ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಜಯದ ಭರವಸೆಯಲ್ಲಿ ಭಾರತ

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌: ಮೂರು ಬಾರಿ ಕಪ್‌ ಗೆದ್ದ ತಂಡಗಳ ಮುಖಾಮುಖಿ
Last Updated 2 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮೌಂಟ್‌ ಮೌಂಗನೂಯಿ, ನ್ಯೂಜಿಲೆಂಡ್‌ (ಪಿಟಿಐ): ಜಯದ ನಾಗಾಲೋಟದಲ್ಲಿರುವ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ನ ಪ್ರಶಸ್ತಿಗಾಗಿ ಶನಿವಾರ ಆಸ್ಟ್ರೇಲಿಯಾ ಜೊತೆ ಸೆಣಸಲಿದೆ.

ತಲಾ ಮೂರು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಉಭಯ ತಂಡಗಳ ಮುಖಾಮುಖಿ ಕುತೂಹಲ ಮೂಡಿಸಿದ್ದು ಯಾವ ತಂಡ ಗೆದ್ದರೂ ಅತಿಹೆಚ್ಚು ಬಾರಿ ವಿಶ್ವಕಪ್‌ ಪಟ್ಟವೇರಿದ ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದೆ.

ಟೂರ್ನಿಯಲ್ಲಿ ಇಲ್ಲಿಯ ವರೆಗೆ ಅಮೋಘ ಆಟ ಆಡಿರುವ ಭಾರತ ಈ ದಾಖಲೆ ಗಳಿಸುವ ನೆಚ್ಚಿನ ತಂಡ ಎಂದೆಸಿಕೊಂಡಿದೆ.

ಭಾರತ ಕ್ರಿಕೆಟ್‌ನ ಭವಿಷ್ಯದ ತಾರೆ ಎಂದು ಕರೆಸಿಕೊಂಡಿರುವ ಪೃಥ್ವಿ ಶಾ ಅವರು ಯಶಸ್ವಿ ನಾಯಕರಾದ ಮಹಮ್ಮದ್ ಕೈಫ್‌ (2002ನೇ ಇಸವಿ), ವಿರಾಟ್ ಕೊಹ್ಲಿ (2008) ಮತ್ತು ಉನ್ಮುಕ್ತ್ ಚಾಂದ್ (2012) ಅವರ ಸಾಲಿಗೆ ಸೇರುವ ಛಲದಲ್ಲಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಬಳಗ ಮತ್ತು ಪರಿಣಾಮಕಾರಿ ಬೌಲರ್‌ಗಳನ್ನು ಹೊಂದಿರುವ ತಂಡಕ್ಕೆ ಇದು ಕಷ್ಟಸಾಧ್ಯವಲ್ಲ ಎಂಬುದು ಕ್ರಿಕೆಟ್‌ ಪ್ರಿಯರ ವಿಶ್ವಾಸ.

ಆಸ್ಟ್ರೇಲಿಯಾವನ್ನು 100 ರನ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ ಭಾರತ ನಂತರ ಪಪುವಾ ನ್ಯೂಗಿನಿ ಮತ್ತು ಜಿಂಬಾಬ್ವೆ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು.

ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 131 ರನ್‌ಗಳಿಂದ ಮತ್ತು ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು 203 ರನ್‌ಗಳಿಂದ ಮಣಿಸಿತ್ತು. ಈ ಸಾಧನೆಗಳು ಫೈನಲ್‌ ಪಂದ್ಯದಲ್ಲಿ ಭಾರತದ ಭರವಸೆಯನ್ನು ಹೆಚ್ಚಿಸಿವೆ.

ಉತ್ತಮ ಆರಂಭಿಕ ಜೋಡಿ; ಬಲಿಷ್ಠ ಬೌಲಿಂಗ್ ಪಡೆ

ರಾಹುಲ್ ದ್ರಾವಿಡ್‌ ಗರಡಿಯಲ್ಲಿ ಪಳಗಿದ ತಂಡ ಉತ್ತಮ ಆರಂಭಿಕ ಜೋಡಿಯನ್ನು ಹೊಂದಿದೆ. ಪೃಥ್ವಿ ಶಾ ಮತ್ತು ಮನ್‌ಜೋತ್ ಕಾರ್ಲಾ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದು ಮೂರನೇ ಕ್ರಮಾಂಕದಲ್ಲಿ ಶುಭ್‌ಮನ್ ಗಿಲ್‌ ಮಿಂಚಿನ ಆಟ ಆಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ ಗಿಲ್ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ.

ತಾಸಿಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಶಿವಂ ಮಾವಿ ಮತ್ತು ಕಮಲೇಶ್ ನಾಗರಕೋಟಿ ಟೂರ್ನಿಯುದ್ದಕ್ಕೂ ಅಮೋಘ ಆಟ ಆಡಿದ್ದಾರೆ. ಅವರೊಂದಿಗೆ ಸ್ಪಿನ್ನರ್‌ಗಳಾದ ಅಭಿಷೇಕ್ ಶರ್ಮಾ ಮತ್ತು ಅನುಕೂಲ್ ರಾಯ್‌ ಕೂಡ ಎದುರಾಳಿ ತಂಡದ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸುವ ತಾಕತ್ತು ಹೊಂದಿದ್ದಾರೆ. ಫೀಲ್ಡಿಂಗ್‌ನಲ್ಲೂ ಭಾರತ ತಂಡ ಹಿಂದೆ ಬಿದ್ದಿಲ್ಲ.

ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಸೋತರೂ ನಂತರ ಉತ್ತಮ ಆಟ ಆಡಿರುವ ಆಸ್ಟ್ರೇಲಿಯಾ ತಂಡದವರು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ಜೇಸನ್ ಸಂಘಾ ನೇತೃತ್ವದ ತಂಡ ಕೊನೆಯ ಎರಡು ಪಂದ್ಯಗಳಲ್ಲಿ ಅಪ್ರತಿಮ ಹೋರಾಟ ನಡೆಸಿದೆ. ಹೀಗಾಗಿ ಆ ತಂಡ ಭಾರತಕ್ಕೆ ಸುಲಭ ತುತ್ತಾಗುವ ಸಾಧ್ಯತೆ ಇಲ್ಲವೇ ಇಲ್ಲ.

ಹಾರ್ಡಿ ಬದಲಿಗೆ ಪ್ಯಾಟ್ರಿಕ್‌

ಗಾಯಗೊಂಡಿರುವ ಆ್ಯರನ್‌ ಹಾರ್ಡಿ ಬದಲಿಗೆ ಫೈನಲ್‌ ಪಂದ್ಯಕ್ಕಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಪ್ಯಾಟ್ರಿಕ್ ರೋವ್ ಅವರನ್ನು ಆಸ್ಟ್ರೇಲಿಯಾ ಕರೆಸಿಕೊಂಡಿದೆ.

ಜೇಸನ್ ರಾಲ್‌ಸ್ಟನ್ ಬದಲಿಗೆ ಈ ಹಿಂದೆ ಹಾರ್ಡಿ ಅವರನ್ನು ತಂಡದಲ್ಲಿ ಸೇರಿಸಲಾಗಿತ್ತು.

ತಂಡದಲ್ಲಿ ಬದಲಾವಣೆ ಮಾಡಲು ವಿಶ್ವಕಪ್‌ ತಾಂತ್ರಿಕ ಸಮಿತಿ ಅನುಮತಿ ನೀಡಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT