ಸೋಮವಾರ, ಡಿಸೆಂಬರ್ 9, 2019
25 °C

ಸಾರ್ವಜನಿಕ ಬಳಕೆಗೆ ಎರಡು ಮರಳು ಬ್ಲಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾರ್ವಜನಿಕ ಬಳಕೆಗೆ ಎರಡು ಮರಳು ಬ್ಲಾಕ್

ಶಿವಮೊಗ್ಗ: ಜಿಲ್ಲೆಯ ಜನರಿಗೆ ಮನೆ ಕಟ್ಟಲು ಅಗತ್ಯವಿರುವ ಮರಳು ದೊರಕಿಸಲು ಶನಿವಾರದಿಂದಲೇ ಎರಡು ಬ್ಲಾಕ್ ಮುಕ್ತ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಸೂಚಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಜಿಲ್ಲೆಯ ಮರಳಿನ ಸಮಸ್ಯೆ ಕುರಿತು ಸದಸ್ಯರು ಎತ್ತಿದ ಆಕ್ಷೇಪಗಳಿಗೆ ಸ್ಪಂದಿಸಿ ಈ ನಿರ್ಧಾರ ಪ್ರಕಟಿಸಿದರು. ತೀರ್ಥಹಳ್ಳಿ ತಾಲ್ಲೂಕು ಸುತ್ತ ಹಾಗೂ ಭದ್ರಾವತಿ ತಾಲ್ಲೂಕು ಸಿದ್ಲಿಪುರ ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ತಕ್ಷಣವೇ ಅನುಮತಿ ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಮರಳಿನ ಸಮಸ್ಯೆ ಕುರಿತು ನಿರಂತರ ದೂರುಗಳು ಕೇಳಿ ಬರುತ್ತಿವೆ. ಅಕ್ರಮ ಮರಳು ಸಾಗಣೆ ನಿಯಂತ್ರಿಸಬೇಕು ಎಂದು ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದರು.

ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದೆ. ಜನಸಾಮಾನ್ಯರು ಮರಳಿನ ಕೊರತೆಯಿಂದ ಮನೆ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದೇ ವೇಳೆ ಮರಳಿನ ಲೂಟಿ ಅವ್ಯಾಹತವಾಗಿ ಮುಂದುವರಿದಿದೆ. ನಿತ್ಯವೂ ಬೆಂಗಳೂರು ಮತ್ತಿತರ ನಗರಗಳಿಗೆ ಸಾಕಷ್ಟು ಲಾರಿ ಮರಳು ಸಾಗಣೆ ಮಾಡಲಾಗುತ್ತಿದೆ. ಪೊಲೀಸರೇ ನೇರವಾಗಿ ಶಾಮೀಲಾಗಿದ್ದಾರೆ ಎಂದು ಸದಸ್ಯರಾದ ಕೆ.ಇ. ಕಾಂತೇಶ್, ಮಂಜುನಾಥ್, ಯೋಗೇಶ್, ರಾಜಶೇಖರ್, ವೀರಭದ್ರಪ್ಪ ಪೂಜಾರ್ ಆರೋಪಿಸಿದರು.

ಸಾಮಾನ್ಯ ಜನರಿಗೆ, ಬಡವರಿಗೆ ಮರಳು ಸಿಗುವಂತೆ ನೋಡಿಕೊಳ್ಳಬೇಕು. ಬಡವರು ಮನೆ ನಿರ್ಮಾಣಕ್ಕಾಗಿ ಸಣ್ಣಪುಟ್ಟ ವಾಹನ, ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಣೆ ಮಾಡುವುದಕ್ಕೆ ಅಡ್ಡಿ ಮಾಡಬಾರದು. ಸರ್ಕಾರಿ ಕಾಮಗಾರಿಗಳಿಗೆ ಮೀಸಲಿಟ್ಟ ಎರಡು ಬ್ಲಾಕ್‌ ಹಾಗೂ ಇತರೆ 5 ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಸ್ತುತ ಐದು ಬ್ಲಾಕ್‌ಗಳಲ್ಲಿ ಮರಳು ತೆಗೆಯಲಾಗುತ್ತಿದೆ. ಇದುವರೆಗೆ 21,560 ಟನ್ ಸರಬರಾಜು ಮಾಡಲಾಗಿದೆ. ಉಳಿದ 27 ಬ್ಲಾಕ್‌ಗಳ ಟೆಂಡರ್ ಪ್ರಕ್ರಿಯೆಗೆ ನ್ಯಾಯಾಲಯದ ತಡೆಯಾಜ್ಞೆ ನೀಡಿದೆ. ಅಕ್ರಮ ಮರಳುಗಾರಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಪಿಎಸ್ ಅಳವಡಿಸಿದ ವಾಹನಗಳಲ್ಲಿ ಮಾತ್ರ ಮರಳು ಸಾಗಣೆಗೆ ಅವಕಾಶ ಮಾಡಿಕೊಡಲಾಗುವುದು. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ವಿವರ ನೀಡಿದರು.

ಸರ್ಕಾರಿ ಕಾಮಗಾರಿಗಳಿಗೆ ನಿಗದಿಪಡಿಸಿದ ಬ್ಲಾಕ್‌ಗಳಲ್ಲಿ ಶೇ 50ರಷ್ಟು ಮರಳನ್ನು ಆಶ್ರಯ ಮನೆಗಳ ನಿರ್ಮಾಣಕ್ಕೆ ಒದಗಿಸಲಾಗುವುದು. ಉಳಿದ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ. ರಾಕೇಶ್ ಕುಮಾರ್ ಭರವಸೆ ನೀಡಿದರು. ಜಿಲ್ಲೆಯಲ್ಲಿ ಶಿಥಿಲವಾಗಿರುವ, ನೂತನವಾಗಿ ನಿರ್ಮಿಸಬೇಕಿರುವ ಕಟ್ಟಡಗಳಿಗೆ ಸಮರ್ಪಕ ಅನುದಾನ ವಿತರಣೆಯಾಗುತ್ತಿಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಕೆಳದಿಯ ಅಂಗನವಾಡಿ ಕಟ್ಟಡ ನಿರ್ವಹಣೆ ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ ಎಂದು ಸದಸ್ಯ ಕೆಳದಿ ಮಂಜುನಾಥ್‌ ಆರೋಪಿಸಿದರೆ, ಅಡುಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾಗರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದರು.

ಶಿಕಾರಿಪುರ ತಾಲ್ಲೂಕಿನ ಕೃಷಿಹೊಂಡ, ಗೋದಾಮು ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ. ಕೂಡಲೇ ತನಿಖೆ ನಡೆಸಬೇಕು ಎಂದು ಸದಸ್ಯ ನರಸಿಂಗ ನಾಯ್ಕ ಒತ್ತಾಯಿಸಿದರು. ತಮ್ಮಡಿಹಳ್ಳಿಯಲ್ಲಿ ಓವರ್‌ ಹೆಡ್‌ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದೆ. ತೆರವುಗೊಳಿಸುವ ಅಗತ್ಯವಿದೆ ಎಂದು ತಮ್ಮಡಿಹಳ್ಳಿ ನಾಗರಾಜ್ ಗಮನ ಸೆಳೆದರು.

ಆಯನೂರು ಆರೋಗ್ಯ ಕೇಂದ್ರದ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸುವುದಿಲ್ಲ. ಆ ಭಾಗದ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೆ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಎಂ.ಬಿ. ಭಾನುಪ್ರಕಾಶ್ ಅವರೂ ಉಪಸ್ಥಿತರಿದ್ದರು.

ವರ್ಷಕ್ಕೆ ₹ 6.8 ಕೋಟಿ ಮರಳು ಜಫ್ತಿ

ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ₹ 6.8ಕೋಟಿ ಮೌಲ್ಯದ ಮರಳು ಜಫ್ತಿ ಮಾಡಲಾಗಿದೆ. ರಾಜ್ಯದಲ್ಲೇ ಅತ್ಯಂತ ಅಧಿಕ. ಅಕ್ರಮ ಮರಳು ಸಾಗಣೆ ವಿರುದ್ಧ ಕಾನೂನು ಕ್ರಮ ಮುಂದುವರಿಯುತ್ತದೆ ಎಂದರು.

2014ರಿಂದ 2018ರ ಜನವರಿವರೆಗೆ ಅಕ್ರಮ ಮರಳು ಸಾಗಣೆ, ಸಂಗ್ರಹದ ವಿರುದ್ಧ 665 ಪ್ರಕರಣ ದಾಖಲಿಸಲಾಗಿದೆ. 1372 ಆರೋಪಿಗಳನ್ನು ಬಂಧಿಸಲಾಗಿದೆ. 863 ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಅಂಕಿ–ಅಂಶ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾಹಿತಿ ನೀಡಿದರು.

ಜನಪ್ರತಿನಿಧಿಗಳಿಗೆ ಮಾಹಿತಿ ಕಡ್ಡಾಯ

ಜಿಲ್ಲೆಯಲ್ಲಿ ಅಂಗವಿಕಲರಿಗೆ ನೀಡುವ ಸೌಲಭ್ಯ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಕೇವಲ ಅಧಿಕಾರಿಗಳ ಹಂತದಲ್ಲಿಯೇ ಸರ್ಕಾರದ ಯೋಜನೆಗಳು ಕಾರ್ಯಗತವಾಗುತ್ತಿವೆ ಎಂಬ ಜಿಲ್ಲಾ ಪಂಚಾಯ್ತಿ ಸದಸ್ಯೆ ಅರುಂಧತಿ ಆರೋಪಿಸಿದರು.

ಸರ್ಕಾರದ ಯೋಜನೆಗಳನ್ನು ಸ್ಥಳೀಯ ಪ್ರತಿನಿಧಿಗಳ ಗಮನಕ್ಕೆ ತರಬೇಕು. ಯೋಜನೆಗಳ ಅನುಷ್ಠಾನಕ್ಕೆ ಅವರ ಸಹಕಾರ ಪಡೆಯಬೇಕು ಎಂದು ಸಿಇಒ ರಾಕೇಶ್ ಕುಮಾರ್  ಅವರು ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ದೊಡ್ಮನಿ ಅವರಿಗೆ ಸೂಚಿಸಿದರು.

ಪ್ರತಿಕ್ರಿಯಿಸಿ (+)