ಮಂಗಳವಾರ, ಡಿಸೆಂಬರ್ 10, 2019
20 °C

ನಿಮ್ಮ ಪ್ರೀತಿಯ ‘ದಾಸ’

Published:
Updated:
ನಿಮ್ಮ ಪ್ರೀತಿಯ ‘ದಾಸ’

ಸಿನಿಮಾ ನಟರ ಹುಟ್ಟುಹಬ್ಬವೆಂದರೆ, ಅಭಿಮಾನಿಗಳ ಪಾಲಿಗೆ ಹಬ್ಬ. ತೆರೆಮೇಲೆ ತಮ್ಮ ನಾಯಕನನ್ನು ನೋಡಿ ಸಂಭ್ರಮಿಸುತ್ತಿದ್ದ ಅಭಿಮಾನಿಗಳು ಹುಟ್ಟುಹಬ್ಬದಂದು ಅವರ ಮನೆಗಳಿಗ ತೆರಳಿ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳುಲು ಕಾತರರಾಗಿರುತ್ತಾರೆ. ಸದ್ಯ ದರ್ಶನ ಅಭಿಮಾನಿಗಳು ಅಂತಹ ಸಂಭ್ರಮಕ್ಕಾಗಿ ಕ್ಷಣಗಣನೆ ಮಾಡುತ್ತಿದ್ದಾರೆ. ಫೆ.16 ಚಾಲೆಂಜಿಂಗ್‌ ಸ್ಟಾರ್‌ನ ಹುಟ್ಟುಹಬ್ಬ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್‌ ಮನೆಗೆ ಅಂದು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ದೌಡಾಯಿಸುತ್ತಾರೆ.

ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದರ್ಶನ್ ಅಭಿಮಾನಿಗಳಿಗೆ ಟ್ವಿಟರ್‌ನಲ್ಲಿ ಪ್ರೀತಿಯ ಮನವಿ ಮಾಡಿದ್ದಾರೆ.

‘ನಿಮ್ಮ ಪ್ರೀತಿಗೆ ನಾನು ಚಿರಋಣಿ. ಜನ್ಮದಿನ ಆಚರಣೆ ವೇಳೆಯಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆ ಆಗದಂತೆ ಶಾಂತಿ ಹಾಗೂ ಶಿಸ್ತಿನಿಂದ ವರ್ತಿಸಿ. ದಯವಿಟ್ಟು ಯಾರೂ ನಮ್ಮ ಅಕ್ಕಪಕ್ಕದ ಮನೆಯ ಕಾಂಪೌಂಡ್‌ ಹತ್ತುವುದು, ಒಳಪ್ರವೇಶಿಸುವುದು, ಹೂಕುಂಡಗಳನ್ನು ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವಂತಹ ಅನುಚಿತ ವರ್ತನೆ ತೋರಬಾರದು’ ಎಂದು ಮನವಿ ಮಾಡಿದ್ದಾರೆ.

ಪ್ರತಿವರ್ಷ ದರ್ಶನ್ ಅವರಿಗೆ ಹುಟ್ಟುಹಬ್ಬದ ಮರುದಿನ ಅಕ್ಕಪಕ್ಕದ ಮನೆಯವರಿಂದ ದೂರುಗಳ ಪಟ್ಟಿಯೇ ಬರುತ್ತಿತ್ತಂತೆ. ಮನೆಯ ಸುತ್ತಲಿನ ಪ್ರದೇಶ ಸ್ವಚ್ಛಮಾಡಲು ₹30 ಲಕ್ಷ ವೆಚ್ಚವಾಗುತ್ತಿತ್ತು. ಇದನ್ನು ಮನದಲ್ಲಿಟ್ಟುಕೊಂಡೇ ದರ್ಶನ್ ಹೀಗೆ ಟ್ವೀಟ್ ಮಾಡಿದ್ದಾರೆ ಎಂದು ನಟನ ಆಪ್ತ ವಲಯ ಹೇಳುತ್ತಿದೆ. ದರ್ಶನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ನಾಯಕನ ಮನವಿಗೆ ಸೈ ಎಂದಿದ್ದಾರೆ. ನೆಚ್ಚಿನ ನಾಯಕನಿಗೆ ಮುಂಚಿತವಾಗಿಯೇ ಶುಭಾಶಯಗಳ ಮಳೆಗರೆದಿದ್ದಾರೆ.

ಪ್ರತಿಕ್ರಿಯಿಸಿ (+)