ಬುಧವಾರ, ಡಿಸೆಂಬರ್ 11, 2019
17 °C

ಮಿಂಚುವರೇ ಯುವ ಆಟಗಾರರು?

Published:
Updated:
ಮಿಂಚುವರೇ ಯುವ ಆಟಗಾರರು?

ಐಪಿಎಲ್‌ 11ನೇ ಆವೃತ್ತಿಗೆ ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಸುದ್ದಿಯಾದವರು ಬೆನ್‌ ಸ್ಟೋಕ್ಸ್, ಜಯದೇವ ಉನದ್ಕತ್‌, ಕೆ.ಎಲ್‌.ರಾಹುಲ್‌ ಮತ್ತು ಮನೀಷ್ ಪಾಂಡೆ. ಹೆಚ್ಚು ಮೊತ್ತ ಗಳಿಸಿ ಈ ನಾಲ್ಕು ಮಂದಿ ಗಮನ ಸೆಳೆದಿದ್ದರು.

ಆದರೆ ಎರಡೂ ದಿನ ಕ್ರಿಕೆಟ್‌ ಪ್ರಿಯರಲ್ಲಿ ಕುತೂಹಲ ಕೆರಳಿಸಿದ ಹೆಸರು ವೆಸ್ಟ್ ಇಂಡೀಸ್‌ನ ಕ್ರಿಸ್ಟ್ ಗೇಲ್‌ ಮತ್ತು ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ. ‌ಕ್ರಿಸ್ ಗೇಲ್‌ ಐಪಿಎಲ್‌ನ ರಾಜನಾಗಿ ಮೆರೆದವರು. ವಿಶಿಷ್ಟ ಬೌಲಿಂಗ್‌ ಶೈಲಿಯ ಮೂಲಕ ಕ್ರಿಕೆಟ್ ಜಗತ್ತಿನ ಅಚ್ಚರಿಗೆ ಕಾರಣರಾದವರು ಲಸಿತ್ ಮಾಲಿಂಗ. ಐಪಿಎಲ್‌ನಲ್ಲಿ ಇವರಿಬ್ಬರು ಮಾಡಿರುವ ಸಾಧನೆ ಗಮನಾರ್ಹ.

ಇಂಥ ಆಟಗಾರರನ್ನು ಖರೀದಿಸಲು ಫ್ರಾಂಚೈಸ್‌ಗಳು ಮುಂದೆ ಬಂದಿಲ್ಲ ಎಂಬುದು ಹರಾಜು ಪ್ರಕ್ರಿಯೆಯ ಮೊದಲ ದಿನದ ವಿಶೇಷವಾಗಿತ್ತು. ಕ್ರಿಸ್‌ ಗೇಲ್‌ ಕೊನೆಯ ಹಂತದಲ್ಲಿ ಮೂಲಬೆಲೆಗೇ ಮಾರಾಟವಾದರು ಎಂಬುದು ಎರಡನೇ ದಿನದ ಸುದ್ದಿಯಾಗಿತ್ತು. ಆದರೆ ಎರಡನೇ ದಿನದ ಕೊನೆಯಲ್ಲಿ ಅಚ್ಚರಿ ಮೂಡಿಸಿದ್ದು ಅಫ್ಗಾನಿಸ್ಥಾನದ ಮುಜೀಬ್‌ ಜದ್ರಾನ್‌, ಭಾರತದ ವಾಷಿಂಗ್ಟನ್ ಸುಂದರ್‌, ವೆಸ್ಟ್ ಇಂಡೀಸ್‌ನ ಜೊಫ್ರಾ ಆರ್ಚ್‌ ಹಾಗೂ ನೇಪಾಳದ ಸಂದೀಪ್‌ ಲಮಿಚಾನೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು, 265 ಸಿಕ್ಸರ್‌ಗಳನ್ನು ಸಿಡಿಸಿದ, ಅತ್ಯಧಿಕ ವೈಯಕ್ತಿಕ ಮೊತ್ತ (175) ಗಳಿಸಿರುವ ಮತ್ತು ಹೆಚ್ಚು ಶತಕಗಳನ್ನು (5) ಬಗಲಿಗೆ ಹಾಕಿಕೊಂಡಿರುವ ಆಟಗಾರ ಎಂಬ ದಾಖಲೆ ಹೊಂದಿರುವ ಕ್ರಿಸ್‌ ಗೇಲ್‌ ಕಡೆಗಣನೆಗೆ ಒಳಗಾಗಿದ್ದರು. ಅತಿ ಹೆಚ್ಚು, 154 ವಿಕೆಟ್‌ ಗಳಿಸಿದ ಲಸಿತ್ ಮಾಲಿಂಗ, ಅತ್ಯುತ್ತಮ ಇಕಾನಮಿ ಹೊಂದಿರುವ ಸುನಿಲ್‌ ನಾರಾಯಣ್‌ (6.32) ಮುಂತಾದವರನ್ನು ಕೂಡ ಫ್ರಾಂಚೈಸ್‌ಗಳು ದೂರ ಇರಿಸಿದ್ದೂ ಅಚ್ಚರಿಗೆ ಕಾರಣವಾಗಿತ್ತು.

