ಐದು ವರ್ಷ ಕಳೆದರೂ ಹರಿಯದ ನೀರು!

7

ಐದು ವರ್ಷ ಕಳೆದರೂ ಹರಿಯದ ನೀರು!

Published:
Updated:

ಆಲಮಟ್ಟಿ (ನಿಡಗುಂದಿ): ಆಲಮಟ್ಟಿ ಎಡದಂಡೆ ಕಾಲುವೆಯ ವ್ಯಾಪ್ತಿಯ ಎಸ್ಇಪಿ, ಟಿಎಸ್‌ಪಿ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜಮೀನಿಗೆ ಪೈಪ್‌ಲೈನ್‌ ಹಾಗೂ ಹನಿ ನೀರಾವರಿ ಕಾಮಗಾರಿ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡು ಐದು ವರ್ಷ ಕಳೆದರೂ ನೀರು ಹರಿದಿಲ್ಲ ಎಂದು ಆರೋಪಿಸಿ ರೈತರು ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಪ್ರಧಾನಕಾರ್ಯದರ್ಶಿ ಲಿಂಗರಾಜ ಆಲೂರ, ನಿಡಗುಂದಿ ಪಟ್ಟಣದ ವ್ಯಾಪ್ತಿಯ ಸರ್ವೇ ಸಂಖ್ಯೆ 531 ರಲ್ಲಿ ತಮ್ಮಣ್ಣ ಬಂಡಿವಡ್ಡರ, ಕೃಷ್ಣಪ್ಪ ಬಂಡಿವಡ್ಡರ, ರಾಮಸ್ವಾಮಿ ಬಂಡಿವಡ್ಡರ ಸೇರಿದಂತೆ ಇನ್ನಿತರರ ಜಮೀನಿಗೆ ಹೊಳೆಯಿಂದ ಪೈಪ್‌ಲೈನ್‌ ಮತ್ತು ಹನಿ ನೀರಾವರಿ ಕಾಮಗಾರಿ ಕೈಗೊಳ್ಳಲು ₹ 1 ಕೋಟಿ ಐದು ವರ್ಷದ ಹಿಂದೆಯೇ ಮಂಜೂರಾಗಿದೆ.

ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡು, ಕೇವಲ 12 ತಿಂಗಳ ಅವಧಿಯಲ್ಲಿ ನೀರು ಹರಿಯಬೇಕಿತ್ತು. ಕಾಮಗಾರಿ ಕಳಪೆಯ ಕಾರಣ ಕಾಮಗಾರಿ ಪೂರ್ಣಗೊಂಡು ನಾಲ್ಕು ವರ್ಷ ಗತಿಸುತ್ತಾ ಬಂದರೂ ಆ ಪೈಪ್‌ಲೈನ್‌ಲ್ಲಿ ಇನ್ನೂವರೆಗೂ ಹನಿ ನೀರೂ ಹರಿದಿಲ್ಲ. ಅದಕ್ಕೆ ಕಳಪೆ ಕಾಮಗಾರಿಯೇ ಕಾರಣ, ಕಾಮಗಾರಿ ಪೂರ್ಣಗೊಂಡು ಬಿಲ್ ಕೂಡಾ ಪಾಸಾಗಿದೆ. ಆದರೆ ಇಲ್ಲಿ ರೈತರ ಜಮೀನಿಗೆ ಹರಿಯಬೇಕಿದ್ದ ನೀರು ಇನ್ನೂ ಹರಿದಿಲ್ಲ ಎಂದರು.

ನಾಲ್ಕು ದಿನಗಳಲ್ಲಿ ಆ ರೈತರ ಜಮೀನಿಗೆ ನೀರು ಹರಿಯದಿದ್ದರೇ ಕೆಬಿಜೆಎನ್ಎಲ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ವೆಂಕಟೇಶ ಬಂಡಿವಡ್ಡರ, ತಿರುಪತಿ ಬಂಡಿವಡ್ಡರ, ಸಾಬಣ್ಣ ಅಂಗಡಿ, ಮಂಜು ಕುರಿ, ಸಂಗು ಗುಳೇದಗುಡ್ಡ, ಸಂಗಮೇಶ ಶಿವಣಗಿ, ಪರಶು ಸೊನ್ನದ, ತಿಮ್ಮಣ್ಣ ವಡ್ಡರ, ಕೃಷ್ಣಪ್ಪ ವಡ್ಡರ, ಲಕ್ಕಪ್ಪ ಅಂಗಡಿ, ರಾಮಸ್ವಾಮಿ ವಡ್ಡರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry