ಬುಧವಾರ, ಡಿಸೆಂಬರ್ 11, 2019
16 °C
ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ – 2018ರ ಫಲಿತಾಂಶ

ಕೈ ಮುರಿದುಕೊಂಡ ಶುಭ ಗಳಿಗೆ

Published:
Updated:
ಕೈ ಮುರಿದುಕೊಂಡ ಶುಭ ಗಳಿಗೆ

ಇಪ್ಪತ್ತು ವರ್ಷಗಳಿಂದ ಗಾಡಿ ಓಡಿಸುತ್ತಿದ್ದರೂ, ಶ್ವಾನವೊಂದು ಅಡ್ಡ ಬಂದು ಒಮ್ಮೆ ತರಚು ಗಾಯವಾಗಿದ್ದು ಬಿಟ್ಟರೆ, ‘ನೀ ಓಡುಸ್ತಿದ್ದರೆ ಗಾಡಿ ನೆಲದ ಮೇಲೆ ಹೋಗುತ್ತೋ, ಗಾಳಿಯಲ್ಲಿ ತೇಲುತ್ತೋ, ಗೊತ್ತೇ ಆಗೊಲ್ಲ ಕಣೆ!’ ಅನ್ನೋಷ್ಟರ ಮಟ್ಟಿಗೆ, ನನ್ನ ಚಾಲನಾ ವೈಖರಿಯ ವ್ಯಾಖ್ಯಾನ ನಡೀತಿತ್ತು. ಈಗ ಕೈಮುರಿದುಕೊಂಡಿದ್ದೀನಿ ಅಂತ ಗೊತ್ತಾಗಿದ್ದೇ ತಡ ‘ಹೆಂಗಾಯ್ತಂತೆ?’ ‘ಹೇಗಿದಾಳಂತೆ?’ ಎಂದು ಯಾರೂ ಕೇಳೋಕೆ ಸಿದ್ಧ ಇರಲಿಲ್ಲವಂತೆ; ‘ಗಾಡೀನಾ ಆ ಪಾಟಿ ಜೋರಾಗಿ ಓಡಿಸಿದ್ರೆ ಇನ್ನೇನಾಗುತ್ತೆ’ ಅಂತಾ, ಎಲ್ಲರ ಮನಸ್ಸು ಒಮ್ಮತದ ತೀರ್ಮಾನಕ್ಕೆ ಬಂದುಬಿಟ್ಟಿತ್ತಂತೆ! ನನಗೇ ಹೀಗೆ ಕೈಮುರಿದಿದ್ದರೆ, ಎದುರಿಗೆ ಬಂದವರ ಪಾಡೇನಾಗಿರಬಹುದು – ಎಂದು, ಅಷ್ಟರೊಳಗೆ, ಆ ಅನಾಮಿಕರ ಬಗ್ಗೆ ಅನುಕಂಪ ಸೂಚಿಸಿದ್ದೂ ಆಯ್ತಂತೆ..

ಸಂಭಾಷಣೆ ಶುರುವಾದ ಒಂದೇ ನಿಮಿಷಕ್ಕೆ, ನಿಲ್ಲಿಸಿರೋ ಗಾಡಿ ತೆಗೆಯೋಕೆ ಹೋಗಿ ಬಿದ್ದಿದ್ದು ಅಂತಾ ಗೊತ್ತಾದ ಕೂಡಲೇ, ‘ಅರೇ! ಅಷ್ಟು ಚೆನ್ನಾಗಿ ಗಾಡಿ ಓಡಿಸ್ತಾಳೆ, ಪಾರ್ಕಿಂಗ್‍ನಲ್ಲಿದ್ದ ಗಾಡಿ ತೆಗೆಯೋಕೆ ಹೋಗಿ ಹೀಗೆ ಮಾಡಿಕೊಂಡಳು ಅಂದ್ರೆ ನಂಬೋಕೆ ಆಗೋಲ್ಲ’ ಎಂದು ಮತ್ತೆ ನನ್ನ ಚಾಲನಾಸಾಮರ್ಥ್ಯದ ಮೇಲಿನ ವ್ಯಾಖ್ಯಾನದ ವರಸೆಯೇ ಬದಲಾಗಿಬಿಟ್ಟಿತ್ತಂತೆ.

ಇದೆಲ್ಲಕ್ಕಿಂತ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಅಂದ್ರೆ, ಬಿದ್ದ ಮೇಲೆ ನಾನೇ ಗಾಡಿ ಓಡಿಸಿಕೊಂಡು ಬಂದು ಆಸ್ಪತ್ರೆ ಸೇರಿದ ವಿಷಯ. ಸಾಮಾನ್ಯವಾಗಿ ರೋಗಿಯನ್ನು ನೋಡೋಕೆ ಬರುವವರು ಕೇಳೋ ಮೊದಲ ಪ್ರಶ್ನೆ ಏನಿರುತ್ತೆ ಹೇಳಿ? ಒಂದೇ ತಾನೇ, ವಿಶ್ವವ್ಯಾಪಿಯಾದದ್ದು. ‘ಈಗ ಹೇಗಿದ್ದೀರಾ? ಪರವಾಗಿಲ್ಲವಾ?’ ಎಂದು ತಾನೇ! ನನ್ನ ನೋಡಲು ಬಂದವರು, ‘ಹೇಗಿದ್ದೀಯಾ? ನೋವಿದೆಯಾ?’ ಅಂತ ಕೇಳೋಕು ಮೊದಲೇ, ‘ಅಲ್ವೇ ನಿಂಗೇನ್ ತಲೇಲಿ ಬುದ್ಧಿ ಇರಲಿಲ್ವಾ?’ ‘ತಲೆ ನೆಟ್‍ಗಿತ್ತಾ ನಿಂಗೆ, ಅದೇನ್ ಸೆಗಣಿ ತುಂಬಿಕೊಂಡಿದ್ದೀಯಾ ತಲೇಲಿ!’ ‘ಅದ್ಯಾಕ್ರಿ ಅಷ್ಟು ಗೊತ್ತಾಗಲಿಲ್ವಾ ನಿಮಗೆ?!’ ಸ್ವಲ್ಪ ಸಲಿಗೆ ಇದ್ದವರು, ‘ಮನುಷ್ಯಳೇನೇ ನೀನು’ ಅಂತಾ ಬೇರೆ. ಹೀಗೆ ನಾನಾ ಪೀಠಿಕೆಗಳೊಂದಿಗೆ, ಗಾಡಿ ಓಡಿಸಿಕೊಂಡು ಬಂದು ಮಹಾಪರಾಧ ಮಾಡಿದವಳಂತೆ ‘ಕರುಣೆ’ ತುಂಬಿದ ಬಾಣಗಳನ್ನು ನನ್ನತ್ತ ತೂರಿಬಿಡುತ್ತಿದ್ದರು. ‘ಕೈನೋವಿನಿಂದ ಕಾಪಾಡಪ್ಪ ದೇವರೇ’ ಎಂದು ಪ್ರಾರ್ಥಿಸಿದ್ದಕ್ಕಿಂತ ಹೆಚ್ಚಾಗಿ, ‘ಈ ಪ್ರಶ್ನೆಯಿಂದ ಮುಕ್ತಿ ಕೊಡಪ್ಪಾ!’ ಎಂದು ಮನೆದೇವರು ವೀರಭದ್ರಸ್ವಾಮಿಗೆ ಹರಕೆ ಒಂದು ಕಟ್ಟಲಿಲ್ಲ ಅಷ್ಟೇ. ಗೊತ್ತಿರುವ ಕನ್ನಡ ಪದಗಳನ್ನೆಲ್ಲಾ ಒಟ್ಟುಗೂಡಿಸಿ ಪರಿಪರಿಯಾಗಿ ಬೇಡಿಕೊಂಡಿದ್ದೇನೆ.

ಒಂದೆರಡು ದಿನಗಳಾದ ಮೇಲೆ ಯಾರಾದರೂ ಮಾತಿನ ನಡುವೆ, ‘ಅಲ್ಲಾ ಕಣೆ’, ‘ಅದೆಲ್ಲ ಇರಲಿ, ಅದು ಬಿಡಿ, ಒಂದು ಮಾತು ಕೇಳ್ತೀನಿ’ ಎಂದು ಮಾತು ತೆಗೆದರೆ, ಈ ಬಾಣ ನೇರ ಅಲ್ಲೇ ಹೋಗಿ ನಾಟುತ್ತೆ ಅನ್ನುವಷ್ಟರ ಮಟ್ಟಿಗೆ ಪರಿಣತಳಾಗಿಬಿಟ್ಟಿದ್ದೆ. ತಕ್ಷಣವೇ ವಿಷಯಾಂತರ ಮಾಡಿ, ಬೀಸೋ ದೊಣ್ಣೆಯಿಂದ ಪಾರಾಗಿಬಿಡ್ತಿದ್ದೆ. ನನ್ನ ಆತ್ಮೀಯ ಸ್ನೇಹಿತನೊಬ್ಬ, ಅವನೂ ಕೂಡ ಇದೇ ಪ್ರಶ್ನೆ ಎತ್ತಲು ಮುಂದಾದಾಗ, ‘ನೀನೂ ಹೀಗೇ ಕೇಳಬೇಡ್ವೋ’ ಎಂದು ಕೊಂಚ ರೇಗಿದ್ದೇ ತಡ, ‘ಗಾಡಿ ಓಡಿಸ್ಕೊಂಡು ಬಂದು ಒಳ್ಳೆ ಕೆಲಸ ಮಾಡಿದ್ದೀಯಾ ನೀನು, ನಿನ್ನ ಜಾಗದಲ್ಲಿದ್ದಿದ್ರೆ ನಾನೂ ಹೀಗೆ ಮಾಡ್ತಿದ್ದೆ. ಗಾಡಿನ ಸೇಫ್ ಆಗಿ ಮನೆ ತನಕ ತಂದ್ಯಲ್ಲ, ತುಂಬಾ ಖುಷಿ ಆಯ್ತು’ ಎಂದು ಒಮ್ಮೆಗೆ ಬಡಬಡಿಸಿದಾಗ ಇಬ್ಬರೂ ಮನಸಾರೆ ನಕ್ಕಿದ್ದೆವು.

ಇದೆಲ್ಲಾ ಒಂದು ಮಜಲು... ಮುಂದಿನದು ಇನ್ನೂ ಕರುಣಾಜನಕವಾದ ಕತೆ. ತಗೊಳ್ಳಿ ಶುರುವಾಯಿತು. ರಿಯಲ್ ಬ್ರೇಕಿಂಗ್ ನ್ಯೂಸ್ ಅಂತ ಸುದ್ದಿ ಹರಡಿ, ಎಲ್ಲಾ ಕಡೆಗಳಿಂದಲೂ ಸಂದೇಶಗಳ ಮಹಾಪೂರ. ರೆಸ್ಟ್ ಇನ್ ಪೀಸ್ – ರಿಪ್ ಆದ ಹಾಗೆ ಗೆಟ್ ವೆಲ್ ಸೂನ್ ಅನ್ನು ತುಂಬಾ ಚಿಕ್ಕದಾಗಿ ಹೇಳುವ ಪರಿಪಾಠ ಇನ್ನೂ ಬೆಳೆದಿಲ್ಲ ಎಂದು ಕಾಣುತ್ತೆ; ಅಷ್ಟರಮಟ್ಟಿಗೆ ನಾನು ಬಚಾವಾಗಿದ್ದೆ. ವಾಟ್ಸ್ಆ್ಯಪ್‌ನಲ್ಲಂತೂ ಶುಭಹಾರೈಕೆಗಳ ಸುಗ್ಗಿಕಾಲ. ಇನ್ನು ಗುಂಪು ಸಂದೇಶಗಳಲ್ಲಿ ಕೇಳೋದೇ ಬೇಡ ಬಿಡಿ, ಕುರಿಮಂದೆಯಂತೆ. ಎಲ್ಲರೂ ಕುರಿಗಳೆಂದು ಸಾಬೀತುಪಡಿಸಲು ನಾಮುಂದು ತಾಮುಂದು ಎಂದು ಪೈಪೋಟಿಗೆ ಬಿದ್ದವರಂತೆ ಸಂದೇಶಗಳ ಪ್ರವಾಹ. ಅದರಲ್ಲಿ ಎಷ್ಟೋ ಮಂದಿಗೆ ನನಗೇನಾಗಿದೆ ಎನ್ನುವುದೂ ಗೊತ್ತೇ ಇರಲಿಲ್ಲ.

ಇದೆಲ್ಲದರ ಮಧ್ಯೆಯೇ ಮನೆಗೆ ಬಂದು ನೋಡುವವರ ಸಂಖ್ಯೆಯೂ ಸಾಕಷ್ಟಾಯಿತು. ಏನೇ ಹೇಳಿ ಇಂತಿಂಥ ರೋಗಕ್ಕೆ ರೋಗಿಗಳಿಗೆ, ಇಂತಿಂಥ ತಿಂಡಿ ತಿನಿಸು, ಹಣ್ಣುಗಳನ್ನು ತೆಗೆದುಕೊಂಡು ಹೋಗಬೇಕೆಂದು ಅಲಿಖಿತ ನಿಯಮವನ್ನಾದರೂ ಹೊರಡಿಸಬೇಕು ಕಣ್ರೀ. ಜ್ವರ-ಜಡ್ಡು ಆದವರಿಗೆ ಹಣ್ಣೋ, ಬ್ರೆಡ್ಡೋ. ವಾಂತಿ-ಭೇದಿ ಆಗುತ್ತಿದ್ದರೆ ಎಳನೀರೋ, ಜ್ಯೂಸೋ ಪರವಾಗಿಲ್ಲ. ಕೈಮುರಿದುಕೊಂಡವರಿಗೆ ಎಂಥ ಪಥ್ಯರೀ?! ನಮ್ಮ ಮನೆಯ ಸಂಪ್ರದಾಯವೇನೋ ಎಂಬಂತೆ, ಬಂದವರೆಲ್ಲಾ ಸೇಬು, ಬಾಳೇಹಣ್ಣು ಹಿಡಿದುಕೊಂಡು ಬರೋದೆ? ನಾಲ್ಕು ಸೇಬು. ತಪ್ಪಿದರೆ ಆರು, ಒಂದು ಚಿಪ್ಪು ಬಾಳೆಹಣ್ಣು, ಕೊನೆಕೊನೆಗೆ ನನ್ನನ್ನು ನೋಡಲು ಮನೆಗೆ ಬಂದವರು ಯಾರು ಎಂದು ಮುಖ ನೋಡುವ ಮೊದಲು, ಕೈಯಲ್ಲಿ ಏನಿದೆ ಎಂದು ನೋಡುವ ಹಾಗಾಯ್ತು. ಪ್ಲಾಸ್ಟಿಕ್ ನಿಷೇಧದಿಂದಾಗಿ ಕಣ್ಣಿಗೆ ಕಾಣಿಸದ ಚೀಲದೊಳಗೆ ಅಡಗಿದ್ದ ಗುಂಡಗಿನ ಆಕಾರ, ಅದರ ಮೇಲೆ ಅದೇನು ಪವಡಿಸಿದಂತೆ ಕಂಡು, ಬಟ್ಟೆಯ ಚೀಲದೊಳಗಿಂದಲೂ ಸೇಬುಗಳು ಕಣ್ಣು ಹೊಡೆದು ನಗುತ್ತಿದ್ದವು.

ಆದರೂ ಒಮ್ಮೊಮ್ಮೆ ಬೇರೆ ಏನಾದರೂ ಇರಬಹುದೆಂಬ ನನ್ನ ಆಶಾಭಾವನೆ, ಅವರೆಲ್ಲ ಹೋದಮೇಲೆ ತೆಗೆದು ನೋಡಿದಾಗ ಅಲ್ಲೇ ಕಮರಿ ಹೋಗುತ್ತಿತ್ತು. ಹಣ್ಣಿನ ಅಂಗಡಿಯನ್ನಾದರೂ ತೆರೆದು ಕೂತಿದ್ದರೆ ಟೈಂಪಾಸ್ ಜೊತೆಗೆ ಒಂದಷ್ಟು ಖರ್ಚು ಹುಟ್ಟುತ್ತಿತ್ತು ಎಂಬ ಯೋಚನೆ ಬಂದದ್ದು ಸುಳ್ಳಲ್ಲ. ಇದರ ಮಧ್ಯೆ ನನ್ನೊಬ್ಬ ಸ್ನೇಹಿತ ಒಂದು ಸಲಹೆಯನ್ನೂ ಕೊಟ್ಟ. ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ತಂದ ಅಕ್ಕಿ, ಬೇಳೆ, ಕರ್ಪೂರ, ಊದುಗಡ್ಡಿಗೆ ಬೇರೆ ಬೇರೆ ಬುಟ್ಟಿಗಳನ್ನು ಇಡುವ ಹಾಗೆ, ನೀನೂ ಸೇಬಿಗೆ, ಬಾಳೆಹಣ್ಣಿಗೆ, ಬನ್-ಬ್ರೆಡ್‍ಗೆ, ‘ಎಳನೀರು-ಜ್ಯೂಸ್‍ಗಳಿಗೆ’ ಮತ್ತು ‘ಕುರುಕಲು ತಿಂಡಿಗಳಿಗೆ’ ಎಂದು ಬೇರೆಬೇರೆ ಡಬ್ಬಗಳನ್ನು ಇಡು ಎಂದು. ಈ ಸಲಹೆ ತಗೊಂಡು ಏನು ಪ್ರಯೋಜನ ಹೇಳಿ. ಎರಡು ಡಬ್ಬ ಮಾತ್ರ ತುಂಬಿ ತುಳುಕುತ್ತಿತ್ತೇ ವಿನಾ ಉಳಿದ ಡಬ್ಬಗಳ ತಳದಲ್ಲೂ ಏನೂ ಅಂಟಿಕೊಳ್ಳುತ್ತಿರಲಿಲ್ಲ. ಎಲ್ಲ ಪ್ರದೇಶಗಳಿಗೂ ಸಮಾನ ಹಂಚಿಕೆಯಾದರಲ್ವೇ ದೇಶ ಸುಭಿಕ್ಷವಾಗಿರೋದು; ದೇಹವೂ ಇದಕ್ಕೆ ಹೊರತಲ್ಲ ತಾನೇ!

ಇಷ್ಟಕ್ಕೆ ಮುಗೀತು ಅಂದುಕೊಳ್ಳಬೇಡಿ. ಇನ್ನೂ ಕೆಲವರಿದ್ದಾರೆ. ನಾನು ಬಿದ್ದ ವಿಷಯ ತಿಳಿದಾಗಿನಿಂದಲೂ ಇವತ್ತು ಬರುತ್ತೇವೆ, ನಾಳೆ ಬರುತ್ತೇವೆ ಎಂದು ಆಗಾಗ ಫೋನಾಯಿಸಿ, ಒಂದು ತಿಂಗಳಾದರೂ ಹೇಳುತ್ತಲೇ ಇದ್ದವರು. ಅವರು ಬರುವ ಭರವಸೆಯೇನೂ ನನಗೆ ಉಳಿದಿರಲಿಲ್ಲ. ಆದರೂ ವಿಶೇಷ ಏನಪ್ಪಾ ಅಂದ್ರೆ, ‘ನಿನಗೆ ಮನೇಲಿ ಕೂತು ಕೂತು ಬೇಜಾರಾಗಿರಬೇಕಲ್ವಾ?’ ‘ನಿಂಗೆ ಏನಿಷ್ಟ ಹೇಳೆ, ಅದನ್ನೇ ತಗೊಂಡು ಬರ್ತೀವಿ, ಮನೇಲೇ ಮಾಡ್ಕೊಂಡು ಬಾ ಅಂದ್ರೆ ಮನೇಲೆ ಮಾಡ್ಕೊಂಡು ಬರ್ತೀವಿ’ ಎಂದು ಇಲ್ಲಸಲ್ಲದ ತಿಂಡಿ-ತಿನಿಸುಗಳ ಹೆಸರುಗಳನ್ನೆಲ್ಲಾ ಹೇಳುತ್ತಾ, ಬಾಯಲ್ಲಿ ನೀರೂರುವ ಹಾಗೆ ಮಾಡಿ, ಬಾಯಿ ತುಂಬಾ ಉಪಚಾರ ಮಾಡುತ್ತಾ ಬದುಕಿನಲ್ಲಿ ಕಳೆದೇಹೋಗಿದ್ದ ಆಶಾಭಾವನೆಯನ್ನು ಚಿಗುರಿಸುವಲ್ಲಿ ಯಶಸ್ವಿಯಾದ ಗಟ್ಟಿಗರೂ ಇದ್ದಾರೆ. ವರ್ಷದ ನಂತರ ಯಾವುದೋ ಸಮಾರಂಭದಲ್ಲಿ ಸಿಕ್ಕು, ‘ಕೈಮುರಿಕೊಂಡಿದ್ಯಲ್ಲಾ, ಹೇಗಿದ್ದೀಯಾ ಈಗ? ಬರಬೇಕು ಬರಬೇಕುಂತಾ ಬರೋಕೆ ಆಗ್ಲಿಲ್ಲ’, ಅಂಥ ಹೇಳಿ, ನೆನಪಿನಂಗಳದಿಂದ ಹೆಚ್ಚೂ ಕಡಿಮೆ ಮಾಸೇ ಹೋಗಿದ್ದ ವಿಷಯವನ್ನು ಕೆದಕಿದ ಮಹಾನುಭಾವರೂ ಇದ್ದಾರೆ.

ಇನ್ನು ನೋಡಲು ಬಂದವರು, ಅನುಕಂಪದ ಮುಖಭಾವ ಹೊತ್ತೇ ಬರುತ್ತಿದ್ದರು. ಕೈ ಮುರಿದುಕೊಂಡಿದ್ದು ಕೇಳಿದಾಗ ಇದ್ದ ಒಂದು ಹಂತದ ಕನಿಕರ, ಆರು ವಾರ ಕಟ್ಟು ಬಿಚ್ಚಬಾರದು ಎಂದಾಗ ಎರಡನೇ ಮಹಡಿಗೆ ತಲುಪುತ್ತಿತ್ತು. ಸ್ಕ್ರೂ ಹಾಕಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ ಅಂದಕೂಡಲೇ, ಕನಿಕರವು ಲಿಫ್ಟ್ ಹತ್ತಿಕೊಂಡು ಮೇಲಕ್ಕೆ ಹೋಗಿಬಿಡುತ್ತಿತ್ತು! ಆದರೂ ಬಂದವರೆಲ್ಲಾ, ಅವರ ನೆಂಟರಿಗೋ ಆಪ್ತೇಷ್ಟರಿಗೋ ಆಫೀಸಿನಲ್ಲೋ ಇಲ್ಲಾಂದ್ರೆ ಅಕ್ಕಪಕ್ಕದವರಿಗೋ ರಸ್ತೆಯಲ್ಲಿರುವವರಿಗೋ ಒಟ್ಟಿನಲ್ಲಿ ಯಾರಿಗೋ, ಕೈಯೋ ಕಾಲೋ ಬೆನ್ನುಮೂಳೆಯೋ ಮುರಿದುಕೊಂಡ ಒಂದು ಘಟನೆ ಹೇಳದಿದ್ದರೆ ಸಮಾಧಾನವಿರುತ್ತಿರಲಿಲ್ಲ. ಇದರ ಜೊತೆಗೆ ಏನೇ ಹೇಳಿ, ಮತ್ತೆ ಮೊದಲಿನ ತರಹ ಕೈ ಕೆಲಸಕ್ಕೆ ಬರೋಲ್ಲ ಬಿಡಿ.

‘ಹತ್ತು ವರ್ಷ ಆಯ್ತುರೀ, ನಮ್ಮ ಅತ್ತಿಗೆ ಕೈ ಮುರಿದುಕೊಂಡು, ಇನ್ನೂ ಅವರಿಗೆ ಭಾರ ಎತ್ತೋಕೆ ಆಗೋಲ್ಲ.‌’ ಹೀಗೆ ಇಷ್ಟೇ ಹೇಳಿ ಸುಮ್ಮನಾದರೂ ಪರವಾಗಿಲ್ಲ... ಮತ್ತೊಬ್ಬರಂತೂ, ‘ನಮ್ಮ ಚಿಕ್ಕಮ್ಮ ಒಬ್ಬರಿಗೆ ಹೀಗೆ ಆಗಿದ್ದೇ ನೆಪ ಆಗಿ, ಕೈಯೂ ಸರಿ ಹೋಗದೇ, ಒಂದರ ಹಿಂದೆ ಒಂದು ಸಮಸ್ಯೆ ಆಗಿ ಹೋಗೇಬಿಟ್ಟರು ಕಣ್ರಿ’ ಎಂದು ಪಶ್ಚಾತ್ತಾಪದಲ್ಲಿ ಕಡುನೊಂದು, ಕಣ್ಣೀರಿಟ್ಟು, ನಿಡಿದಾದ ಉಸಿರೊಂದನ್ನು ಬಿಡುತ್ತಿದ್ದಾಗ ನಾನೇ ಅವರನ್ನು ಸ್ವಲ್ಪ ಸಮಾಧಾನಪಡಿಸಬೇಕಾಯಿತು. ಇನ್ನೂ ಕೆಲವರಂತೂ, ‘ನೀ ಮಾಡೋದು ಪಾರ್ಟ್‍ಟೈಂ ಕೆಲಸ ಆದ್ರೂ, ಆ ಕೆಲಸ, ಈ ಕೆಲಸ, ಅವರಿವರ ಕೆಲಸ ಹಚ್ಕೊಂಡು ತುಂಬಾ ಬಿಜಿ ಇರುತ್ತಿದ್ದೆ, ಈಗ ಮನೇಲೆ ಕೂತು ಕೂತು ಬೇಜಾರ್ ಬಂದಿರಬೇಕಲ್ವಾ’ ಅಂತ ನನ್ನ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದಾರೋ, ಮಾಡೋದು ಅರೆಕಾಲಿಕ ಹುದ್ದೆ ಆದ್ರೂ ಬೀದಿ ಬೀದಿ ಸುತ್ತುತ್ತಿದ್ದೆ, ಈಗ ಏನಾಯ್ತು ನೋಡು ನಿನ್ನ ಪಾಡು ಅನ್ನೋದನ್ನ ಇಷ್ಟು ನಯ ನಾಜೂಕಾಗಿ ಹೇಳುತ್ತಿದ್ದಾರೇನೋ ಅನ್ನುವ ಗುಮಾನಿ ಬಂದದ್ದು ಸುಳ್ಳಲ್ಲ.

ಹೇಗೆ ಹೇಳಲಿ ಇವರಿಗೆಲ್ಲಾ, ಕಳೆದ ಇಪ್ಪತ್ತು ವರ್ಷಗಳಿಂದ ಸಿಗದಂತಹ ಒಂದು ನಿರಾಳ ಮನಃಸ್ಥಿತಿಯಲ್ಲಿ ನಾನಿದ್ದೇನೆ ಎಂದು. ಬೆಳಗ್ಗೆ ಎದ್ದು ‘ಏನಪ್ಪಾ ತಿಂಡಿ ಮಾಡೋದು’ ಅನ್ನೋ ಅತ್ಯಂತ ಸರಳ, ಅಲ್ಲಲ್ಲ, ಜಗತ್ತಿನ ಬೃಹದಾಕಾರದ ಸಮಸ್ಯೆಯಿಂದ ಮುಕ್ತಳಾಗಿದ್ದೇನೆ. ಬೆಳಗ್ಗೆ ಎಷ್ಟೊತ್ತಿಗೆ ಎದ್ದರೂ, ’ಪಾಪ ರಾತ್ರಿ ನಿದ್ದೆ ಬಂತೋ ಇಲ್ವೋ, ಅದಕ್ಕೆ ಇಷ್ಟೊತ್ತಿನವರೆಗೂ ಮಲಕೊಂಡಿದ್ದಾಳೆ’ ಅನ್ನೋ ಕಾಳಜಿ ಮಾತುಗಳ ಸುಖಭಾವದಲ್ಲಿ ನಾನಿದ್ದೇನೆ. ನನಗಿಷ್ಟದ ಪುಸ್ತಕ ಓದೋ ಖುಷಿ, ಸಂಗೀತವನ್ನು ಆಲಿಸಿದಾಗ ಆಗೋ ಸಂತೃಪ್ತಿ, ಸಿನಿಮಾ ನೋಡುವ ಮಜಾ ಒಂದೇ ಎರಡೇ. ಕೆಲಸದ ಒತ್ತಡದಲ್ಲಿ ಇದ್ಯಾವುದಕ್ಕೂ ಸಮಯವೇ ಇಲ್ಲವೆಂದು ಹಪಹಪಿಸುತ್ತಿದ್ದ ನನಗೆ ಅನಾಯಾಸವಾಗಿ ಸಮಯ ಒದಗಿ ಬಂದಿರುವ ಸಂತಸದಲ್ಲಿದ್ದೇನೆ. ಆದರೆ ಬಂದವರೆಲ್ಲಾ ‘ಮನೇಲೇ ಕೂತು ಕೂತು ಬೇಜಾರಾಗ್ತಿರಬೇಕು ನಿಂಗೆ’ ಅಂತಾ ಹೇಳಿ, ಹೇಳಿ, ನಾನು ಬೇಜಾರು ಮಾಡ್ಕೊಬೇಕಿತ್ತೇನೋ, ಯಾಕ್ ನನಗೆ ಬೇಜಾರಾಗ್ತಿಲ್ಲ ಅಂತ ಒಮ್ಮೊಮ್ಮೆ ಗೊಂದಲಕ್ಕೊಳಗಾಗಿದ್ದೂ ಇದೆ!

ಆದರೆ ಹೌದು. ಒಂದೇ ಕೈಯಲ್ಲಿ ಎಷ್ಟೋ ಕೆಲಸಗಳನ್ನು ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಂಡರೂ, ಕೆಲವೊಂದು ಚಿಕ್ಕ ಪುಟ್ಟ ಕೆಲಸಗಳು ಸಾಧ್ಯವೇ ಆಗಿರಲಿಲ್ಲ. ಜುಟ್ಟು ಕಟ್ಟಿಕೊಳ್ಳೋದಕ್ಕೆ ಆಗಲಿಲ್ಲ, ಲಾಡಿಯನ್ನು ಬಿಗಿಯಾಗಿ ಕಟ್ಟಿಕೊಳ್ಳೋದಕ್ಕೂ ಕಷ್ಟ, ಸ್ನಾನಮಾಡುವುದು ಕೊಂಚ ತ್ರಾಸದಾಯಕವೇ. ಕೈಯೋ ಬೆನ್ನೋ ನೆವೆಯಾದರೆ ಕೆರೆದುಕೊಳ್ಳೋಕೆ ಏನಾದರೂ ಹುಡುಕಿಕೊಳ್ಳಬೇಕಿತು. ಇಂಥ ಪುಟ್ಟ ಪುಟ್ಟ ಆದರೂ ಮುಖ್ಯವಾದ ಸಂಗತಿ ಹೊರತುಪಡಿಸಿದರೆ, ನಾನು ಸಂಪೂರ್ಣ ಸಂತೃಪ್ತಳಾಗಿದ್ದೇನೆ ಅಂತಾ ಇವರ್ಯಾರಿಗೂ ಅರ್ಥವೇ ಆಗ್ತಿಲ್ಲ.

ಇನ್ನು ಬೆನ್ನಲಿ ಹುಟ್ಟಿದವರು, ಬೆನ್ನು ತಿರುಗಿಸಿಕೊಂಡು ಹೋದರೂ, ಕೆಲವರು ಬೆನ್ನಿಗೆ ಬಿದ್ದವರಂತೆ ನೋಡಿಕೊಂಡ ರೀತಿ ಬದುಕಿಗೊಂದಿಷ್ಟು ಸಾಂತ್ವನ ಹೇಳಿವೆ. ಇಷ್ಟು ಸಾಲದೇ ಮುಂದಿನ ಬಾಳ ಪಯಣಕ್ಕೆ.

ಅರೆರೆ! ಒಂದೇ ಒಂದು ನಿಮಿಷ ನಿಲ್ಲಿ. ಇದನ್ನು ಹೇಳಲು ಹೇಗೆ ಮರೆತೆ ನಾನು. ಆಸ್ಪತ್ರೆ ಸೇರಿದಾಗ, ಇದೊಂದು ಬಹಳ ವಿಚಿತ್ರ ಕೇಸ್ ಎಂದಿದ್ದ ವೈದ್ಯರು ಸರಿಯಾದ ಸ್ರ್ಕೂ ಸಿಗದೆ ಶಸ್ತ್ರಚಿಕಿತ್ಸೆಯನ್ನೇ ಒಂದು ದಿನ ಮುಂದೂಡಿದ್ದರು. ‘ನಮ್ಮೂರ ಸಾಬಿಗೆ ಹೇಳಿದ್ರೆ ಅದೆಂಥ ಸ್ರ್ಕೂ ಬೇಕಾದರೂ ತಂದುಕೊಡ್ತಿದ್ದ. ಸ್ರ್ಕೂಡ್ರೈವರ್‍ನಿಂದ ತಿರುಗಿಸಿದ್ರೆ ಆಗ್ತಿತ್ತು’ ಎಂದು ತಮಾಷೆ ಮಾಡುತ್ತಾ ಶಸ್ತ್ರಚಿಕಿತ್ಸಾ ಕೊಠಡಿಯೊಳಕ್ಕೆ ಕರೆದುಕೊಂಡು ಹೋಗುವ ಮುನ್ನ ಎಲ್ಲರೂ ನನ್ನನ್ನು ನಗಿಸಿ, ಗಾಬರಿಯಿಂದ ಹೊರತರುವ ಪ್ರಯತ್ನದಲ್ಲಿದ್ದರು. ಒಳಗಡೆ ಸಂಪೂರ್ಣ ಅರವಳಿಕೆ ನೀಡಿರಲಿಲ್ಲವಾದ್ದರಿಂದ ಅದೂ ಇದೂ ಮಾತನಾಡುತ್ತಿರುವುದು, ‘ಚಿಕ್ಕ ಸ್ರ್ಕೂ ಕೊಡಿ, ಒಂದು ದೊಡ್ಡದ್ದು ಹಾಕಿದ್ದೇವೆಲ್ಲಾ ಇನ್ನೊಂದು ಚಿಕ್ಕದು ಸಾಕು’ ಎನ್ನುತ್ತಾ, ಗೋಡೆಗೆ ಮೊಳೆ ಹೊಡೆಯುವಂತೆ ಕುಟ್ಟುವ, ಎಳೆಯುವ, ತಿರುಗಿಸುವ ಎಲ್ಲ ಪ್ರಯೋಗಗಳು ನಡೀತಿದ್ವು. ಕೊನೆಯ ಹಂತ ಪಿನ್ ಹೊಡೆದಿದ್ದು. ಆವಾಗಂತೂ, ರಿಪೇರಿಗೆ ಬಂದ ಮೇಲೆ, ಗಾಡಿಗೂ ಬಾಡಿಗೂ ಅಂಥ ವ್ಯತ್ಯಾಸವೇನೂ ಇಲ್ಲ ಎಂದು ಅರೆಮಂಪರಿನಲ್ಲೂ ಜ್ಞಾನೋದಯವಾಗಿತ್ತು.

(ಕರಣಂ ಸಂಧ್ಯಾ)

ಪ್ರತಿಕ್ರಿಯಿಸಿ (+)