ಅದರೆ ಐಪಿಎಲ್‌ಗೆ ಇದೇ ಮೊದಲ ಬಾರಿ ಪ್ರವೇಶಿಸಿದ 17ರ ಹರೆಯದ ಮುಜೀಬ್‌ ಜದ್ರಾನ್‌ಗೆ ಕಿಂಗ್ಸ್ ಇಲೆವನ್ ಪಂಬಾಜ್‌ ₹ 4 ಕೋಟಿ ಬೆಲೆ ಕಟ್ಟಿತ್ತು. ಕಳೆದ ಬಾರಿ ಕೇವಲ ₹ 1 ಕೋಟಿಗೆ ಹರಾಜಾಗಿದ್ದ ವಾಷಿಂಗ್ಟನ್ ಸುಂದರ್‌ಗೆ ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಕೊಟ್ಟ ಬೆಲೆ ₹ 3.2 ಕೋಟಿ.

ಮಾರ್ಟಿನ್ ಗಪ್ಟಿಲ್‌, ಲೆಂಡ್ಲ್‌ ಸಿಮನ್ಸ್‌, ಹಾಶೀಂ ಆಮ್ಲಾ, ಶಾನ್ ಮಾರ್ಷ್‌, ಎಯಾನ್ ಮಾರ್ಗನ್‌, ಇರ್ಫಾನ್ ಪಠಾಣ್‌, ಇಶಾಂತ್ ಶರ್ಮಾ, ಲಸಿತ್ ಮಾಲಿಂಗ ಮುಂತಾದವರನ್ನು ಕೈಬಿಟ್ಟ ಫ್ರಾಂಚೈಸ್‌ಗಳು ಶಿವಂ ಮಾವಿ (₹ 3 ಕೋಟಿ), ವಾಷಿಂಗ್ಟನ್ ಸುಂದರ್‌ (₹ 3.20 ಕೋಟಿ), ರಷೀದ್‌ ಖಾನ್ ಅರ್ಮಾನ್‌ (₹ 9 ಕೋಟಿ), ಪೃಥ್ವಿ ಶಾ (₹ 1.20 ಕೋಟಿ) ಮುಂತಾದವರನ್ನು ಕೋಟ್ಯಧಿಪತಿಗಳನ್ನಾಗಿಸಿದರು. 22 ವರ್ಷದ ಕಗಿಸೊ ರಬಾಡ (₹ 4.20 ಕೋಟಿ) ಮುಂತಾದ ಅನುಭವಿ ಯುವ ಆಟಗಾರರ ಮೇಲೆಯೂ ಫ್ರಾಂಚೈಸ್‌ಗಳ ಕಣ್ಣು ಬಿತ್ತು.

ಹೊಸಬರು ಹೆಸರಿಗಷ್ಟೇ?

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಳ್ಳದ ಮತ್ತು ಯುವ ಆಟಗಾರರರ ಮೇಲೆ ಐಪಿಎಲ್‌ ಫ್ರಾಂಚೈಸ್‌ಗಳು ನೋಟ ಬೀರುವುದು ಇದು ಮೊದಲೇನಲ್ಲ. ಪ್ರಥಮ ದರ್ಜೆ ಪಂದ್ಯಗಳು ಮತ್ತು ಸ್ಥಳೀಯ ಲೀಗ್‌ಗಳ ಮೇಲೆ ಗಮನ ಇಡುವ ಫ್ರಾಂಚೈಸ್‌ಗಳು ಪ್ರತಿಭಾವಂತರನ್ನು ಹೆಕ್ಕಲು ಸಮಯ ಕಾಯುತ್ತಿರುತ್ತಾರೆ. ಕರ್ನಾಟಕ ಪ್ರೀಮಿಯರ್‌ ಲೀಗ್‌, ಮುಷ್ತಾಕ್ ಅಲಿ ಟ್ರೋಫಿ ಮುಂತಾದವುಗಳಲ್ಲಿ ಮಿಂಚಿದ ರಾಜ್ಯದ ಆಟಗಾರರು ಈ ಬಾರಿ ಮತ್ತು ಈ ಹಿಂದೆಯೂ ಐಪಿಎಲ್‌ಗೆ ಆಯ್ಕೆಯಾದದ್ದೇ ಇದಕ್ಕೆ ಸಾಕ್ಷಿ.

ಪವನ್ ದೇಶಪಾಂಡೆ, ಅನಿರುದ್ಧ ಜೋಶಿ, ಕಿಶೋರ್ ಕಾಮತ್‌, ಕೆ.ಸಿ.ಕಾರ್ಯಪ್ಪ, ಕೆ.ಗೌತಮ್‌....ಹೀಗೆ ಸಾಗುತ್ತದೆ ಈ ಪಟ್ಟಿ.

ಹೀಗೆ ಹೊಸಬರನ್ನು ಹರಾಜಿನಲ್ಲಿ ಕೊಂಡುಕೊಂಡ ಫ್ರಾಂಚೈಸ್‌ಗಳು ಎಲ್ಲರನ್ನೂ ಅಂಗಣಕ್ಕೆ ಇಳಿಸುವುದಿಲ್ಲ. ಹೀಗಾಗಿ ಅನೇಕರಿಗೆ ಹಿರಿಯ ಆಟಗಾರರ ಜೊತೆ ಕಲೆಯಲು ಮತ್ತು ಡ್ರೆಸಿಂಗ್ ಕೊಠಡಿ ಹಂಚಿಕೊಳ್ಳಲು ಮಾತ್ರ ಅವಕಾಶ ಸಿಗುತ್ತದೆ. ಈ ಬಾರಿಯೂ ಇದೇ ರೀರಿಯಾಗುವುದೇ ಅಥವಾ ‘ಅವಕಾಶ ಲಭಿಸಿದರೆ ಸಾಮರ್ಥ್ಯವನ್ನು ಸಂಪೂರ್ಣವಾಗಿ  ವಿನಿಯೋಗಿಸಿ ತಂಡವನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ’ ಎಂದು ಹೇಳುವ ಪವನ್ ದೇಶಪಾಂಡೆ ಅಂಥವರ ಕನಸು ನನಸಾಗುವುದೇ ಎಂಬುದನ್ನು ಕಾದುನೋಡಬೇಕು.

*-ಕಗಿಸೊ ರಬಾಡ

ಪ್ರತಿಕ್ರಿಯಿಸಿ (+)