ಆಯುಧಗಳಿಂದ ಲಾಭ ಯಾರಿಗೆ?

7

ಆಯುಧಗಳಿಂದ ಲಾಭ ಯಾರಿಗೆ?

Published:
Updated:

ಸಿದ್ಧಾರ್ಥನು ಅರಮನೆಯನ್ನು ತ್ಯಜಿಸಿ, ಹತ್ತಾರು ಪ್ರದೇಶಗಳನ್ನು ಸುತ್ತಾಡಿ, ಹಲವರು ಗುರುಗಳನ್ನು ಸಂದರ್ಶಿಸಿ, ದೀರ್ಘಕಾಲ ಸಾಧನೆಯನ್ನು ಮಾಡಿ, ಬಳಿಕ ‘ಬುದ್ಧ’ನಾದ. ಅವನು ಮನೆಯನ್ನು ಏಕಾದರೂ ತೊರೆಯಬೇಕಾಯಿತು. ಬುದ್ಧನೇ ಅದನ್ನು ಹೀಗೆ ನಿರೂಪಿಸಿದ್ದಾನೆ; ಇದು ‘ಅತ್ತದಂಡಸುತ್ತ’ ಎಂದು ಹೆಸರಾಗಿದೆ:

‘ಅತ್ತದಂಡಾ ಭಯಂ ಜಾತಂ ಜನಂ ಪಸ್ಸಥ ಮೇಧಕಂ ।

ಸಂವೇಗಂ ಕಿತ್ತಯಿಸ್ಸಾಮಿ ಯಥಾ ಸಂವಿಜಿತಂ ಮಯಾ ।।

ಫಂದಮಾನಂ ಪಜಂ ದಿಸ್ವಾ ಮಚ್ಚೇ ಅಪ್ಪೋದಕೇ ಯಥಾ ।

ಅಞ್ಞಮಞ್ಞೀಹಿ ವ್ಯಾರುದ್ಧೇ ದಿಸ್ವಾ ಮಂ ಭಯಾಮಾವಿಸಿ ।।

ಸಮಂತಮಸರೋ ಲೋಕೋ, ದಿಸಾ ಸಬ್ಬಾ ಸಮೇರಿತಾ ।

ಇಚ್ಛಂ ಭವನಮತ್ತನೋ ನಾದ್ದಸಾಸಿಂ ಅನೋಸಿತಂ ।

ಓಸಾನೇ ತ್ವೇವ ವ್ಯಾರುದ್ಧೇ ದಿಸ್ವಾ ಮೇ ಆರತೀ ಅಹು ।

ಇದರ ತಾತ್ಪರ್ಯ: ‘ಶಸ್ತ್ರಗಳನ್ನು ಧರಿಸುವುದು ಭಯವನ್ನುಂಟುಮಾಡುತ್ತದೆ; ಜನರು ಅದಕ್ಕಾಗಿಯೇ ಹೇಗೆ ಜಗಳವಾಡುತ್ತಿದ್ದಾರೆ, ನೋಡಿ! ನನ್ನಲ್ಲಿ ವೈರಾಗ್ಯ ಹೇಗೆ ಹುಟ್ಟಿತು ಎನ್ನುವುದನ್ನು ಹೇಳುವೆ. ಅಲ್ಪಪ್ರಮಾಣದ ನೀರಿನಲ್ಲಿ ಮೀನುಗಳು ಒಡ್ಡಾಡುವಂತೆ ಜನರು ಪರಸ್ಪರ ವೈರವನ್ನು ಕಟ್ಟಿಕೊಂಡು ಸಂಕಟ ಪಡುವುದನ್ನು ನೋಡಿ ನನ್ನಲ್ಲಿ ಭಯ ಹುಟ್ಟಿತು. ಇಡಿಯ ಜಗತ್ತು ಅಸಾರವಾದುದು ಎಂದು ತಿಳಿದು, ಇಡಿಯ ಭೂಮಿಯೇ ನಡುಗುತ್ತಿದೆ ಎಂದೆನ್ನಿಸಿತು. ಈ ಭಯದಿಂದ ರಕ್ಷಣೆ ಸಿಗುವಂಥ ಸ್ಥಳ ಯಾವುದಾದರೂ ಇದೆಯೇ ಎಂದು ಹುಡುಕಿದೆ; ಆದರೆ ಅದು ಸಿಗದಾಯ್ತು. ಏಕೆಂದರೆ ಜನರು ಕೊನೆಯ ತನಕವೂ ದ್ವೇಷದಲ್ಲಿಯೇ ಇರುತ್ತಾರೆ ಎಂಬುದು ಅರಿವಾಯ್ತು. ಅದರಿಂದ ನನಗೆ ಹೇಸಿಗೆಯಾಯಿತು.’

ರಾಜಕುಮಾರನಾಗಿದ್ದ ಸಿದ್ಧಾರ್ಥನಿಗೆ ಆಯುಧಗಳಿಂದ ವಿಮುಖತೆ ಒದಗಿತು. ದ್ವೇಷದಿಂದ ಇರುವವನಿಗೇ ಮಾತ್ರವೇ ಶಸ್ತ್ರಗಳಿಂದ ಪ್ರಯೋಜನ. ಆ ಮಾರ್ಗವನ್ನೇ ತೊರೆದು ಅವನು ನಿವೃತ್ತಿಮಾರ್ಗವನ್ನು ಹಿಡಿದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry