ಬಾಲ್ಯದ ದೌರ್ಜನ್ಯಕ್ಕೆ ದೊಡ್ಡವರಾದ ಬಳಿಕ ದೂರು

7
ಕಾನೂನು ತಿದ್ದುಪಡಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಒತ್ತಾಯ

ಬಾಲ್ಯದ ದೌರ್ಜನ್ಯಕ್ಕೆ ದೊಡ್ಡವರಾದ ಬಳಿಕ ದೂರು

Published:
Updated:

ನವದೆಹಲಿ: ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರು, ವಯಸ್ಕರಾದ ನಂತರ ಆರೋಪಿಗಳ ವಿರುದ್ಧ ದೂರು ದಾಖಲಿಸಲು ಅವಕಾಶ ಒದಗಿಸುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಚಿಂತನೆ ನಡೆಸಿದೆ.

‘ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಸಂತ್ರಸ್ತರು ದೂರು ದಾಖಲಿಸಿಲು ಯಾವುದೇ ಕಾಲಮಿತಿ ಇಲ್ಲ ಎಂದು ಘೋಷಿಸಬೇಕು. ಈ ಸಂಬಂಧ ಜಾರಿಯಲ್ಲಿರುವ ಕಾನೂನುಗಳಿಗೆ ಅಗತ್ಯ ತಿದ್ದುಪಡಿ ತರಬೇಕು ಎಂದು ಸಂಬಂಧಿತ ಸಚಿವಾಲಯಕ್ಕೆ ಶಿಫಾರಸು ಮಾಡುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಸಂಸ್ಥಾಪನೆಯ 25ನೇ ವರ್ಷಾಚರಣೆ ಅಂಗವಾಗಿ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.

‘ದೌರ್ಜನ್ಯ ನಡೆದ 40 ವರ್ಷಗಳ ನಂತರವೂ ದೂರು ದಾಖಲಿಸಲು ಹಲವು ದೇಶಗಳಲ್ಲಿ ಅವಕಾಶವಿದೆ. ಇಂತಹ ಪ್ರಕರಣಗಳಲ್ಲಿ ದೂರು ದಾಖಲಿಸಲು ಬಾರತದಲ್ಲಿ ಇರುವ ಕಾಲಮಿತಿಯನ್ನು ಹೇಗೆ ರದ್ದುಪಡಿಸಬಹುದು ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದು ಅವರು ವಿವರಿಸಿದ್ದಾರೆ.

‘ಅನಿವಾಸಿ ಭಾರತೀಯ ಮಹಿಳೆಯೊಬ್ಬರು ಇಂತಹ ಚಿಂತನೆಯನ್ನು ಮುಂದಿಟ್ಟಿದ್ದಾರೆ. ಸದ್ಯ ಕೆನಡಾದಲ್ಲಿ ವಿಜ್ಞಾನಿಯಾಗಿ ದುಡಿಯುತ್ತಿರುವ ಆ ಮಹಿಳೆ ತನ್ನ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದರಂತೆ. ಆ ಆರೋಪಿಯ ವಿರುದ್ಧ ಕಳೆದ ವರ್ಷ ಚೆನ್ನೈನಲ್ಲಿ ದೂರು ದಾಖಲಿಸಲು ಅವರು ಮುಂದಾದಾಗ ಪೊಲೀಸರು ದೂರು ಸ್ವೀಕರಿಸಲಿಲ್ಲವಂತೆ. ಘಟನೆ ನಡೆದು ತುಂಬಾ ವರ್ಷಗಳಾಗಿರುವ ಕಾರಣ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದರಂತೆ’ ಎಂದು ಮೇನಕಾ ವಿವರಿಸಿದರು.

‘ಇತ್ತೀಚೆಗೆ ಆ ಮಹಿಳೆ ನನ್ನನ್ನು ಭೇಟಿ ಮಾಡಿದ್ದರು. ಇಂತಹ ಕಾನೂನಿಗೆ ತಿದ್ದುಪಡಿ ತನ್ನಿ. ಆಗ ಸಂತ್ರಸ್ತರು ದೂರು ದಾಖಲಿಸಲು ಅವಕಾಶ ಸಿಗುತ್ತದೆ ಎಂದು ಅವರು ಮನವಿ ಮಾಡಿಕೊಂಡರು. ಸಚಿವಾಲಯವು ಈ ನಿರ್ಧಾರ ತೆಗೆದುಕೊಳ್ಳಲು ಆ ಮಹಿಳೆಯೇ ಕಾರಣ’ ಎಂದರು.

‘ನ್ಯಾಯಾಂಗದಲ್ಲಿ ಭ್ರಷ್ಟತೆ’

‘ನ್ಯಾಯಾಂಗದಲ್ಲಿ ಭ್ರಷ್ಟಾಚಾರವಿದೆ’ ಎಂದು ಸಚಿವರು ಆರೋಪಿಸಿದ್ದಾರೆ.

‘ಈಚೆಗೆ ಪ್ರಕರಣವೊಂದನ್ನು ಇತ್ಯರ್ಥಪಡಿಸಲು ನ್ಯಾಯಾಧೀಶರೊಬ್ಬರು ನನ್ನ ಬಳಿಯೇ ₹ 7 ಲಕ್ಷ ಲಂಚ ಕೇಳಿದ್ದರು. ಸಚಿವೆಯ ಸ್ಥಿತಿಯೇ ಈ ರೀತಿಯಾದರೆ, ಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು’ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಆದರೆ ಅವರು ಪ್ರಕರಣ ಮತ್ತು ನ್ಯಾಯಾಧೀಶರ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry