ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಏಕದಿನ ಪಂದ್ಯ; ಚಾಹಲ್, ಯಾದವ್ ಮಣಿಕಟ್ಟಿನ ಮೋಡಿ

ಶಿಖರ್‌ ಅರ್ಧಶತಕ; ಭಾರತಕ್ಕೆ 9 ವಿಕೆಟ್‌ ಜಯ
Last Updated 4 ಫೆಬ್ರುವರಿ 2018, 20:34 IST
ಅಕ್ಷರ ಗಾತ್ರ

ಸೆಂಚೂರಿಯನ್‌: ಭಾರತದ ಸ್ಪಿನ್ ಜೋಡಿ ಯಜುವೇಂದ್ರ ಚಾಹಲ್‌ (22ಕ್ಕೆ5) ಮತ್ತು ಕುಲದೀಪ್ ಯಾದವ್‌ (20ಕ್ಕೆ3) ಅವರ ಮಣಿಕಟ್ಟಿನ ಮೋಡಿಗೆ ದಕ್ಷಿಣ ಆಫ್ರಿಕಾ ತಂಡ ಶರಣಾಯಿತು.

ವೇಗಿಗಳ ಸ್ನೇಹಿ ದಕ್ಷಿಣ ಆಫ್ರಿಕಾದ ನೆಲದಲ್ಲಿ ಭಾನುವಾರ ಭಾರತದ ಸ್ಪಿನ್ ಜೋಡಿಯ ಶ್ರೇಷ್ಠ ಬೌಲಿಂಗ್‌ ಬಲದಿಂದ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿತು. ಇದರೊಂದಿಗೆ ವಿರಾಟ್‌ ಕೊಹ್ಲಿ ಬಳಗ 6 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಗಳಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡವು 32.2 ಓವರ್‌ಗಳಲ್ಲಿ 118ರನ್‌ಗಳಿಗೆ ಆಲೌಟ್‌ ಆಯಿತು. ಮಾರ್ಕ್‌ರಮ್‌ ಪಡೆಯು ತವರಿನಲ್ಲಿ ದಾಖಲಿಸಿದ ಅತಿ ಕಡಿಮೆ ಮೊತ್ತ ಇದು. ಸುಲಭ ಗುರಿಯನ್ನು  ಭಾರತ 20.3 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ನಾಯಕ ಫಾಫ್‌ ಡುಪ್ಲೆಸಿ ಮತ್ತು ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್‌ ಗಾಯದ ಕಾರಣ ಪಂದ್ಯಕ್ಕೆ ಅಲಭ್ಯರಾಗಿದ್ದರು. ಹೀಗಾಗಿ 23 ವರ್ಷದ ಏಡನ್‌ ಮಾರ್ಕ್‌ರಮ್‌ಗೆ ಆತಿಥೇಯ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಮಾರ್ಕ್‌ರಮ್‌, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಮೂರನೇ ಏಕದಿನ ಪಂದ್ಯ ಇದು.

ಮಂಕಾದ ಆಮ್ಲಾ: ಬ್ಯಾಟಿಂಗ್‌ ಆರಂಭಿಸಿದ ಆತಿಥೇಯ ತಂಡ ಆರಂಭಿಕ ಸಂಕಷ್ಟ ಎದುರಿಸಿತು. ಅನುಭವಿ ಆಟಗಾರ ಹಾಶೀಮ್‌ ಆಮ್ಲಾ ಬೇಗನೆ ಔಟಾದರು. 39 ನಿಮಿಷ ಕ್ರೀಸ್‌ನಲ್ಲಿದ್ದ ಅವರು 32 ಎಸೆತಗಳಲ್ಲಿ 4 ಬೌಂಡರಿ ಸಹಿತ 23 ರನ್‌ ಗಳಿಸಿ ಭುವನೇಶ್ವರ್‌ ಕುಮಾರ್‌ಗೆ ವಿಕೆಟ್‌ ನೀಡಿದರು. ಕ್ವಿಂಟನ್‌ ಡಿ ಕಾಕ್‌ಗೆ (20; 36ಎ, 2ಬೌಂ) ಯಜುವೇಂದ್ರ ಚಾಹಲ್‌ ಅವಕಾಶ ನೀಡಲಿಲ್ಲ.

61ರನ್, 8 ವಿಕೆಟ್‌: ಡಿ ಕಾಕ್ ಔಟಾದಾಗ ಆತಿಥೇಯರ ಖಾತೆಯಲ್ಲಿ ಇದ್ದದ್ದು 51ರನ್‌.  ಮಾರ್ಕ್‌ರಮ್‌ ಬಳಗ ಆ ನಂತರ 61ರನ್‌ ಗಳಿಸುವಷ್ಟರಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡಿತು. ಚಾಹಲ್‌ ಮತ್ತು ಚೈನಾಮನ್‌ ಶೈಲಿಯ ಬೌಲರ್‌ ಕುಲದೀಪ್‌, ಹರಿಣಗಳ ನಾಡಿನ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾದರು.

ಚಾಹಲ್‌, ಜೆ.ಪಿ.ಡುಮಿನಿ (25; 39ಎ, 2ಬೌಂ), ಖಾಯಾ ಜೊಂಡೊ (25; 45ಎ, 2ಬೌಂ), ಕ್ರಿಸ್‌ ಮೊರಿಸ್‌ (14; 10ಎ, 1ಬೌಂ, 1ಸಿ) ಮತ್ತು ಮಾರ್ನ್‌ ಮಾರ್ಕೆಲ್‌ (1) ಅವರ ವಿಕೆಟ್‌ ಉರುಳಿಸಿದರು.

ಕುಲದೀಪ್‌, ಮಾರ್ಕ್‌ರಮ್ (8), ಡೇವಿಡ್‌ ಮಿಲ್ಲರ್‌ (0) ಮತ್ತು ಕಗಿಸೊ ರಬಾಡ (1) ಅವರಿಗೆ ತಳವೂರಲು ಅವಕಾಶ ನೀಡಲಿಲ್ಲ.

ಧವನ್‌ ಅರ್ಧಶತಕ: ಸುಲಭ ಗುರಿ ಬೆನ್ನಟ್ಟಿದ ‍ಪ್ರವಾಸಿ ತಂಡ ನಾಲ್ಕನೇ ಓವರ್‌ನಲ್ಲಿ ರೋಹಿತ್ ಶರ್ಮಾ (15; 17ಎ, 2ಬೌಂ, 1ಸಿ) ವಿಕೆಟ್‌ ಕಳೆದುಕೊಂಡಿತು.

ಆ ನಂತರ ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್ (ಔಟಾಗದೆ 51; 56ಎ, 9ಬೌಂ) ಮತ್ತು ನಾಯಕ ಕೊಹ್ಲಿ (ಔಟಾಗದೆ 46; 50ಎ, 4ಬೌಂ, 1ಸಿ) ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು.

ಆತಿಥೇಯ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಮುರಿಯದ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 93ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT