದ್ಯೋಗ ಖಾತ್ರಿ; ಎಚ್.ಡಿ.ಕೋಟೆ ಪ್ರಥಮ

Published:
Updated:

ಹಂಪಾಪುರ: ‘ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 39 ಗ್ರಾಮ ಪಂಚಾಯಿತಿಯಿದ್ದು, 12 ಪಂಚಾಯಿತಿಯಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. 8 ಕಡೆ ಪ್ರಗತಿಯಲ್ಲಿದೆ. ಉಳಿದ ಕಡೆ ಸ್ಥಳದ ಕೊರತೆಯಿಂದಾಗಿ ಭೂಮಿಪೂಜೆಯೂ ಸಹ ಆಗಿಲ್ಲ’ ಎಂದು ಸಂಸದ ಆರ್.ಧ್ರುವನಾರಾಯಣ ತಿಳಿಸಿದರು.

ಸಮೀಪದ ಕೆ.ಬೆಳ್ತೂರು ಗ್ರಾಮದಲ್ಲಿ ಮಂಗಳವಾರ ₹ 18.25 ಲಕ್ಷ ವೆಚ್ಚದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಕಡ್ಡಾಯವಾಗಿ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಿಸಲು ಸೂಚಿಸಲಾಗಿದೆ. ತಾಲ್ಲೂಕಿನ ಎಲ್ಲಾ ಪಂಚಾಯಿತಿಯಲ್ಲೂ ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಈ ಬಾರಿ ಎನ್.ಡಿ.ಎ ಸರ್ಕಾರ ₹ 40 ಸಾವಿರ ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯಸರ್ಕಾರ ₹ 27 ಸಾವಿರ ಕೋಟಿ ಉಪಯೋಗಿಸಿಕೊಂಡಿದೆ. ಮೈಸೂರು ಜಿಲ್ಲೆ ಅನುದಾನ ಬಳಕೆಯಲ್ಲಿ 12ನೇ ಸ್ಥಾನದಲ್ಲಿದೆ. ಎಚ್.ಡಿ.ಕೋಟೆ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಹೊಂದಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಕಳೆದ ಸಾಲಿನಲ್ಲಿ ₹ 29 ಕೋಟಿ ಬಳಸಿಕೊಳ್ಳಲಾಗಿತ್ತು. ಈ ಬಾರಿ ಇಲ್ಲಿವರೆಗೆ ₹ 16.39 ಕೋಟಿ ಬಳಕೆಯಾಗಿದೆ. ಕೆ.ಬೆಳತ್ತೂರು ಗ್ರಾಮ ಪಂಚಾಯಿತಿ ಕಳೆದ ಸಾಲಿನಲ್ಲಿ ₹ 74 ಲಕ್ಷ ಬಳಸಿಕೊಂಡಿದ್ದರೆ, ಈ ಬಾರಿ ₹ 34 ಲಕ್ಷ ಉಪಯೋಗಿಸಿಕೊಂಡಿದೆ ಎಂದು ತಿಳಿಸಿದರು.

ಕೆ.ಬೆಳತ್ತೂರು ಗ್ರಾಮ ಪಂಚಾಯಿತಿ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಗೆ ಇಲ್ಲಿನ ಸ್ಮಶಾನ ಅಭಿವೃದ್ಧಿ ಸೇರಿಸುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಿದರು. ಅಲ್ಲದೆ, ಸಂಸದರ ಅನುದಾನದಲ್ಲಿ ಗ್ರಾಮದಲ್ಲಿ ಬಸ್. ನಿಲ್ದಾಣ ನಿರ್ಮಿಸುವುದಾಗಿ ಭರವಸೆ ನೀಡಿದರು.

ಚತುಷ್ಪಥ ರಸ್ತೆ: ಮೈಸೂರಿನಿಂದ ಮಾನಂದವಾಡಿವರೆಗೆ ಚತುಷ್ಪಥ ರಸ್ತೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿದೆ. ತಾಲ್ಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ₹ 2 ಕೋಟಿ ಬಿಡುಗಡೆಯಾಗಿದೆ. ಅಲ್ಲದೆ, 60 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆಯೂ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಚಿಕ್ಕಮಾದು ಉತ್ತಮ ಗೆಳೆಯ: ಅವರು ಬೇರೆ ಪಕ್ಷದವರು, ನಾನು ಬೇರೆ ಪಕ್ಷದವನು ಎಂಬ ಭೇದಭಾವ ಇರಲಿಲ್ಲ. ತಾಲ್ಲೂಕು ಅಭಿವೃದ್ಧಿ ವಿಚಾರದಲ್ಲಿ ಅವರು ಮತ್ತು ನಾನು ಉತ್ತಮ ರೀತಿಯಲ್ಲಿ ಹೊಂದಾಣಿಕೆಯಿಂದ ಸ್ಪಂದಿಸುತ್ತಿದ್ದೇವು. ಅವರ ನಿಧನ ತುಂಬ ನೋವ ತಂದಿದೆ ಎಂದರು.

ಶೇ 70 ಪೂರ್ಣ: ತಾಲ್ಲೂಕಿನ ಎಸ್ಸಿ, ಎಸ್ಟಿ ಕಾಲೊನಿಗಳಲ್ಲಿ ಶೇ 70ರಷ್ಟು ಸಿಮೆಂಟ್ ರಸ್ತೆ ನಿರ್ಮಾಣ ಮುಗಿದಿದೆ. ಮುಂದಿನ ದಿನಗಳಲ್ಲಿ ಉಳಿಕೆ ರಸ್ತೆಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. ಅಲ್ಲದೆ, ಇತರೆ ವರ್ಗದವರ ಕೇರಿಗಳ ರಸ್ತೆಗಳಿಗೆ ಸಿಮೆಂಟ್ ಹಾಕಿಸಲು ಮುಖ್ಯಮಂತ್ರಿ ಬಳಿ ಮಾತುಕತೆ ನಡೆಸಲಾಗಿದೆ ಎಂದರು.

ಜಿ.ಪಂ ಸದಸ್ಯ ಎಂ.ಪಿ.ನಾಗರಾಜು, ಗ್ರಾ.ಪಂ ಅಧ್ಯಕ್ಷೆ ತಾಯಮ್ಮ, ಉಪಾಧ್ಯಕ್ಷ ಮಂಜುನಾಥ್, ತಾ.ಪಂ ಸದಸ್ಯರಾದ ಲಕ್ಷ್ಮಿ ನಾಗರಾಜು, ಸಿದ್ದರಾಜು, ಜಿ.ಪಂ ಮಾಜಿ ಸದಸ್ಯ ಎಚ್.ಸಿ.ಲಕ್ಷ್ಮಣ್, ಇಒ ಶ್ರೀಕಂಠರಾಜೇಅರಸ್, ಬಿಇಒ ಸುಂದರ್, ಎಇಇ ಮಹೇಶ್, ಗ್ರೇಡ್– 2 ತಹಶೀಲ್ದಾರ್ ಆನಂದ್ ಇದ್ದರು.

ಅಧಿಕಾರಿಗಳಿಗೆ ಕಡಕ್ ಸೂಚನೆ

ಅಧಿಕಾರಿಗಳೇ... ನೀವು ಹೇಗೆ ಕೆಲಸ ಮಾಡುತ್ತೀರಿ ಎಂದು ನನಗೆ ಬೇಕಿಲ್ಲ. ಮುಂದಿನ 3 ತಿಂಗಳಲ್ಲಿ ಎಚ್.ಡಿ.ಕೋಟೆ ತಾಲ್ಲೂಕು ಬಯಲುಶೌಚ ಮುಕ್ತ ತಾಲ್ಲೂಕಾಗಬೇಕು. ಪ್ರಸ್ತುತ ಶೇ 85ರಷ್ಟು ಶೌಚಾಲಯ ನಿರ್ಮಿಸಲಾಗಿದೆ. ಕೇವಲ ಕಡತದಲ್ಲಿ ಒಂದನೇ ಸ್ಥಾನಕ್ಕೇರಿದರೆ ಸಾಲದು. ರಸ್ತೆ ಬದಿ ಜನರು ಶೌಚ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಂಸದ ಆರ್.ಧೃವನಾರಾಯಣ ಖಡಕ್ ಸೂಚನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry