ಶುಕ್ರವಾರ, ಡಿಸೆಂಬರ್ 6, 2019
23 °C

‘ಮುನ್ಸಾಮಿ’ ನೆನಪು...

Published:
Updated:
‘ಮುನ್ಸಾಮಿ’ ನೆನಪು...

‘ಕಂಟೆಂಟ್‌ ಇದ್ಮೇಲೆ ಕಟೌಟ್‌ ಯಾಕೋ? ಗಂಟೆ, ಜಾಗಟೆ, ತಮಟೆ ಎಲ್ಲ ರೆಡಿ ಇಟ್ಕೊಳ್ಳಿ. ಆದಷ್ಟೂ ಬೇಗ ನಿಮ್ಮೂರಿಗೆ ಬರ್ತಿದ್ದೀನಿ’

ಇದು ಇತ್ತೀಚೆಗೆ ವಿಧಿವಶರಾದ ನಟ, ನಿರ್ದೇಶಕ ಕಾಶೀನಾಥ್‌ ಹೇಳಿದ ಕೊನೆಯ ಡೈಲಾಗ್‌! ‘ಆದಷ್ಟೂ ಬೇಗ ಬರ್ತೀನಿ’ ಎಂದ ಮಾತು ಜನರನ್ನು ತಲುಪುವ ಮೊದಲೇ ಅವರು ಎಂದೂ ಬಾರದ ಊರಿಗೆ ಪಯಣ ಬೆಳೆಸಿಯಾಗಿತ್ತು.

ಕಾಶೀನಾಥ್‌ ನಟನೆಯ ಕೊನೆಯ ಸಿನಿಮಾ ‘ಓಳ್‌ ಮುನ್ಸಾಮಿ’. ಅವರ ನೆನಪನ್ನು ಹಂಚಿಕೊಳ್ಳಲಿಕ್ಕಾಗಿಯೇ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು.

ಗದ್ಗದಿತ ಕಂಠದಲ್ಲಿಯೇ ಮಾತಿಗಾರಂಭಿಸಿದ ಆನಂದಪ್ರಿಯ, ‘ನನ್ನ ನಿರ್ದೇಶನದ ಮೊದಲ ಸಿನಿಮಾ ಕಾಶೀನಾಥ್‌ ಅಭಿನಯದ ಕೊನೆಯ ಸಿನಿಮಾ ಕೂಡ ಆಗಿಯೋಯ್ತು’ ಎಂದು ನೋವಿನಿಂದ ನುಡಿದರು. ಅವರ ಮೊದಲ ಭೇಟಿಯಿಂದ ಕೊನೆಯ ದಿನದವರೆಗೂ ಒಡನಾಟದ ನೆನಪುಗಳನ್ನು ಅವರು ಹಂಚಿಕೊಂಡರು.

ಅವುಗಳಲ್ಲಿ ಒಂದು ಘಟನೆ ಹೀಗಿದೆ: ಈ ಚಿತ್ರದಲ್ಲಿ ಕಾಶೀನಾಥ್‌ ಅವರದು ಸ್ವಾಮೀಜಿಯ ಪಾತ್ರ. ಸೆಟ್‌ನಲ್ಲಿ ಒಂದು ಮಗು ಲಾಲಿಪಾಪ್‌ ಕೈಯಲ್ಲಿ ಹಿಡಿದುಕೊಂಡು ನಿಂತಿತ್ತು. ಅದನ್ನು ನೋಡಿದ ಕಾಶೀನಾಥ್‌ ಆ ಮಗುವಿನ ಕೈಯಲ್ಲಿನ ಲಾಲಿಪಾಪ್‌ ಕಸಿದುಕೊಂಡು ತಾವು ಬಾಯಿಯಲ್ಲಿಟ್ಟುಕೊಂಡು ಕ್ಯಾಮೆರಾ ಎದುರು ಬಂದು ನಿಂತರು! ‘ಅರೆ, ಇದು ಈ ಪಾತ್ರಕ್ಕೆ ಚೆನ್ನಾಗಿ ಹೊಂದಿಕೆ ಆಗುತ್ತದಲ್ಲ’ ಎಂದು ನಿರ್ದೇಶಕರು ಆ ಲಾಲಿಪಾಪ್‌ ಅನ್ನೂ ಕಾಶೀನಾಥ್‌ ಅವರ ಪಾತ್ರದ ಜತೆಗೇ ಸೇರಿಸಿಬಿಟ್ಟರು.

ಚಿತ್ರೀಕರಣ ನಡೆಯುತ್ತಿದ್ದಾಗ ಒಮ್ಮೆ ಕಾಶೀನಾಥ್‌ ಕೈಯಲ್ಲಿದ್ದ ಲಾಲಿಪಾಪ್‌ ನೆಲಕ್ಕೆ ಬಿದ್ದುಹೋಯ್ತು. ‘ಇರಿ ಸರ್‌, ಇನ್ನೊಂದು ತರೋಕೆ ಹೇಳ್ತೀನಿ’ ಆನಂದಪ್ರಿಯ ಹೀಗೆ ಹೇಳುತ್ತಿದ್ದ ಹಾಗೆಯೇ ಕಾಶೀನಾಥ್‌, ಬಾಗಿ ನೆಲಕ್ಕೆ ಬಿದ್ದಿದ್ದ ಲಾಲಿಪಾಪ್‌ ಎತ್ತಿಕೊಂಡು ಬಟ್ಟೆಯಲ್ಲಿ ದೂಳು ಒರೆಸಿಕೊಂಡು ಬಾಯಿಗಿಟ್ಟುಕೊಂಡಾಗಿತ್ತು! ‘ಯಾಕೆ ಹೀಗೆ ಮಾಡಿದ್ರಿ ಸರ್‌. ಅದು ಮಣ್ಣಾಗಿಬಿಟ್ಟಿತ್ತು’ ಎಂದು ಕೇಳಿದರೆ, ‘ನಾನು ಮಣ್ಣಿನ ಮಗ ಕಣ್ರೀ’ ಎಂದು ನಕ್ಕರು.

‘ಇಂಥ ನೂರಾರು ಘಟನೆಗಳು ನಮ್ಮ ನೆನಪಿನಲ್ಲಿವೆ. ತುಂಬ ಸರಳವಾದ, ಯಾವುದೇ ಹಮ್ಮುಬಿಮ್ಮು ಇಲ್ಲದ ವ್ಯಕ್ತಿ ಅವರಾಗಿದ್ದರು’ ಎನ್ನುತ್ತಲೇ ಕಂಠಬಿಗಿದು ಮಾತು ನಿಲ್ಲಿಸಿದರು ಆನಂದಪ್ರಿಯ.

ಚಿತ್ರವನ್ನು ಒಪ್ಪಿಕೊಳ್ಳುವಾಗ ಅವರು ಆನಂದಪ್ರಿಯ ಅವರಿಗೆ ಎರಡು ಷರತ್ತುಗಳನ್ನು ವಿಧಿಸಿದ್ದರು. ಮೊದಲನೆಯದು ಇಡೀ ಚಿತ್ರಕಥೆಯನ್ನು ತಮಗೆ ಓದಿ ಹೇಳಬೇಕು ಎಂಬುದು. ಇನ್ನೊಂದು ತಮ್ಮನ್ನು ನಟನಾಗಿ ನೋಡಬೇಡಿ, ಬದಲಿಗೆ ನಿಮ್ಮ ನಿರ್ದೇಶನ ತಂಡದಲ್ಲಿ ಒಬ್ಬನನ್ನಾಗಿ ನೋಡಿ. ನಿಮ್ಮ ಸಹಾಯಕ ನಿರ್ದೇಶಕ ಎಂದು ಪರಿಗಣಿಸಿ ತಮ್ಮ ಸಲಹೆಗಳನ್ನು ಕೇಳಿಸಿಕೊಳ್ಳುತ್ತಾ ಇರಿ. ಅಂತಾದರೆ ಮಾತ್ರ ತಾವು ಈ ಸಿನಿಮಾದಲ್ಲಿ ನಟಿಸುವುದಾಗಿ ಅವರು ಹೇಳಿದ್ದರಂತೆ.

ತಮ್ಮ ಮಾತನ್ನು ಕೊನೆಯವರೆಗೂ ಉಳಿಸಿಕೊಂಡ ಕಾಶೀನಾಥ್‌, ಹಲವಾರು ವಿಷಯಗಳಲ್ಲಿ ಸಲಹೆ ಸೂಚನೆ ನೀಡುತ್ತಲೇ ಇದ್ದರು. ಆದರೆ ಚಿತ್ರೀಕರಣದ ಸಂದರ್ಭದಲ್ಲಿ ಮಾತ್ರ ಯಾವುದೇ ವಿಷಯಕ್ಕೆ ಮೂಗುತೂರಿಸಲು ಹೋಗುತ್ತಿರಲಿಲ್ಲವಂತೆ.

‘ಅನುಭವ’ದಂಥ ಸಿನಿಮಾದ ಮೂಲಕ ನನ್ನಂಥವರಿಗೆ ಲೈಂಗಿಕ ಶಿಕ್ಷಣದ ಬಗ್ಗೆ ತಿಳಿಸಿದ ಶ್ರೇಷ್ಠ ವ್ಯಕ್ತಿ ಆತ. ಅವರ ಜತೆಗೆ ನಟಿಸಲು ಅವಕಾಶ ಸಿಕ್ಕಿರುವುದು ನನ್ನ ಬದುಕಿನಲ್ಲಿ ನಡೆದ ಪವಾಡ’ ಎಂದರು ಗೌತಮ್‌.

‘ಒಬ್ಬ ಮೇರು ವ್ಯಕ್ತಿಯ ಎದುರು ನಟಿಸುತ್ತಿದ್ದೇವೆ ಅಂತ ಗೊತ್ತಾಗದ ಹಾಗೆ ಸರಳವಾಗಿ ನಮ್ಮೊಂದಿಗೆ ಅವರು ಬೆರೆಯುತ್ತಿದ್ದರು’ ಎಂದು ನೆನಪಿಸಿಕೊಂಡರು ಶಿವಮೊಗ್ಗ ವೈದ್ಯ. ವಿಜಯಲಕ್ಷಿ, ರಾಮಣ್ಣ, ನಿರಂಜನ್‌, ಛಾಯಾಗ್ರಾಹಕ ನಾಗಾರ್ಜುನ್‌ ಅವರೂ ಕಾಶೀನಾಥ್‌ ಅವರ ಜತೆಗಿನ ಒಡನಾಟಗಳನ್ನು ಹಂಚಿಕೊಂಡರು.

ಫೆಬ್ರುವರಿ ಅಂತ್ಯ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ‘ಓಳ್‌ ಮುನ್ಸಾಮಿ’ಯನ್ನು ತೆರೆಗೆ ತರುವ ಆಲೋಚನೆ ಚಿತ್ರತಂಡದ್ದು. v

ಪ್ರತಿಕ್ರಿಯಿಸಿ (+)