4

ವಚನ ಸಾಹಿತ್ಯದ ವೈಭವದ ಮೆರವಣಿಗೆ

Published:
Updated:
ವಚನ ಸಾಹಿತ್ಯದ ವೈಭವದ ಮೆರವಣಿಗೆ

ಬೀದರ್‌: ವಚನ ವಿಜಯೋತ್ಸವದ ಅಂಗವಾಗಿ ಲಿಂಗಾಯತ ಧರ್ಮಗ್ರಂಥ ಗುರುವಚನ ಹಾಗೂ ವಚನ ಸಾಹಿತ್ಯದ ಮೆರವಣಿಗೆ ನಗರದಲ್ಲಿ ಬುಧವಾರ ವೈಭವದಿಂದ ಜರುಗಿತು.

ನಗರದ ಬಸವೇಶ್ವರ ವೃತ್ತದಿಂದ ಹೂವಿನಿಂದ ಅಲಂಕೃತವಾದ ರಥದಲ್ಲಿ ಆರಂಭವಾದ ಬಸವೇಶ್ವರ ಭಾವಚಿತ್ರ, ಗುರುವಚನ ಹಾಗೂ ವಚನ ಸಾಹಿತ್ಯದ ಮೆರವಣಿಗೆಯು ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಮಡಿವಾಳ ಮಾಚಿದೇವ ವೃತ್ತ, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತ, ಹೊಸ ಬಸ್ ನಿಲ್ದಾಣ, ಬರೀದಶಾಹಿ ಉದ್ಯಾನ, ಪಾಪನಾಶ ಗೇಟ್‌, ಪಾಪನಾಶ ದೇಗುಲ ಹಿಂಭಾಗದಿಂದ ಸಾಗಿ ಬಸವಗಿರಿಗೆ ತಲುಪಿ ಸಮಾರೋಪಗೊಂಡಿತು.

ಹಲವು ಗ್ರಾಮಗಳಿಂದ ಬಂದ ಬಸವ ಜ್ಯೋತಿ ತಂಡಗಳು, ಶರಣರ ಸ್ತಬ್ಧ ಚಿತ್ರಗಳು, ತಲೆ ಮೇಲೆ ವಚನ ಸಾಹಿತ್ಯ ಹೊತ್ತ ಸಹಸ್ರಾರು ಶರಣೆಯರು ಭಕ್ತಿಯ ಹೊನಲನ್ನು ಹರಿಸಿದರು.

ಸೊಲ್ಲಾಪುರದ ನಂದಿಕೋಲು, ಹೊಸೂರಿನ ಝಾಂಜ್‌ಮೇಳ, ಮಂಡ್ಯದ ಪೂಜಾ ಕುಣಿತ–ತಮಟೆ ತಂಡ, ಬೆಳ್ಳೇರಿಯ ಮಹಿಳಾ ಡೊಳ್ಳು, ಬರೂರಿನ ಚಿಟಿಕೆ ಭಜನೆ– ಹಲಗೆ ತಂಡ, ಗದಗಿನ ಜಾನಪದ ಕಲಾ ತಂಡ, ಸ್ಥಳೀಯ ಕೋಲಾಟ, ವಚನ ವಡಪು ಭಜನಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಮೆರವಣಿಗೆಯಲ್ಲಿ ಇದ್ದ ಹತ್ತಾರು ವಾಹನಗಳಿಗೆ ಬಸವೇಶ್ವರ ಭಾವಚಿತ್ರ ಕಟ್ಟಲಾಗಿತ್ತು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಿದ್ಧಪಡಿಸಿದ್ದ ಅನುಭವ ಮಂಟಪದ ಸ್ತಬ್ಧ ಚಿತ್ರ ವಿಶೇಷವಾಗಿತ್ತು. ಕುದರೆ ಮೇಲೆ ಸಾಗಿದ ಬಸವಣ್ಣ, ಅಕ್ಕ ಮಹಾದೇವ, ಅಲ್ಲಮಪ್ರಭು, ಚನ್ನ ಬಸವಣ್ಣ ಸೇರಿದಂತೆ ಶರಣರ ಪಾತ್ರಧಾರಿಗಳು ಗಮನ ಸೆಳೆದರು. ಛತ್ರಿ, ಚಾಮರಗಳು ಮೆರವಣಿಗೆಗೆ ಮೆರುಗು ತಂದುಕೊಟ್ಟವು.

ವಚನ ವಿಜಯೋತ್ಸವ ಗೀತೆಯ ಸಂಗೀತಕ್ಕೆ ಮಹಿಳೆಯರು ಹೆಜ್ಜೆ ಹಾಕಿದರೆ, ಮಕ್ಕಳು ಕೋಲಾಟ ಪ್ರದರ್ಶಿಸಿದರು. ಧ್ವನಿವರ್ಧಕದಲ್ಲಿ ಮೂಡಿ ಬಂದ ವಚನಗಳ ಗೀತೆಗೆ ಗಣ್ಯರೂ ಹೆಜ್ಜೆ ಹಾಕಿದರು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಬಿಳಿ ವಸ್ತ್ರ ಧರಿಸಿದ್ದರು. ಹೆಗಲ ಮೇಲೆ ಸ್ಕಾರ್ಪ್‌, ತಲೆ ಮೇಲೆ ಟೊಪ್ಪಿಗೆ ಹಾಕಿಕೊಂಡಿದ್ದರು. ತಲೆ ಮೇಲೆ ವಚನ ಸಾಹಿತ್ಯ ಹೊತ್ತಿದ್ದ ವಚನ ವಿಜಯೋತ್ಸವದ ರೂವಾರಿಯಾದ ಅಕ್ಕ ಅನ್ನಪೂರ್ಣ, ಡಾ. ಗಂಗಾಂಬಿಕೆ ಅಕ್ಕ ಮೆರವಣಿಗೆಯ ಮುಂಚೂಣಿಯಲ್ಲಿದ್ದರು.

ಜನ ರಸ್ತೆ ಬದಿ, ಮನೆ ಮಾಳಿಗೆ ಮೇಲೆ ನಿಂತು ಮೆರವಣಿಗೆಯನ್ನು ವೀಕ್ಷಿಸಿದರು. ಮೆರವಣಿಗೆ ಮಾರ್ಗದಲ್ಲಿ ಅನೇಕ ಕಡೆ ಭಕ್ತರಿಗೆ ಮಜ್ಜಿಗೆ, ಕುಡಿಯುವ ನೀರು, ಬಾಳೆ ಹಣ್ಣಿನ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಬೆಳಿಗ್ಗೆ ಶುರುವಾದ ಮೆರವಣಿಗೆ  ಮಧ್ಯಾಹ್ನ ಬಸವಗಿರಿಗೆ ತಲುಪಿತು.

ಇದಕ್ಕೂ ಮೊದಲು ನಗರದ ಬಸವೇಶ್ವರ ವೃತ್ತದಲ್ಲಿ ಜಿಲ್ಲಾಧಿಕಾರಿ ಡಾ. ಎಚ್‌.ಆರ್. ಮಹಾದೇವ ವಚನ ಪಠಣ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಲಕ್ಷ್ಮಿ ಗುರುನಾಥ ಕೊಳ್ಳೂರು ಗುರುಗ್ರಂಥಕ್ಕೆ ಗೌರವಾರ್ಪಣೆ ಮಾಡಿದರು.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜಶೇಖರ ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂಖಾನ್‌, ಸಂಸದ ಭಗವಂತ ಖೂಬಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಉದ್ಯಮಿ ಗುರುನಾಥ ಕೊಳ್ಳೂರ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್ ಮಲ್ಕಾಪುರೆ, ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಸವರಾಜ ಧನ್ನೂರು, ಗುರಮ್ಮ ಸಿದ್ದಾರೆಡ್ಡಿ, ರಮೇಶ ಮಠಪತಿ, ವಿರೂಪಾಕ್ಷ ಗಾದಗಿ ಅವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry