ಸೋಮವಾರ, ಡಿಸೆಂಬರ್ 9, 2019
24 °C

ಕಾಳುಮೆಣಸು ಆಮದು ವಿರುದ್ಧ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳುಮೆಣಸು ಆಮದು ವಿರುದ್ಧ ಕ್ರಮ

ಮಡಿಕೇರಿ: ವಿಯೆಟ್ನಾಂ ಕಾಳುಮೆಣಸು ಆಮದು ವಿರುದ್ಧ ಕೇಂದ್ರ ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಕಾಳುಮೆಣಸು ಬೆಲೆ ಮತ್ತೆ ಚೇತರಿಸಿಕೊಳ್ಳಬಹುದು ಎಂದು ಸಮನ್ವಯ ಸಮಿತಿ ಹೇಳಿದೆ. ಸಮಿತಿಯ ಮನವಿಗೆ ಸ್ಪಂದಿಸಿ ವಾಣಿಜ್ಯ ಸಚಿವಾಲಯದಿಂದ ತುರ್ತು ಕ್ರಮಕ್ಕೆ ಕೇಂದ್ರವು ಮುಂದಾಗಿದೆ.

ದಕ್ಷಿಣ ಭಾರತದ ವಿವಿಧ ಬೆಳೆಗಾರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮನ್ವಯ ಸಮಿತಿ ಕೇಂದ್ರ ವಾಣಿಜ್ಯ ಸಚಿವರಿಗೆ ನೀಡಿದ್ದ ಮನವಿಗೆ ಸಚಿವಾಲಯ ಶೀಘ್ರ ಸ್ಪಂದನ ನೀಡಿದ್ದು ಕೆಲವು ತುರ್ತು ಕ್ರಮಗಳನ್ನು ಕೈಗೊಂಡಿದೆ.

ಇತ್ತೀಚೆಗೆ ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳುಮೆಣಸನ್ನು ಭಾರತಕ್ಕೆ ಆಮದು ಮಾಡಿಕೊಂಡಿದ್ದರ ಪರಿಣಾಮ ಭಾರತದಲ್ಲಿ ಕಾಳುಮೆಣಸು ದರವು ₹ 350ಕ್ಕೆ ಕುಸಿದಿತ್ತು. ಇದರಿಂದ ಸ್ಥಳೀಯ ಬೆಳೆಗಾರರು ಆತಂಕಗೊಂಡಿದ್ದರು. ಬಳಿಕ ಆಮದು ಕಾಳುಮೆಣಸಿನ ಮೇಲೆ ಕೆ.ಜಿ. ಒಂದಕ್ಕೆ ಕನಿಷ್ಠ ₹ 500 ಬೆಲೆ ನಿಗದಿ ಮಾಡಿದ್ದರ ಪರಿಣಾಮ ಬೆಲೆಯಲ್ಲಿ ಸ್ವಲ್ಪ ಸುಧಾರಣೆ ಕಂಡಿತ್ತು.

ಈಗ ವಾಣಿಜ್ಯ ಸಚಿವಾಲಯವು ಸಮನ್ವಯ ಸಮಿತಿಯ ಸಂಚಾಲಕ ಕೊಂಕೋಡಿ ಪದ್ಮನಾಭಗೆ ವಾಣಿಜ್ಯ ಸಚಿವಾಲಯವು ಬೆಲೆ ಸುಧಾರಣೆ ಹಾಗೂ ಮಾರುಕಟ್ಟೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪತ್ರ ಬರೆದಿದೆ. ದೇಶದ ಎಲ್ಲಾ ಅಬಕಾರಿ, ಕಸ್ಟಮ್ಸ್, ಜಾರಿ ನಿರ್ದೇಶನಾಲಯ ಸೇರಿದಂತೆ ಪ್ರಮುಖ ಇಲಾಖೆಗಳಿಗೆ ಈ ಕಾನೂನು ಬಾಹಿರ ಕಾರ್ಯಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರದ ಕ್ರಮಗಳಿಂದ ಶೀಘ್ರವೇ ಕಾಳು ಮೆಣಸಿನ ದರವು ಮತ್ತಷ್ಟು ಚೇತರಿಸಿಕೊಳ್ಳಬಹುದು ಎಂದು ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)