ಸೋಮವಾರ, ಡಿಸೆಂಬರ್ 9, 2019
25 °C

ನೀಲಗಿರಿ ಗಿಡ ನಾಶಕ್ಕೆ ಮುಂದಾದ ರೈತರು

ಆರ್‌.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

ನೀಲಗಿರಿ ಗಿಡ ನಾಶಕ್ಕೆ ಮುಂದಾದ ರೈತರು

ಶ್ರೀನಿವಾಸಪುರ: ತಾಲ್ಲೂಕಿನ ರೈತರು ನೀಲಗಿರಿ ಮರಗಳ ನಾಶಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ಬೆಳೆಯಲಾಗಿದ್ದ ಮರಗಳನ್ನು ಕಡಿದು, ಜೆಸಿಬಿ ನೆರವಿನಿಂದ ಬುಡ ಕೀಳುತ್ತಿದ್ದಾರೆ.

ತಾಲ್ಲೂಕಿನ ರೈತರು ಸಾಮಾನ್ಯವಾಗಿ ಗ್ರಾಮದಿಂದ ದೂರದ ತಮ್ಮ ಜಮೀನಲ್ಲಿ ನೀಲಗಿರಿ ಬೆಳೆಯುವುದನ್ನು ರೂಢಿ ಮಾಡಿಕೊಂಡಿದ್ದರು. ಯಾವುದೇ ಬೇಸಾಯವಿಲ್ಲದೆ ಹಣ ತರುತ್ತಿದ್ದ ಅದನ್ನು ನೆಚ್ಚಿಕೊಂಡು ಕಾಯುತ್ತಿದ್ದರು. ನೀಲಗಿರಿಯಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮದ ಅರಿವಿಲ್ಲದ ರೈತರ ಪಾಲಿಗೆ ಅದು ನೆಚ್ಚಿನ ಬೆಳೆಯಾಗಿತ್ತು.

ಈಗ ನೀಲಗಿರಿ ಪರಿಸರ ಸ್ನೇಹಿಯಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಅಂತರ್ಜಲ ಕೊರತೆಗೆ ಈ ಬೆಳೆಯೂ ಕಾರಣವಾಗಿದೆ ಎಂಬುದನ್ನು ರೈತರು ಅರಿತಿದ್ದಾರೆ. ಬಾಷ್ಪ ವಿಸರ್ಜನೆ ಮಾಡದ ನೀಲಗಿರಿ ಎಲೆಯಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಅದರ ಪರಿಣಾಮವಾಗಿ ಮರದ ಬೇರಿಗೆ ಕೊಡಲಿ ಹಾಕಲಾಗುತ್ತಿದೆ.

ಟೊಮೆಟೊ ಬೆಳೆಗೆ ಆಧಾರದ ಕೋಲಾಗಿ ಬಳಸುವ ನೀಲಗಿರಿಯಿಂದ ಬೆಳೆಗಾರರಿಗೆ ಒಳ್ಳೆ ಲಾಭ ಸಿಗುತ್ತಿತ್ತು. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಸೆಂಟ್ರಿಂಗ್ ಹಾಕಲು ಇದನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಆದರೂ ಸಾಮಾನ್ಯ ಗಿಡಮರಗಳ ಪಾಲಿಗೆ ಶತ್ರುವಾದ ನೀಲಗಿರಿ ಮರದ ಕೆಳಗೆ ಹುಲ್ಲೂ ಸಹ ಬೆಳೆಯುವುದಿಲ್ಲ. ಆದ್ದರಿಂದ ಈಗ ಕಿತ್ತು ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೈತರು ಹೇಳಿದರು.

ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಸತತ ಪ್ರಯತ್ನದ ಫಲವಾಗಿ ಹೆಚ್ಚಿನ ಸಂಖ್ಯೆಯ ರೈತರು ನೀಲಗಿರಿ ತ್ಯಾಗ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಸರ್ಕಾರ ನೀಲಗಿರಿ ಮರ ಕಡಿಯುವದನ್ನು ಪ್ರೋತ್ಸಾಹಿಸುತ್ತಿವೆ. ಅರಣ್ಯ ಇಲಾಖೆ ವತಿಯಿಂದ ಸಾವಿರಾರು ಎಕರೆ ವಿಸ್ತೀರ್ಣದಲ್ಲಿ ಬೆಳೆಯಲಾಗಿದ್ದ ನೀಲಗಿರಿ ಮರಗಳನ್ನೂ ಸಹ ನಾಶಪಡಿಸಲಾಗಿದೆ. ಪರ್ಯಾಯವಾಗಿ ಪರಿಸರ ಸ್ನೇಹಿ ಗಿಡ ಬೆಳೆಯಲಾಗುತ್ತಿದೆ. ಹಣ್ಣಿನ ಗಿಡಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಪಕ್ಷಿಗಳಿಗೂ ಅನುಕೂಲ ಆಗಲಿದೆ.

ನೀಲಗಿರಿ ಬುಡ ತೆಗೆದ ಕಡೆ ವಾಡಿಕೆಯಂತೆ ಮಾವಿನ ಸಸಿ ನಾಟಿ ಮಾಡಲಾಗುತ್ತಿದೆ. ಅಪರೂಪಕ್ಕೆ ಕೆಲವರು ಗೇರು ಸಸಿಗಳನ್ನು ನಾಟಿ ಮಾಡುತ್ತಿದ್ದಾರೆ. ಒಟ್ಟಾರೆ ನೀಲಗಿರಿ ಭೂತ ನಿಧಾನವಾಗಿ ದೂರ ಸರಿಯುತ್ತಿದೆ. ಇದು ಸ್ವಾಗತಾರ್ಹ ಬೆಳವಣಿಗೆ ಯಾಗಿದೆ ಎಂದು ರೈತ ಮುನಿಯಪ್ಪ ಹೇಳಿದರು.

ಬುಡ ಕೀಳಲು ಹಣ ಇಲ್ಲ

ರೈತರು ತಾವು ಬೆಳೆದಿರುವ ನೀಲಗಿರಿ ಮರಗಳನ್ನು ಮಾರುತ್ತಾರೆ. ಮರ ಕಡಿದ ಬಳಿಕ, ಇಟ್ಟಿಗೆ ಕಾರ್ಖಾನೆ ಮಾಲೀಕರು ಜೆಸಿಬಿ ತಂದು ಬುಡಗಳನ್ನು ಬೇರುಸಹಿತ ಕಿತ್ತೊಯ್ಯುವರು. ಅದಕ್ಕೆ ರೈತ ಹಣ ಕೊಡಬೇಕಾಗಿಲ್ಲ. ಕಿತ್ತವರೂ ರೈತನಿಗೆ ಹಣ ಕೊಡಬೇಕಾದ ಅಗತ್ಯವಿಲ್ಲ.

ಬೇರು ಮತ್ತು ಬುಡ ಬಿಟ್ಟರೆ ವರ್ಷದೊಳಗೆ ನೀಲಗಿರಿ ಗಿಡ ಮತ್ತೆ ಚಿಗಿತು ಬೆಳೆಯುತ್ತದೆ. ಅದಕ್ಕೆ ಮಳೆ ಅಥವಾ ನೀರಿನ ಅಗತ್ಯವಿಲ್ಲ. ತನ್ನ ವ್ಯಾಪ್ತಿಯೊಳಗಿನ ಭೂಮಿಯ ತೇವಾಂಶವನ್ನು ಹೀರಿಕೊಂಡು ಬೆಳೆಯುವುದು.

* * 

ಪರಿಸರಕ್ಕೆ ಮಾರಕವಾದ ನೀಲಗಿರಿಗೆ ಪರ್ಯಾಯವಾಗಿ ಉಪಯುಕ್ತ ಗಿಡ, ಮರ ಬೆಳೆಸಲು ಸರ್ಕಾರ ರೈತರಿಗೆ ಆರ್ಥಿಕ ನೆರವು ನೀಡಬೇಕು ಪಿ.ಆರ್‌.ಸೂರ್ಯನಾರಾಯಣ ಜಿಲ್ಲಾ ಕೆಪಿಆರ್‌ಎಸ್‌ ಅಧ್ಯಕ್ಷ

ಪ್ರತಿಕ್ರಿಯಿಸಿ (+)