ಸೋಮವಾರ, ಡಿಸೆಂಬರ್ 9, 2019
24 °C

ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್‌ ಮೀಟರ್‌ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್‌ ಮೀಟರ್‌ ಕಡ್ಡಾಯ

ನವದೆಹಲಿ: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಮತ್ತು ರೈತರು ವಿದ್ಯುತ್‌ ಶುಲ್ಕ ಪಾವತಿ ಕಡ್ಡಾಯಗೊಳಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ.

ಒಂದು ವೇಳೆ ರಾಜ್ಯ ಸರ್ಕಾರಗಳು ವಿದ್ಯುತ್‌ ಸಬ್ಸಿಡಿ ನೀಡಲು ಬಯಸಿದರೆ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಸಬ್ಸಿಡಿ ಹಣ ವರ್ಗಾಯಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಮುಂದಿಟ್ಟಿದೆ.

ಕೃಷಿ ಪಂಪ್‌ಸೆಟ್‌ಗಳಿಗೆ ಆಧುನಿಕ ತಂತ್ರಜ್ಞಾನದ ‘ಸ್ಮಾರ್ಟ್‌ ಮೀಟರ್‌’ ಅಳವಡಿಸಲು ಸರ್ಕಾರ ಯೋಚಿಸಿದೆ. ಪ್ರತಿ ತಿಂಗಳ ವಿದ್ಯುತ್‌ ಬಿಲ್‌ ಪ್ರತಿಗಳು ನೇರವಾಗಿ ವಿದ್ಯುತ್‌ ಸರಬರಾಜು ಕಂಪೆನಿ ಮತ್ತು ರೈತರಿಗೆ  ತಲುಪಲಿವೆ. ಇದರಿಂದ ವಿದ್ಯುತ್‌ ಇಲಾಖೆ ಸಿಬ್ಬಂದಿ ಹಸ್ತಕ್ಷೇಪ ತಪ್ಪಲಿದೆ.

ರೈತರು ವಿದ್ಯುತ್‌ ಶುಲ್ಕ ಪಾವತಿಸಿದ ನಂತರ ಆ ಹಣವನ್ನು ರಾಜ್ಯ ಸರ್ಕಾರಗಳು ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಬಹುದು ಎಂದು ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್‌ ತಿಳಿಸಿದ್ದಾರೆ.

ಅಡುಗೆ ಅನಿಲ ಸಿಲಿಂಡರ್‌ಗಳಿಗೆ ನೀಡಲಾಗುವ ಸಬ್ಸಿಡಿ ಮಾದರಿಯಲ್ಲಿಯೇ ವಿದ್ಯುತ್‌ ಶುಲ್ಕ ಸಬ್ಸಿಡಿ ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ಜಮಾ ಆಗಲಿದೆ.

ಈ ಕುರಿತು ಕೇಂದ್ರವು ಎಲ್ಲ ರಾಜ್ಯಗಳ ಜತೆ ಚರ್ಚೆ ನಡೆಸಿದ್ದು, ಬಹುತೇಕ ರಾಜ್ಯಗಳು ಹೊಸ ವ್ಯವಸ್ಥೆ ಅಳವಡಿಕೆಗೆ ಆಸಕ್ತಿ ತೋರಿಸಿವೆ ಎಂದು ಸಚಿವರು ತಿಳಿಸಿದ್ದಾರೆ.

ಕೃಷಿ ಉದ್ದೇಶಕ್ಕೆ ತಡೆರಹಿತ ವಿದ್ಯುತ್‌ ಪೂರೈಸುವ ಹೊಣೆಯನ್ನು ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ ವಹಿಸಲಾಗುವುದು. ಈ ಸಂಬಂಧ ಶೀಘ್ರ ಕೇಂದ್ರ ಸರ್ಕಾರ ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧತೆ ನಡೆಸಿದೆ ಎಂದು ಸಚಿವ ಸಿಂಗ್‌ ತಿಳಿಸಿದ್ದಾರೆ.

ಒಂದು ವೇಳೆ ರೈತರಿಗೆ ನಿರಂತರ ವಿದ್ಯುತ್‌ ಪೂರೈಸಲು ವಿಫಲವಾದರೆ ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ ದಂಡ ಹಾಕಲಾಗುವುದು. ಹೊಸ ವ್ಯವಸ್ಥೆಯಿಂದ ವಿದ್ಯುತ್‌ ಶುಲ್ಕ ಸಂಗ್ರಹ ಸುಲಭವಾಗಲಿದ್ದು, ವಿದ್ಯುತ್‌ ಸೋರಿಕೆಯೂ ತಪ್ಪಲಿದೆ ಎಂದು ಸಚಿವರು ಆಶಯ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)