ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹6 ಸಾವಿರ ವೇತನ ನೀಡಲು ಒತ್ತಾಯ

ಆಶಾ ಕಾರ್ಯಕರ್ತೆಯರ ಸಂಘದ ವಲಯ ಮಟ್ಟದ ಸಮಾವೇಶ
Last Updated 3 ಫೆಬ್ರುವರಿ 2018, 19:36 IST
ಅಕ್ಷರ ಗಾತ್ರ

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ₹6,000 ನಿಗದಿತ ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಒತ್ತಾಯಿಸಿದೆ.

ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡುವ ಉದ್ದೇಶದಿಂದ ನಗರದಲ್ಲಿ ಶನಿವಾರ ವಲಯ ಮಟ್ಟದ ಆಶಾ ಕಾರ್ಯಕರ್ತೆಯರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

‘ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 2017ರ ಸೆಪ್ಟೆಂಬರ್‌ನಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದೆವು. ಈ ವೇಳೆ, ₹3,500 ನಿಗದಿತ ವೇತನ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಅದನ್ನು ₹6,000ಕ್ಕೆ ಹೆಚ್ಚಿಸಿ, ಅದಕ್ಕೆ ಅಗತ್ಯವಿರುವ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ಮೀಸಲಿಡಬೇಕು’ ಎಂದು ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಒತ್ತಾಯಿಸಿದರು.

‘ಕಾರ್ಯಕರ್ತೆಯರಿಗೆ ₹3,500 ಗೌರವಧನ ನೀಡಿ ₹35 ಸಾವಿರ ಮೊತ್ತದ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ವೇತನ ಏರಿಕೆಯ ಜತೆಗೆ ನಿವೇಶನರಹಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕರ್ತೆಯರು ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯಕೀಯ ಪರಿಹಾರ ಹಾಗೂ ನಿಧನ ಹೊಂದಿದಾಗ ಪರಿಹಾರ ನೀಡಲು ‘ಆಶಾ ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪಿಸಬೇಕು. ಇದಕ್ಕೆ ₹5 ಕೋಟಿ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

ನಗರ, ಪಟ್ಟಣಗಳಿಗೆ ಕಾರ್ಯಕರ್ತೆಯರು ಓಡಾಟ ನಡೆಸಬೇಕಾಗುತ್ತದೆ. ಹೀಗಾಗಿ, ಉಚಿತ ಬಸ್‌ ಪಾಸ್‌ ನೀಡಬೇಕು ಎಂದು ಒತ್ತಾಯಿಸಿದರು.

ಮೇಯರ್‌ ಆರ್‌.ಸಂಪತ್‌ ರಾಜ್‌, ‘ಆಶಾ ಕಾರ್ಯಕರ್ತೆಯರು ವಿಶಿಷ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಕಾರ್ಯಕರ್ತೆಯರ ವೇತನ ಹೆಚ್ಚಳ ಸಂಬಂಧ ರಾಜ್ಯ ಬಜೆಟ್‌ ನೋಡಿಕೊಂಡು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಕಾರ್ಯಕರ್ತೆಯರ ಕೆಲಸ ಕಾಯಂಗೊಳಿಸಿ

ಆಶಾ ಕಾರ್ಯಕರ್ತೆಯರ ಕೆಲಸವನ್ನು ತುರ್ತು ಸೇವೆಯೆಂದು ಪರಿಗಣಿಸಿ, ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. 10 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರನ್ನು ಕಾಯಂಗೊಳಿಸಬೇಕು. ಪಿಎಫ್‌, ಇಎಸ್‌ಐ, ಪ್ರಯಾಣ ಭತ್ಯೆ, ಆರೋಗ್ಯ ಸೌಲಭ್ಯ ಕಲ್ಪಿಸಬೇಕು ಎಂದು ವಕೀಲ ಪ್ರೊ.ರವಿವರ್ಮ ಕುಮಾರ್ ಆಗ್ರಹಿಸಿದರು.

ಅವರು ತಾಯ್ತನದ ಕೊಂಡಿಯಂತೆ ಕೆಲಸ ಮಾಡುತ್ತಿದ್ದಾರೆ. ಕೆಲಸದ ಅವಧಿಯು 2 ತಾಸು ಇದ್ದರೂ ಇಡೀ ದಿನ ಶ್ರಮವಹಿಸಬೇಕಾಗುತ್ತದೆ. ರೈತರು ಎತ್ತುಗಳಿಗೆ ಪ್ರತಿ ಸೋಮವಾರ ಬಿಡುವು ನೀಡುತ್ತಾರೆ. ಆದರೆ, ಕಾರ್ಯಕರ್ತೆಯರು ಎತ್ತುಗಳಿಗಿಂತ ಕಡೆಯಾಗಿ ದುಡಿಯುತ್ತಿದ್ದಾರೆ. ನಿಯಮಾವಳಿಗಳನ್ನು ಬದಲಾಯಿಸಿ, ಪೂರ್ಣಾವಧಿ ಕೆಲಸಗಾರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT