ಬುಧವಾರ, ಡಿಸೆಂಬರ್ 11, 2019
16 °C

ಕರ್ನಾಟಕಕ್ಕೆ ಮತ್ತೆ ನಿರಾಸೆ

Published:
Updated:
ಕರ್ನಾಟಕಕ್ಕೆ ಮತ್ತೆ ನಿರಾಸೆ

ಬೆಂಗಳೂರು: ಕರ್ನಾಟಕ ತಂಡದವರು ನಾಲ್ಕನೇ ಆವೃತ್ತಿಯ ಮುಲ್ಕಿ ಸುಂದರ್‌ ರಾಮ್‌ ಶೆಟ್ಟಿ ಅಖಿಲ ಭಾರತ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಮತ್ತೊಮ್ಮೆ ನಿರಾಸೆ ಕಂಡಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕರ್ನಾಟಕ 40–71 ಪಾಯಿಂಟ್ಸ್‌ನಿಂದ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ ತಂಡದ ವಿರುದ್ಧ ಸೋತಿತು.

ಗುರುವಾರದ ಪಂದ್ಯದಲ್ಲಿ ಚೆನ್ನೈ ಕಸ್ಟಮ್ಸ್‌ಗೆ ಶರಣಾಗಿದ್ದ ರಾಜ್ಯ ತಂಡದವರು ಇಂಟಿಗ್ರಲ್‌ ಎದುರಿನ ಹೋರಾಟದ ಮೊದಲ ಕ್ವಾರ್ಟರ್‌ನಲ್ಲಿ ಮಿಂಚಲು ವಿಫಲರಾದರು.

ಎದುರಾಳಿ ತಂಡದ ಕೆ. ಮುಕುಂದ್‌ ಮತ್ತು ಪಿ.ವಿಜಯ್‌ ಲೀಲಾಜಾಲವಾಗಿ ಆತಿಥೇಯರ ರಕ್ಷಣಾ ಕೋಟೆ ಭೇದಿಸಿ ಪಾಯಿಂಟ್ಸ್‌ ಹೆಕ್ಕಿದರು. ಇವರು ಕ್ರಮವಾಗಿ 21 ಮತ್ತು 18 ಪಾಯಿಂಟ್ಸ್‌ ತಮ್ಮದಾಗಿಸಿಕೊಂಡರು.

ಎರಡನೇ ಕ್ವಾರ್ಟರ್‌ನಲ್ಲೂ ರಾಜ್ಯ ತಂಡದ ಆಟಗಾರರು ಎದುರಾಳಿ ಆವರಣ ಪ್ರವೇಶಿಸಲು ವಿಫಲರಾದರು. ಹೀಗಾಗಿ ತಂಡ ಎರಡು ಪಾಯಿಂಟ್‌ ಗಳಿಸಲಷ್ಟೇ ಶಕ್ತವಾಯಿತು. ಇಂಟಿಗ್ರಲ್‌ ತಂಡ 16 ಪಾಯಿಂಟ್ಸ್‌ ಸಂಗ್ರಹಿಸಿತು.

ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ಗಳಲ್ಲೂ ಇಂಟಿಗ್ರಲ್‌ ತಂಡದವರು ಪ್ರಾಬಲ್ಯ ಮೆರೆದು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಕರ್ನಾಟಕದ ಪರ ಶಶಾಂಕ್‌ ರೈ ಏಕಾಂಗಿ ಹೋರಾಟ ನಡೆಸಿದರು. 10 ಪಾಯಿಂಟ್ಸ್‌ ಕಲೆಹಾಕಿದ ಅವರು ಸೋಲಿನ ಅಂತರ ತಗ್ಗಿಸಿದರು.

ಗುರುವಾರ ನಡೆದಿದ್ದ ಇನ್ನೊಂದು ಪಂದ್ಯದಲ್ಲಿ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ತಂಡ 85–64 ಪಾಯಿಂಟ್ಸ್‌ನಿಂದ ಆರ್‌ಸಿಎಫ್‌ ಕಪುರ್ತಲ ತಂಡವನ್ನು ಸೋಲಿಸಿತ್ತು.

ಈ ತಂಡ ನಾಲ್ಕು ಕ್ವಾರ್ಟರ್‌ಗಳಲ್ಲೂ ಚುರುಕಿನ ಆಟ ಆಡಿ ಗಮನ ಸೆಳೆಯಿತು. ವಿಜಯಿ ತಂಡದ ಅರವಿಂದ್‌ ಆರ್ಮುಗಂ  16 ಪಾಯಿಂಟ್ಸ್‌ ಗಳಿಸಿದರು.

ಪ್ರತಿಕ್ರಿಯಿಸಿ (+)