ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಪಾತ್ರದ ಪರಾಮರ್ಶೆ: ‘ಸುಪ್ರೀಂ’

ಲೇವಾದೇವಿ ವ್ಯವಹಾರ ಅಕ್ರಮ ಪ್ರಕರಣ
Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಲೇವಾದೇವಿ ವ್ಯವಹಾರ ನಡೆಸುವವರು ಅಕ್ರಮವಾಗಿ ಬಡ್ಡಿ ಸಂಗ್ರಹಿಸಿರುವ ಪ್ರಕರಣದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿ ದಾಖಲೆ ವಶಪಡಿಸಿಕೊಳ್ಳಲು ಕರ್ನಾಟಕ ಲೇವಾದೇವಿ ಕಾಯ್ದೆ– 1961ರ ನಿಬಂಧನೆಗಳ ಅನ್ವಯ ಅವಕಾಶವಿದೆಯೇ ಎಂಬುದನ್ನು ಪರಾಮರ್ಶೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ಕೊಪ್ಪಳ ಜಿಲ್ಲೆಯಲ್ಲಿ ಲೇವಾದೇವಿ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ಕ್ರಿಮಿನಲ್‌ ಮೊಕದ್ದಮೆ ರದ್ದುಪಡಿಸಿ ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠ, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಲೇವಾದೇವಿ ವ್ಯವಹಾರ ನಡೆಸುತ್ತಿರುವ ಗಂಗಾವತಿಯ ಷಣ್ಮುಖಪ್ಪ ಸಿಂಗನಾಳ, ಸುರೇಶ ಮತ್ತು ಮಹೇಶ ಎಂಬುವವರ ವಿರುದ್ಧ ಬಡ್ಡಿ ನಿಷೇಧ ಕಾಯ್ದೆ– 2004 ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 420, 504 ಮತ್ತು 506ರ ಅಡಿ ಪೊಲೀಸರು ದಾಖಲಿಸಿದ್ದ ಕ್ರಿಮಿನಲ್‌ ಮೊಕದ್ದಮೆಗಳನ್ನು ರದ್ದುಪಡಿಸಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಕೊಪ್ಪಳದ ವೀರಬಸಪ್ಪ ಮೇಲ್ಮನವಿ ಸಲ್ಲಿಸಿದ್ದಾರೆ.

ಲೇವಾದೇವಿ ವ್ಯವಹಾರದಲ್ಲಿನ ಅಕ್ರಮದ ಕುರಿತು ಪರಿಶೀಲಿಸಲು ಸಂಬಂಧಿಸಿದ ಇಲಾಖೆಯ ರಿಜಿಸ್ಟ್ರಾರ್‌ ಅಥವಾ ಸಹಾಯಕ ರಿಜಿಸ್ಟ್ರಾರ್‌ ಮಾತ್ರ ಸ್ಥಳಕ್ಕೆ ತೆರಳಬಹುದು ನಿಯಮಾನುಸಾರ ವ್ಯವಹಾರ ನಡೆಸಲಾಗುತ್ತಿದೆಯೇ ಎಂಬುದನ್ನು ದಾಳಿಯ ವೇಳೆ ಪರಿಶೀಲಿಸಿ, ಶೋಧಕಾರ್ಯ ನಡೆಸಬಹುದು. ಅಲ್ಲದೆ, ದಾಖಲೆಗಳನ್ನೂ ವಶಪಡಿಸಿಕೊಳ್ಳಲು ಕಾಯ್ದೆ ಅಡಿ ಅವಕಾಶವಿದೆ ಎಂಬ ಮೇಲ್ಮನವಿ ಆಧರಿಸಿ ಹೈಕೋರ್ಟ್‌ ಆದೇಶ ನೀಡಿದೆ. ಆದರೆ, ಕಾಯ್ದೆಯ ಸೆಕ್ಷನ್‌ 15ರ ಪ್ರಕಾರ ಪೋಲಿಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರಾದ ಸಂಜಯ್‌ ನುಲಿ ಹಾಗೂ ಮಲ್ಹಾರ್‌ ರಾವ್‌ ನ್ಯಾಯಪೀಠಕ್ಕೆ ತಿಳಿಸಿದರು.

ಷಣ್ಮುಖಪ್ಪ ಮತ್ತಿತರರಿಂದ ₹ 8.32 ಲಕ್ಷ ಸಾಲ ಪಡೆದು, ಭಾರಿ ಪ್ರಮಾಣದ ಬಡ್ಡಿ ಸಮೇತ ₹ 34 ಲಕ್ಷ ಮರಳಿ ಪಾವತಿಸಲಾಗಿದೆ. ಆದರೆ, ಸಾಲ ಪಡೆಯುವಾಗ ನೀಡಿದ್ದ ಚೆಕ್‌ಗಳನ್ನು ದುರುಪಯೋಗ ಪಡಿಸಿಕೊಂಡು ಇನ್ನೂ ₹ 24 ಲಕ್ಷ ಪಾವತಿಸುವಂತೆ ಕಿರುಕುಳ ನೀಡಿದ್ದರಿಂದ ವೀರಬಸಪ್ಪ ಅವರು ಗಂಗಾವತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT