ಶುಕ್ರವಾರ, ಡಿಸೆಂಬರ್ 6, 2019
26 °C
ಸಮಾವೇಶಕ್ಕೆ ಭರ್ಜರಿ ಸಿದ್ಧತೆ

ಚುನಾವಣಾ ಪ್ರಚಾರಕ್ಕೆ ನಾಂದಿ ಹಾಡಲಿರುವ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣಾ ಪ್ರಚಾರಕ್ಕೆ ನಾಂದಿ ಹಾಡಲಿರುವ ಮೋದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ‍‍ಪ್ರಚಾರದ ಕಹಳೆ ಊದಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಫೆ.4) ನಗರಕ್ಕೆ ಬರಲಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ 75 ದಿನಗಳ ಕಾಲ ನಡೆದ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾರೋಪ ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ಚುನಾವಣೆ ಹತ್ತಿರ ಬರುತ್ತಿರುವುದರಿಂದ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡುವ ಸಭೆ ಇದಾಗಲಿದೆ. ಹೀಗಾಗಿ, ಮೂರೂವರೆಯಿಂದ ನಾಲ್ಕು ಲಕ್ಷ ಜನ ಸೇರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

2014ರ ಲೋಕಸಭೆ ಚುನಾವಣೆ ಪ್ರಚಾರ ಸಭೆ ಬಿಟ್ಟರೆ ಕರ್ನಾಟಕದಲ್ಲಿ  ಇಷ್ಟು ದೊಡ್ಡ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಹೀಗಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಚಿಮ್ಮುತ್ತಿದ್ದು, ಮೋದಿ ಅವರನ್ನು ಎದುರುಗೊಳ್ಳುವ ಸಂಭ್ರಮ ನಾಯಕರಲ್ಲೂ ತುಂಬಿದೆ.

ಭವ್ಯ ವೇದಿಕೆ: ಅರ್ಧ ಕಿ.ಮೀ ದೂರದಲ್ಲಿ ನಿಂತರೂ ವೇದಿಕೆ ಕಾಣುವಂತೆ 20 ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಯ ಮೇಲಿನ ಬೃಹತ್ ಪರದೆಯಲ್ಲಿ ‘ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ರ‍್ಯಾಲಿ– ಈ ಬಾರಿ ಬಿಜೆಪಿ’ ಎಂಬ ಘೋಷವಾಕ್ಯ ಬರೆಯಲಾಗಿದೆ. ಮೋದಿ, ಅಮಿತ್‌ ಷಾ ಹಾಗೂ ಯಡಿಯೂರಪ್ಪ ಭಾವಚಿತ್ರ ಮಾತ್ರ ಈ ಪರದೆಯ ಮೇಲೆ ಮುದ್ರಿಸಲಾಗಿದೆ.

ಮೋದಿ ಜತೆಯಲ್ಲಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ, ರಮೇಶ ಜಿಗಜಿಣಗಿ, ನಿರ್ಮಲಾ ಸೀತಾರಾಮನ್, ಅನಂತ

ಕುಮಾರ ಹೆಗಡೆ, ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಪಕ್ಷದ ಹಿರಿಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಬೆಂಗಳೂರಿನ ಪಕ್ಷದ ಪ್ರಮುಖರು ಸೇರಿ 27 ಜನರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.

ಮೋದಿ ಭಾಷಣ ಆಲಿಸಲು 25 ವಿಶಾಲ ಪರದೆಗಳನ್ನು ಮೈದಾನದ ಮಧ್ಯೆ ಮಧ್ಯೆ ವ್ಯವಸ್ಥೆ ಮಾಡಲಾಗಿದೆ. ಎರಡೂವರೆ ಲಕ್ಷ ಕುರ್ಚಿಗಳನ್ನು ಸಭಿಕರಿಗಾಗಿ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಬಂದವರಿಗೆಲ್ಲ ಊಟದ ವ್ಯವಸ್ಥೆ ಮಾಡಲು 600 ಅಡುಗೆಯವರನ್ನು ನಿಯೋಜಿಸಲಾಗಿದೆ. ಮೂರು ಪ್ರತ್ಯೇಕ ಅಡುಗೆ ಮನೆಗಳನ್ನು ವ್ಯವಸ್ಥೆ ಮಾಡಲಾಗಿದೆ.

10,000 ವಾಹನ: ಕಾರ್ಯಕರ್ತರನ್ನು ಕರೆತರಲು ಸುಮಾರು 10,000 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ.ವಾಹನದಲ್ಲಿ ಕರೆತಂದವರು ಪುನಃ ಅದರಲ್ಲೇ ವಾಪಸ್ ಹೋಗಬೇಕಾದ ಅನಿವಾರ್ಯತೆ ಇರುವುದರಿಂದ ಸಮಾರಂಭ ಮುಗಿಯುವವರೆಗೆ ಅಲ್ಲಿಯೇ ಕುಳಿತುಕೊಳ್ಳುತ್ತಾರೆ ಎಂಬ ಲೆಕ್ಕಾಚಾರ ಪಕ್ಷದ ನಾಯಕರದ್ದಾಗಿದೆ.

ಇದಕ್ಕಾಗಿ, 16 ಜಿಲ್ಲೆಗಳಿಂದ ಜನರನ್ನು ಕರೆತರಲು ಕೆಎಸ್‌ಆರ್‌ಟಿಸಿಯ 4,000 ಬಸ್‌, 3,000 ಖಾಸಗಿ ಬಸ್‌, ಜತೆಗೆ 2,000ಕ್ಕೂ ಜತೆಗೆ ಟೆಂಪೊ ಟ್ರಾವೆಲರ್‌, ಕ್ರೂಸರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಅಭೂತ ಪೂರ್ವ ಸ್ಪಂದನೆ : ಯಡಿಯೂರಪ್ಪ

224 ಕ್ಷೇತ್ರಗಳಲ್ಲೂ ಹಿಂದೆಂದೂ ಕಂಡರಿಯದ ಬೆಂಬಲ, ಸ್ಪಂದನೆ ಸಿಕ್ಕಿದೆ. ಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಬಿ.ಎಸ್‌. ಯಡಿಯೂರಪ್ಪ ಪ್ರತಿಪಾದಿಸಿದರು.

‘ನನ್ನ ಜೀವನದಲ್ಲಿ ಅನೇಕ ಯಾತ್ರೆ ಮಾಡಿದ್ದೇನೆ. ಇದು ಸವಾಲಿನ ಯಾತ್ರೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಮೂರುವರೆ ವರ್ಷದ ಸರ್ಕಾರದ ಸಾಧನೆಗೆ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಹೋದ ಕಡೆಗಳಲ್ಲೆಲ್ಲ ನೂರಾರು ಯುವಕರು ಉತ್ಸಾಹದಿಂದ ರಥದ ಮುಂದೆ ಕುಣಿಯುತ್ತಾ, ಸಮಾವೇಶಗಳಲ್ಲಿ ಬಿಜೆಪಿಗೆ ಜೈಕಾರ ಹಾಕುತ್ತಿದ್ದುದು ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

***

‘ಮಿಷನ್ –150 ಗುರಿ ನಮ್ಮ ಮುಂದಿದೆ. 125ಕ್ಕೂ ಹೆಚ್ಚು ಸ್ಥಾನಗಳನ್ನು ಸುಲಭದಲ್ಲಿ ಗೆಲ್ಲುವ ವಾತಾವರಣ ರಾಜ್ಯದಲ್ಲಿ ಇದೆ ಎಂಬುದು ಯಾತ್ರೆಯಿಂದ ಮನದಟ್ಟಾಯಿತು

–ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

***

ನಾವು ಇರುವ ಕಡೆಗೆ ಜನರನ್ನು ಕರೆಸದೇ, ಜನರು ಇರುವ ಕಡೆಗೆ ನಾವು ಹೋದೆವು. ಇದು ಯಾತ್ರೆ ಯಶಸ್ಸಿಗೆ ಕಾರಣ

–ಎನ್‌. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ

ಪ್ರತಿಕ್ರಿಯಿಸಿ (+)