ಭಾನುವಾರ, ಜೂನ್ 7, 2020
30 °C

ತೆಂಗಿನಿಂದ ಬಗೆಬಗೆ ಅಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಂಗಿನಿಂದ ಬಗೆಬಗೆ ಅಡುಗೆ

ಪನ್ನೀರ್ ಪೊಲ್ಲಿಚಟ್ಟು

ಬೇಕಾದ ಸಾಮಗ್ರಿ:
ಪನ್ನೀರ್ 200 ಗ್ರಾಂ, ಬೆಳ್ಳುಳ್ಳಿ–ಶುಂಠಿ ಪೇಸ್ಟ್ 1 ಟೇಬಲ್ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ– 4 ಚಮಚ, ಈರುಳ್ಳಿ–2, ಟೊಮೆಟೊ –3, ಹುಣಸೇಹಣ್ಣು– 10 ಗ್ರಾಂ, ಖಾರದ ಪುಡಿ 2 ಟೇಬಲ್ ಚಮಚ, ಕೊತ್ತಂಬರಿ ಪುಡಿ 3 ಟೇಬಲ್ ಚಮಚ, ಗರಂ ಮಸಾಲ 1 ಟೇಬಲ್ ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಬಾಳೆ ಎಲೆ ಸಣ್ಣ ಆಕಾರದ್ದು 2.

ವಿಧಾನ: ಸಣ್ಣ ಆಯತಾಕಾರದಲ್ಲಿ ಕತ್ತರಿಸಿದ ಪನ್ನೀರ್‌ಅನ್ನು ಬಿಸಿನೀರಿನಲ್ಲಿ ಅದ್ದಿ. ನಂತರ ಇದಕ್ಕೆ ಉಪ್ಪು ಬೆರೆಸಿದ ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಹಾಕಿ. ಬಾಣಲೆಯಲ್ಲಿ ಎಣ್ಣೆ ಬಿಸಿಯಾದ ಕೂಡಲೇ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಸ್ವಲ್ಪ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವವರೆಗೆ ತಿರುವಿ. ಕತ್ತರಿಸಿದ ಟೊಮೆಟೊ, ಗರಂ ಮಸಾಲ ಪುಡಿ ಹಾಕಿ. ಮಸಾಲ ಎಣ್ಣೆ ಬಿಟ್ಟುಕೊಳ್ಳುವವರೆಗೆ ಬಿಸಿ ಮಾಡಿ. ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಬಾಣಲೆ ಕೆಳಗಿಳಿಸಿ. ಸ್ವಲ್ಪ ತಣ್ಣಗಾಗಲು ಬಿಡಿ.

ಬಾಳೆಎಲೆಯನ್ನು ಆಯಾತಾಕಾರದಲ್ಲಿ ಕತ್ತರಿಸಿಕೊಳ್ಳಿ. ಬಾಳೆಎಲೆಯಲ್ಲಿ ಒಂದು ಟೀ ಚಮಚ ತಣ್ಣಗಾದ ಮಸಾಲೆಯನ್ನು ಹರಡಿ, ಮಧ್ಯೆ ಪನ್ನೀರ್ ತುಂಡು ಇಡಿ. ಪನ್ನೀರ್ ಮುಚ್ಚುವಂತೆ ಮತ್ತೊಂದು ಚಮಚ ಮಸಾಲೆ ಮಿಶ್ರಣವನ್ನು ಹರಡಿ. ಬಾಳೆಎಲೆಯನ್ನು ಮಡಚಿ. ನಂತರ ಇದನ್ನು ನಾನ್ ಸ್ಟಿಕ್ ಪ್ಯಾನ್‌ನಲ್ಲಿ ಎರಡೂ ಕಡೆ ಬಿಸಿ ಮಾಡಿ. ಈಗ ಪನ್ನೀರ್ ಪೊಲ್ಲಿಚಟ್ಟು ತಿನ್ನಲು ಸಿದ್ಧ. ಇದನ್ನು ಬಿಸಿಯಾಗಿರುವಾಗಲೇ ತಿನ್ನಲು ಕೊಡಿ.

*

ತೆಂಗಿನಕಾಯಿ ಸೂಪ್

 
ಬೇಕಾದ ಸಾಮಗ್ರಿ: ಮೈದಾಹಿಟ್ಟು 2 ಟೇಬಲ್ ಚಮಚ, ಬೆಣ್ಣೆ 2 ಟೇಬಲ್ ಚಮಚ, ಬೆಳ್ಳುಳ್ಳಿ 1 ಟೇಬಲ್ ಚಮಚ, ಕೊತ್ತಂಬರಿ ಸೊಪ್ಪು 20 ಗ್ರಾಂ, ಕತ್ತರಿಸಿದ ಅಣಬೆ (ಮಶ್ರೂಮ್) 3, ಸಣ್ಣಗೆ ಕತ್ತರಿಸಿದ ಕ್ಯಾರೆಟ್ ಸ್ವಲ್ಪ, ಕತ್ತರಿಸಿದ ಬೀನ್ಸ್ 20 ಗ್ರಾಂ, ತೆಂಗಿನಹಾಲು 200 ಗ್ರಾಂ, ಸಣ್ಣಗೆ  ವೆಜಿಟೇಬಲ್ ಸ್ಟಾಕ್ (ತರಕಾರಿ ರಸ) 300 ಎಂ.ಎಲ್., ರುಚಿಗೆ ತಕ್ಕಷ್ಟು ಉಪ್ಪು, ಕಾಳು ಮೆಣಸಿನ ಪುಡಿ ಅರ್ಧ ಟೇಬಲ್ ಚಮಚ.

ವಿಧಾನ: ದಪ್ಪ ತಳದ ಬಾಣಲೆ ಅಥವಾ ಪ್ಯಾನ್‌ನಲ್ಲಿ ಬೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಇದಕ್ಕೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ತರಕಾರಿಗಳನ್ನು ಹಾಕಿ. ತರಕಾರಿಯಲ್ಲಿರುವ ನೀರಿನಂಶ ಹೋಗುವವರೆಗೆ ಚೆನ್ನಾಗಿ ತಿರುವಿ. ನಂತರ ಇದಕ್ಕೆ ಮೈದಾಹಿಟ್ಟು ಹಾಕಿ. ಹಿಟ್ಟಿನ ಹಸಿ ವಾಸನೆ ಹೋಗುವವರೆಗೆ ಬಿಸಿ ಮಾಡಿ. ನಂತರ ವೆಜಿಟೇಬಲ್ ಸ್ಟಾಕ್ ಹಾಕಿ ಚೆನ್ನಾಗಿ ತಿರುವಿ. ಸೂಪ್ ತುಸು ಗಟ್ಟಿಯಾಗುತ್ತಿರುವಾಗಲೇ ತೆಂಗಿನಹಾಲು ಹಾಕಿ ಮಿಶ್ರಣ ಮಾಡಿ. ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಹಾಕಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ತೆಂಗಿನಕಾಯಿ ಸೂಪ್ ಸವಿಯಲು ಸಿದ್ಧ. ಬಿಸಿಯಾಗಿರುವಾಗಲೇ ಕುಡಿದರೆ ರುಚಿ ಹೆಚ್ಚು.

*ಎಳನೀರು ಪಾಯಸ

ಬೇಕಾದ ಸಾಮಗ್ರಿ: ಎಳನೀರು ಒಂದು ಕಪ್, ಎಳೆಯ ತೆಂಗಿನ ತಿರುಳು ಒಂದು ಕಪ್, ಸ್ವೀಟ್ ಕಂಡೆನ್‌ಸ್ಡ್‌ ಮಿಲ್ಕ್ ಅರ್ಧ ಕಪ್, ಹಾಲು ಎರಡು ಕಪ್, ಸಕ್ಕರೆ ಅರ್ಧ ಕಪ್, ಏಲಕ್ಕಿ ಪುಡಿ ಅರ್ಧ ಟೀ ಚಮಚ, ಗೋಡಂಬಿ ಅಥವಾ ಬಾದಾಮಿ ಬೀಜ ಕಾಲು ಕಪ್.

ಮಾಡುವ ವಿಧಾನ: ಒಂದು ಕಪ್ ಎಳನೀರು ಮತ್ತು ಅರ್ಧ ಕಪ್  ಮತ್ತು ಎಳೆಯ ತೆಂಗಿನ ತಿರುಳನ್ನು ಹದವಾಗಿ ಮಿಶ್ರಣ ಮಾಡಿ ಸ್ಮೂತಿ ರೀತಿಯಲ್ಲಿ ಮಾಡಕೊಳ್ಳಿ.  ಅರ್ಧ ಕಪ್ ಸ್ವೀಟ್ ಕಂಡೆನ್‌ಸ್ಡ್‌ ಮಿಲ್ಕ್, ಎರಡು ಕಪ್ ಹಾಲು, ಸಕ್ಕರೆಯನ್ನು ಪ್ಯಾನ್‌ನಲ್ಲಿ ಹಾಕಿ ಬಿಸಿ ಮಾಡಿ, ಇದು ಕುದಿ ಬಂದು ಅರ್ಧ ಪ್ರಮಾಣಕ್ಕೆ ಇಳಿಯುವ ತನಕ ಸಣ್ಣ ಉರಿಯಲ್ಲಿ ಕಾಯಿಸಿ. ನಂತರ ಇದನ್ನು ಕೆಳಗಿಳಿಸಿ ಈ ಮಿಶ್ರಣಕ್ಕೆ ತೆಂಗಿನ ತಿರುಳು ಮತ್ತು ಎಳನೀರಿನ ಮಿಶ್ರಣವನ್ನು ಸೇರಿಸಿ. ಪರಿಮಳ ಮತ್ತು ರುಚಿಗೆ ಅರ್ಧ ಟೀ ಚಮಚ ಏಲಕ್ಕಿ ಪುಡಿ ಉದುರಿಸಿ, ಗೋಡಂಬಿ ಅಥವಾ ಬಾದಾಮಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ರುಚಿಯಾದ ಎಳನೀರು ಪಾಯಸ ಸವಿಯಲು ಸಿದ್ಧ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.