ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನಕಾಯಿಗೂ ಏರುತ್ತಿದೆ ಬೇಡಿಕೆ

Last Updated 3 ಫೆಬ್ರುವರಿ 2018, 8:42 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಗಡಿಭಾಗದಲ್ಲಿರುವ ಅಂತರಘಟ್ಟೆ ಮಾರುಕಟ್ಟೆಯಲ್ಲಿ 1,000 ತೆಂಗಿನಕಾಯಿ ಧಾರಣೆ ₹ 23ರಿಂದ 26 ಸಾವಿರದ ವರೆಗೆ ಏರಿಕೆಯಾಗಿದೆ.

ಮಲೆನಾಡಿನ ಅಂಚು ಹಾಗೂ ಬಯಲು ಸೀಮೆ ಜನರಿಗೆ ಅಂತರಘಟ್ಟೆ ತೆಂಗಿನಕಾಯಿ ಮಾರುಕಟ್ಟೆ ಪ್ರಸಿದ್ಧಿಯಾಗಿದೆ. ಇಲ್ಲಿ ಪ್ರತಿ ಗುರುವಾರ ನಡೆಯುವ ತೆಂಗಿನಕಾಯಿ ಮಾರುಕಟ್ಟೆಗೆ ಹೊಸದುರ್ಗ, ತರೀಕೆರೆ, ಕಡೂರು, ಅರಸೀಕೆರೆ, ಭದ್ರಾವತಿ, ಚನ್ನಗಿರಿ ಸೇರಿದಂತೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ತೆಂಗಿನಕಾಯಿ ಖರೀದಿಸುವ ವ್ಯಾಪಾರಿಗಳು ಇಲ್ಲಿಗೆ ಬರುತ್ತಾರೆ. ತಾಲ್ಲೂಕಿನ ಬಹುತೇಕ ತೆಂಗು ಬೆಳೆಗಾರರು ಈ ಮಾರುಕಟ್ಟೆಗೆ ಕಾಯಿ ಮಾರಾಟ ಮಾಡಲು ಹೋಗುತ್ತಿರುವುದು ವಿಶೇಷ.

ಜಿಲ್ಲೆಯಲ್ಲಿಯೇ ತೆಂಗು ಬೆಳೆಗೆ ಹೊಸದುರ್ಗ ತಾಲ್ಲೂಕು ಅಗ್ರಸ್ಥಾನ ಪಡೆದಿದೆ. ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ ಒಟ್ಟು 25,297 ಹೆಕ್ಟೇರ್‌ ತೆಂಗು ಬೆಳೆಯಲಾಗುತ್ತಿದೆ. ಆದರೆ ಕಳೆದ ಐದಾರು ವರ್ಷಗಳಿಂದ ಸರಿಯಾಗಿ ಮಳೆ ಬಂದಿಲ್ಲ. ಕೆರೆಗಳಲ್ಲಿ ನೀರು ನಿಲ್ಲದಂತಾಗಿದೆ. ಇದರಿಂದ ಅಂತರ್ಜಲ ಪಾತಾಳಕ್ಕಿಳಿದಿದೆ. ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಸಿದ್ದ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಹೊರ ಬರುತ್ತಿಲ್ಲ ಎಂದು ಶ್ರೀರಂಗಪುರದ ರೈತ ತಿಪ್ಪೇಶಪ್ಪ, ಬಾಗೂರಿನ ಆರ್‌.ವೆಂಕಟೇಶ್‌ ‘ಪ್ರಜಾವಾಣಿ’ ಜತೆಗೆ ಅಳಲು ತೋಡಿಕೊಂಡರು.

ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ ಒಂದೆಡೆ ಮಳೆ ಅಭಾವ ಹಾಗೂ ಅಂತರ್ಜಲ ಕುಸಿತದಿಂದ ತಾಲ್ಲೂಕಿನ ಮತ್ತೋಡು, ಮಾಡದಕೆರೆ ಹಾಗೂ ಶ್ರೀರಾಂಪುರ ಹೋಬಳಿ ವ್ಯಾಪ್ತಿಯಲ್ಲಿ 3,000 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ತೆಂಗಿನ ತೋಟಗಳು ಒಣಗುತ್ತಿವೆ. ಮತ್ತೊಂದೆಡೆ ನುಸಿ ಹಾಗೂ ರಸ ಸೋರುವ ರೋಗಬಾಧೆ ಮತ್ತು ಕೆಂಪ್ಪು ತಲೆ ಕಂಬಳಿ ಹುಳು ಕಾಟದಿಂದ ತೆಂಗಿನಕಾಯಿ ಗಾತ್ರ (ದಪ್ಪ) ಹೆಚ್ಚಾಗುತ್ತಿಲ್ಲ. ಸುಲಿದ ಮೂರು ತೆಂಗಿನ ಕಾಯಿ ತೂಕ ಮಾಡಿದರೂ ಒಂದು ಕೆ.ಜಿ. ಬರುವುದಿಲ್ಲ ಎನ್ನುತ್ತಾರೆ ಬೆಳೆಗಾರರು.

ಒಂದೆಡೆ ಇಳುವರಿ ಕುಸಿತ, ಮತ್ತೊಂದೆಡೆ ಕೆಲವು ಭಾಗದಲ್ಲಿ ತೆಂಗಿನ ತೋಟಗಳು ಒಣಗುತ್ತಿರುವುದರಿಂದ ತೆಂಗಿನಕಾಯಿ ಈ ಮೊದಲಿನಂತೆ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿಲ್ಲ. ಇದರಿಂದ ರಾಜ್ಯ ಹಾಗೂ ಹೊರರಾಜ್ಯ, ದೇಶಗಳಲ್ಲಿಯೂ ತೆಂಗಿನಕಾಯಿ ಬೇಡಿಕೆ ಹೆಚ್ಚಾಗಿದ್ದರಿಂದ ಧಾರಣೆ ಏರಿಕೆಯಾಗುತ್ತಿದೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ. ಹಾಗಾಗಿ ತೆಂಗು ಬೆಳೆ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಇಲಾಖೆ ಮುಂದಾಗಬೇಕು. ಹಾಗೆಯೇ ಒಣಗುತ್ತಿರುವ ತೋಟಗಳು ಉಳಿಯಬೇಕಾದರೆ ಆದಷ್ಟು ಬೇಗನೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸಲು ಸರ್ಕಾರ ಮುಂದಾಗಬೇಕು ಎಂಬುದು ತೆಂಗು ಬೆಳೆಗಾರರ ಮನವಿ.

ಹದಿನೈದೇ ದಿನಕ್ಕೆ ಏರಿದ ಬೆಲೆ

ಒಂದು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು 1,000 ಸುಲಿದ ತೆಂಗಿನಕಾಯಿಯನ್ನು ಹುಂಡಿಯಾಗಿ ₹ 20 ಸಾವಿರದಿಂದ ₹ 23 ಸಾವಿರಕ್ಕೆ ಖರೀದಿಸುತ್ತಿದ್ದರು. 1 ಕ್ವಿಂಟಲ್‌ ಸುಲಿದ ತೆಂಗಿನಕಾಯಿಯನ್ನು ₹ 40 ಸಾವಿರದಿಂದ ₹ 45 ಸಾವಿರದ ವರೆಗೂ ಖರೀದಿಸುತ್ತಿದ್ದರು. ಕಳೆದ ಎರಡು ವಾರದ ಸಂತೆಯಲ್ಲಿ 1,000 ಸುಲಿದ ತೆಂಗಿನಕಾಯಿಯನ್ನು ಹುಂಡಿಯಾಗಿ ₹ 23ರಿಂದ ₹ 26 ಸಾವಿರ ಹಾಗೂ ತೂಕದ ಲೆಕ್ಕದಲ್ಲಿ 1 ಕ್ವಿಂಟಲ್‌ ಸುಲಿದ ತೆಂಗಿನಕಾಯಿಯನ್ನು ₹ 45 ಸಾವಿರದಿಂದ ₹ 50 ಸಾವಿರದ ವರೆಗೂ ಖರೀದಿಸಿದ್ದಾರೆ ಎನ್ನುತ್ತಾರೆ ರೈತ ಹನುಮಂತಪ್ಪ.

ಕೀಟ ಮತ್ತು ರೋಗ ನಿಯಂತ್ರಣಕ್ಕೆ
ಪ್ರತಿ ಹೆಕ್ಟೇರ್‌ ತೆಂಗಿನತೋಟಕ್ಕೆ ₹ 5,250 ಬೆಲೆಬಾಳುವ ಔಷಧಿಯನ್ನು ಶೇ 75ರ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ಹನಿ ನೀರಾವರಿ ವ್ಯವಸ್ಥೆ ಹೊಂದಿದ್ದು, 1 ಹೆಕ್ಟೇರ್‌ನಲ್ಲಿ 32 ತೆಂಗಿನ ಮರ ಒಣಗಿದ್ದರೆ ಆ ಮರಗಳನ್ನು ಬುಡಸಮೇತ ತಗೆದು ಮತ್ತೆ ಸಸಿ ನಾಟಿ ಮಾಡಬೇಕು. ಉಳಿದ ತೆಂಗಿನ ಮರಗಳ ಸುತ್ತ ಪಾತಿ ಮಾಡಿ ಬೇವಿನಹಿಂಡಿ, ಲಘು ಪೋಷಕಾಂಶ ಹಾಕಿ ಹೊದಿಕೆ ಮಾಡಿ ನೀರಾಯಿಸಬೇಕು. ಈ ರೀತಿ ಅಭಿವೃದ್ಧಿ ಕೆಲಸ ಮಾಡಲು 1 ಹೆಕ್ಟೇರ್‌ಗೆ ₹ 44,750 ಸಹಾಯಧನವನ್ನು ಕೊಡಲಾಗುತ್ತಿದೆ ಎಂದು ತಾಲ್ಲೂಕು ಹಿರಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎನ್‌.ಪ್ರಸನ್ನ ಪ್ರತಿಕ್ರಿಯಿಸಿದರು.

ಇನ್ನೂ ತೆಂಗಿನ ಮರದಲ್ಲಿ ಗುಳಲು
ನಿಲ್ಲುತ್ತಿಲ್ಲ. ಎಳನೀರು ಆಗುವ ಮೊದಲೇ ಕೆಳಗೆ ಉದುರುತ್ತಿವೆ. ಇದೆಲ್ಲದರ ಪರಿಣಾಮದಿಂದ ತೆಂಗು ಬೆಳೆ ಇಳುವರಿ ಶೇ 50ಕ್ಕೂ ಅಧಿಕ ಪ್ರಮಾಣದಲ್ಲಿ ಕುಸಿತವಾಗಿದೆ. ಹತ್ತಾರು ವರ್ಷದ ಹಿಂದೆ ಸಮೃದ್ಧವಾಗಿ ಮಳೆ ಆಗುತ್ತಿದ್ದ ಕಾಲದಲ್ಲಿ 500 ತೆಂಗಿನ ತೋಟ ಇರುವವರು ಎರಡು ತಿಂಗಳಿಗೊಮ್ಮೆ 2,500ಕ್ಕೂ ಅಧಿಕ ತೆಂಗಿನಕಾಯಿ ಕೆಡವುತ್ತಿದ್ದವರು. ಆದರೆ ಪ್ರಸ್ತುತ ಮೂರು ತಿಂಗಳಿಗೊಮ್ಮೆ ತೆಂಗಿನಕಾಯಿ ಕೆಡವಿದರೂ 700 ಕಾಯಿ ಸಿಗುತ್ತಿಲ್ಲ ಎನ್ನುತ್ತಾರೆ ಬೆಳೆಗಾರರಾದ ರುದ್ರಪ್ಪ, ತಿಪ್ಪೇಶ್‌.

* * 

ಹೊಸದುರ್ಗ ತರಕಾರಿ ಮಾರುಕಟ್ಟೆಯಲ್ಲಿ ಗುಣಮಟ್ಟದ ಒಂದು ತೆಂಗಿನಕಾಯಿಗೆ ಮಾರಾಟಗಾರರು ₹ 30ಕ್ಕೂ ಅಧಿಕ ಕೇಳುತ್ತಾರೆ. ಸಾಂಬಾರಿಗೆ ತೆಂಗಿನಕಾಯಿ ಜೋಡಿಸುವ ಚಿಂತೆ ಕಾಡುತ್ತಿದೆ.
ಗೃಹಿಣಿ ಕೋಟೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT